ಮೈಸೂರು: ಈ ಬಾರಿಯ ಮೈಸೂರು ದಸರಾ ಹಲವು ವೈಶಿಷ್ಟ್ಯಗಳಿಂದಾಗಿ ಗಮನಸೆಳೆದಿದೆ.
11 ದಿನಗಳವರೆಗೆ ನಾಡಹಬ್ಬ ನಡೆಯುವುದು ವಿಶೇಷ. ಗಾಂಧಿ ಜಯಂತಿಯಂದೇ (ಅ.2) ವಿಜಯದಶಮಿ ಮೆರವಣಿಗೆ (ಜಂಬೂಸವಾರಿ) ನಡೆಯಲಿದೆ.
ಈ ಸಲ ದಸರೆಗೂ ಮುನ್ನವೇ ಚಲನಚಿತ್ರೋತ್ಸವ ಮುಕ್ತಾಯವಾಗಿದೆ. ಹಿಂದೆಲ್ಲಾ ಉದ್ಘಾಟನೆಯ ದಿನದಂದೇ ಚಲನಚಿತ್ಸೋತ್ಸವೂ ಆರಂಭಗೊಳ್ಳುತ್ತಿತ್ತು. ಕಲಾಮಂದಿರದಲ್ಲಿ ಚಿತ್ರ ತಾರೆಯರ ದಂಡು ಕಂಡುಬರುತ್ತಿತ್ತು. ಆದರೆ, ಈ ಬಾರಿ ಸೆ.13ರಿಂದ 20ರವರೆಗೆ ಉತ್ಸವ ನಡೆಯಿತು. ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳು ‘ಮಾಲ್ ಆಫ್ ಮೈಸೂರ್’ನ ಐನಾಕ್ಸ್‌ನಲ್ಲಿ ಪ್ರದರ್ಶನ ಕಂಡವು. ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆದ ಯುವಸಂಭ್ರಮ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತು. ನಿತ್ಯವೂ ಸಾವಿರಾರು ಮಂದಿ ಪಾಲ್ಗೊಂಡು ಯುವಪ್ರತಿಭೆಗಳಿಗೆ ಉತ್ತೇಜನ ನೀಡಿದರು.
ನಗರದಲ್ಲಿ 136 ಕಿ.ಮೀ. ರಸ್ತೆ ಹಾಗೂ ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರದ ಸೊಬಗು ಮೇಳೈಸಿದೆ. ಅಲ್ಲಲ್ಲಿ ಮಹಾತ್ಮ ಗಾಂಧೀಜಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಅಂಬೇಡ್ಕರ್, ಸರ್ ಎಂ. ವಿಶ್ವೇಶ್ವರಯ್ಯ, ಬಸವಣ್ಣ ಸೇರಿದಂತೆ ಮಹಾಪುರುಷರ ಕಲಾಕೃತಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿರುವ ಡ್ರೋನ್ ಶೋ, ಏರ್‌ಶೋ, ಪಂಜಿನ ಕವಾಯತು ವೀಕ್ಷಣೆಗೆ ಪಾಸ್ ಕಡ್ಡಾಯಗೊಳಿಸಲಾಗಿದೆ.
ಕುಪ್ಪಣ್ಣ ಉದ್ಯಾನದಲ್ಲಿ ಹೂವುಗಳಲ್ಲಿ ಅರಳಿರುವ ಗಾಂಧಿ ಮಂಟಪ, ಆಪರೇಷನ್ ಸಿಂಧೂರ ಈ ಬಾರಿಯ ಆಕರ್ಷಣೆಯಾಗಿದೆ.
‘ಪಂಚ ಕಾವ್ಯದೌತಣ’ ಶೀರ್ಷಿಕೆಯಲ್ಲಿ ಎಲ್ಲ ಕವಿಗೋಷ್ಠಿಯನ್ನು ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲೇ ಆಯೋಜನೆ ಮಾಡಲಾಗಿದೆ. ನಾಡಗೀತೆ ರಚಿಸಿ 100 ವರ್ಷ ಪೂರೈಸಿದ್ದರಿಂದ ರಾಷ್ಟ್ರಕವಿ ಕುವೆಂಪುಗೆ ನಮಿಸಿಲು, 15ಸಾವಿರಕ್ಕೂ ಹೆಚ್ಚು ಮಂದಿಯ ಕಂಠಗಳಲ್ಲಿ ಆ ಗೀತೆ ಮೊಳಗಲಿದೆ.
ಮೈಸೂರು ಜಿಲ್ಲೆಯವರೇ ಆಗಿರುವ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಿ ಇದು 8ನೇ ಮತ್ತು ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ 5ನೇ ದಸರಾ.
ಸೆ.27 ಹಾಗೂ ಅ.1ರಂದು ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ವೈಮಾನಿಕ ಪ್ರದರ್ಶನ ನಡೆಯಲಿದೆ. ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದಿಂದ ಮರುನಿರ್ಮಾಣಗೊಂಡಿರುವ ವಸ್ತುಪ್ರದರ್ಶನ ಆವರಣದಲ್ಲಿ ‘ದಸರಾ ವಸ್ತುಪ್ರದರ್ಶನ’ ನಡೆಯಲಿದೆ. ಕುಸ್ತಿ ಪಂದ್ಯಗಳು ನಡೆಯುವ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣವನ್ನೂ ನವೀಕರಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ವತಿಯಿಂದ ದಸರಾ ವಸ್ತುಪ್ರದರ್ಶನದ ಉದ್ಘಾಟನೆಯನ್ನು ಸೆ.22ರಂದು ಸಂಜೆ 7ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಮರುನಿರ್ಮಾಣಗೊಂಡಿರುವ ‘ಎ’ ಬ್ಲಾಕ್ ಮಳಿಗೆಗಳ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ ಮಹದೇವಪ್ಪ, ಭಾರತೀಯ ವಾಯು ಮತ್ತು ನೌಕಾ ಸೇನೆ ಮಳಿಗೆ ಉದ್ಘಾಟನೆಯನ್ನು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ನೂತನ ಸಂಗೀತ ಕಾರಂಜಿ ಉದ್ಘಾಟನೆಯನ್ನು ಕಾನೂನು ಸಚಿವ ಎಚ್.ಕೆ. ಪಾಟೀಲ, ಸರ್ಕಾರಿ ಮಳಿಗೆಗಳ ಉದ್ಘಾಟನೆಯನ್ನು ವಸತಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ನೆರವೇರಿಸಲಿದ್ದಾರೆ. ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.