ಮೈಸೂರು: ನಾಡಹಬ್ಬ ದಸರಾ ಸಂಭ್ರಮದಲ್ಲಿ ಭಾಗವಹಿಸಲು ಜನಸಮೂಹ ಮೈಸೂರಿನ ಕಡೆ ಮುಖಮಾಡಿದ್ದು, ಶನಿವಾರ ಸಂಜೆಯಿಂದಲೇ ಸಂಚಾರ ದಟ್ಟಣೆ ಉಂಟಾಯಿತು. ಸುಗಮ ಸಂಚಾರ ವ್ಯವಸ್ಥೆಗೆ ಪೊಲೀಸರು ಹರಸಾಹಸಪಟ್ಟರು.
ಸಂಜೆಯಾಗುತ್ತಿದ್ದಂತೆ ನಗರದಲ್ಲಿ ಜನಜಾತ್ರೆ ಆರಂಭವಾಯಿತು. ಕತ್ತು ಹಾಯಿಸಿದಲ್ಲೆಲ್ಲಾ ವಾಹನಗಳು, ಜನರ ಗುಂಪು ಓಡಾಡಿತು. ಸಂಜೆ 4ಕ್ಕೆ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಏರ್ ಶೋ ಪೂರ್ವಾಭ್ಯಾಸ ಇದ್ದ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಜನದಟ್ಟಣೆ ಹೆಚ್ಚಿತು. ಬಂಬೂ ಬಜಾರ್ ವೃತ್ತದಿಂದ ಅರಮನೆಗೆ ತಲುಪಲು ಪ್ರತಿ ಸಿಗ್ನಲ್‌ನಲ್ಲಿ ಸುಮಾರು ಐದು ನಿಮಿಷ ಕಾಯಬೇಕಾಯಿತು.
ಗನ್‌ಹೌಸ್ ವೃತ್ತ ಹಾಗೂ ಅರಮನೆ ವರಹಾ ಗೇಟ್‌ನಿಂದ ಹಾರ್ಡಿಂಜ್ ವೃತ್ತಕ್ಕೆ ತಲುಪಲು ಅರ್ಧ ಗಂಟೆಗೂ ಹೆಚ್ಚಿನ ಸಮಯ ಬೇಕಾಯಿತು. ಅರಮನೆಯ ಸುತ್ತಲೂ ಪೊಲೀಸ್ ಇಲಾಖೆ ಏಕಮುಖ ಸಂಚಾರ ವ್ಯವಸ್ಥೆ ಮಾಡಿತ್ತು. ಇದರಿಂದ ಸ್ಥಳೀಯ ಜನರು ಹಲವು ಕಡೆ ಕರ್ತವ್ಯ ನಿರತ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ‘ನೂರು ಮೀಟರ್‌ನಲ್ಲಿರುವ ಮನೆಗೆ ಒಂದು ಸುತ್ತು ಹಾಕಬೇಕಾಗುತ್ತದೆ’ ಎಂದು ವೃದ್ಧರೊಬ್ಬರು ಬೇಡಿಕೊಂಡರು. ಪೊಲೀಸರು ಬಿಡದಿದ್ದಾಗ ಸ್ಕೂಟರ್ ತಳ್ಳಿಕೊಂಡು ಏಕಮುಖ ರಸ್ತೆಯಲ್ಲಿ ಸಾಗಿದರು.
ಮೃಗಾಲಯ ರಸ್ತೆ, ಎಂಜಿ ರಸ್ತೆಯಲ್ಲೂ ವಾಹನ ದಟ್ಟಣೆ ಹೆಚ್ಚಾಗಿತ್ತು. ಇನ್ನಿತರೆ ರಸ್ತೆಗಳಲ್ಲಿ ಎರಡೂ ಕಡೆಗಳಲ್ಲೂ ವಾಹನ ಸಂಚಾರಕ್ಕೆ ಅವಕಾಶವಿತ್ತು. ಅಲ್ಲಿಯೂ ವಾಹನ ದಟ್ಟಣೆ ಇತ್ತಾದರೂ, ವಾಹನಗಳು ಹೆಚ್ಚು ಸಮಯ ಬಾಕಿಯಾಗದಂತೆ ಪೊಲೀಸರು ನೋಡಿಕೊಂಡರು. ಸಿಗ್ನಲ್ ಬಿಡಲು ಬೆಂಗಳೂರಿನಂತೆ ಕೃತಕ ವ್ಯವಸ್ಥೆ ಮಾಡಿಕೊಂಡಿದ್ದರಿಂದ ಜನರಿಗೂ ಅನುಕೂಲವಾಯಿತು. ದೇವರಾಜ ಅರಸು ರಸ್ತೆಯಲ್ಲಿ ರಸ್ತೆ ನಡುವೆಯೇ ವಾಹನ ನಿಲ್ಲಿಸಿ ದೀಪಾಲಂಕಾರದ ಫೋಟೊ ತೆಗೆದುಕೊಳ್ಳುತ್ತಿದ್ದ ಕಾರಣ ಸಾರ್ವಜನಿಕರಿಗೆ ತೊಂದರೆಯಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.