ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ನಾಡಿನ ಕಲಾವೈವಿಧ್ಯ ಮತ್ತು ಶ್ರೀಮಂತಿಕೆ ಮೇಳೈಸಲಿವೆ. 259 ಮಹಿಳೆಯರು ಸೇರಿದಂತೆ ಒಟ್ಟು 1,479 ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಒಟ್ಟು 61 ತಂಡಗಳು ಭಾಗವಹಿಸಲಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಕಲಾತಂಡಗಳ ಸಂಖ್ಯೆಯನ್ನು ಕೊಂಚ ಹೆಚ್ಚಿಸಲಾಗಿದೆ. ಈ ಮೂಲಕ ವೈವಿಧ್ಯಮಯ ಕಲಾಪ್ರಪಂಚವನ್ನು ಪರಿಚಯಿಸುವುದಕ್ಕೆ ಮೆರವಣಿಗೆ ಉಪಸಮಿತಿಯು ಕ್ರಮ ವಹಿಸಿದೆ.
ರಾಜ್ಯದಾದ್ಯಂತ ಕಲಾತಂಡಗಳು ಆಗಮಿಸಲಿವೆ. ಈಗಾಗಲೇ ಕೆಲವು ತಂಡಗಳು ಬಂದಿವೆ. ಅಂಬಾವಿಲಾಸ ಅರಮನೆ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ನಡೆಯುವ ಮೆರವಣಿಗೆಯಲ್ಲಿ ಪ್ರತಿಭೆ ಪ್ರದರ್ಶಿಸುತ್ತಾ ಸಾಗುವ ಕಲಾತಂಡಗಳು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಲಿವೆ. ಸುಡು ಬಿಸಿಲಿನಲ್ಲೂ ಐದು ಕಿ.ಮೀ.ಗೂ ಹೆಚ್ಚು ದೂರದವರೆಗೆ ಉತ್ಸಾಹದಿಂದಲೇ ಕಲಾವಿದರು ಪಾಲ್ಗೊಳ್ಳುತ್ತಾರೆ. ಸಾರ್ವಜನಿಕರು, ರಾಜ್ಯದ ಎಲ್ಲ ಪ್ರದೇಶಗಳ ಕಲಾಪ್ರಾಕಾರಗಳನ್ನೂ ವೀಕ್ಷಿಸಲು ಅನುವಾಗುವಂತೆ ಮೆರವಣಿಗೆ ಉಪ ಸಮಿತಿಯಿಂದ ವಿನ್ಯಾಸಗೊಳಿಸಲಾಗುತ್ತಿದೆ. ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳನ್ನು ಅನುಕ್ರಮವಾಗಿ ಜೋಡಿಸಲಾಗಿದೆ.
ಅ.2ರಂದು ಮಧ್ಯಾಹ್ನ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಿದ ಬಳಿಕ ಕಲಾವಿದರು ‘ರಾಜಪಥ’ಕ್ಕೆ ಕಲೋತ್ಸಾಹ ತುಂಬಿ ದಾರಿಯುದ್ದಕ್ಕೂ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಮುಖ್ಯವಾಗಿ ನಂದಿಧ್ವಜ, ನಾದಸ್ವರ, ವೀರಗಾಸೆ, ಪುರವಂತಿಕೆ, ಕೊಂಬುಕಹಳೆ, ಕಂಸಾಳೆ, ಕೀಲುಕುದುರೆ, ಕೋಲಾಟ, ಚಿಟ್ ಮೇಳ, ಕಣಿ ವಾದನ, ಹೂವಿನ ನೃತ್ಯ, ಹೆಜ್ಜೆ ಮೇಳ, ತಮಟೆ– ನಗಾರಿ, ಹಲಗೆ ಮೇಳ, ಯಕ್ಷಗಾನ ಬೊಂಬೆಗಳು ಮೊದಲಾದವು ಕಲಾ ಸೊಬಗನ್ನು ಪರಿಚಯಿಸುತ್ತಾ ಸಾಗಲಿವೆ. ಕಹಳೆಗಳು ಮೊಳಗಿದರೆ, ಡೊಳ್ಳಿನ ಸದ್ದು ಮುಗಿಲುಮುಟ್ವಲಿದೆ. ಪೂಜಾ ಕುಣಿತದ ಕಸರತ್ತು ಮೆರುಗು ಹೆಚ್ಚಿಸಲಿದೆ. ವಿಶೇಷ ಮತ್ತು ವಿಚಿತ್ರ ವೇಷಧಾರಿಗಳು ಆಕರ್ಷಿಸಲಿದ್ದಾರೆ. ಬೇಡರ ವೇಷ, ನವಿಲು ನೃತ್ಯ, ಹಗಲುವೇಷವನ್ನು ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ಪೊಲೀಸ್ ಬ್ಯಾಂಡ್ ಕೂಡ ವಾಹನದಲ್ಲಿ ಕುಳಿತು ಕಾರ್ಯಕ್ರಮ ನೀಡುತ್ತಾ ಸಾಗಲಿದೆ.
ಜಗ್ಗಲಗಿ ಮೇಳ, ಕುಡುಬಿ ಗುಮಟೆ ನೃತ್ಯ, ಜಡೆ ಕೋಲಾಟ, ಕರಬಲ ನೃತ್ಯ, ದೊಣ್ಣೆವರಸೆ, ಗಾರುಡಿಗೊಂಬೆ, ಜೋಗತಿ ನೃತ್ಯ, ಕಂಗೀಲು ಕುಣಿತ, ದಕ್ಷಿಣ ವಲಯ ತಂಡದಿಂದ ಕರಗ ತಪಟ್ಟಂ, ದಾಲಪಟ, ಢಕ್ಕೆ ಕುಣಿತ, ಹೂವಿನ ನೃತ್ಯ, ಸೋಮನ ಕುಣಿತ, ಪಟ ಕುಣಿತ, ಹಾಲಕ್ಕಿ ಸುಗ್ಗಿ ಕುಣಿತ, ಮಹಿಳಾ ವೀರಗಾಸೆ, ಸಿದ್ದಿ ಸಮಾಜದವರ ಧಮಾಮಿ ನೃತ್ಯ, ಕರಡಿ ಮಜಲು, ಕರಗ ನೃತ್ಯ, ಹಕ್ಕಿಪಿಕ್ಕಿ ನೃತ್ಯ, ಮರಗಾಲು ಕುಣಿತ, ವೀರಮಕ್ಕಳ ಕುಣಿತ, ಚಂಡೆ ವಾದನ, ಕಣಿ ವಾದನ, ಶಹನಾಯಿ, ಗೊಂಬೆಕುಣಿತ ಕಲಾತಂಡಗಳು ಪಾಲ್ಗೊಳ್ಳಲಿವೆ.
‘ಹಿಂದಿನ ದಿನವೇ, ಅಂದರೆ ಅ.1ರಂದೇ ಕಲಾ ತಂಡಗಳು ಬಂದು ತಲುಪಲಿವೆ. ಆ ಕಲಾವಿದರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುವುದು. ಉಪಾಹಾರ ಹಾಗೂ ಊಟವನ್ನೂ ಒದಗಿಸಲಾಗುವುದು. ಮೆರವಣಿಗೆ ಮುಗಿದ ನಂತರ, ಬನ್ನಿಮಂಟಪದಿಂದ ಅವರನ್ನು ಪರಿಕರಗಳೊಂದಿಗೆ ಕರೆತರಲು ಬಸ್, ಲಾರಿ ಮೊದಲಾದ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ನಾಡಿನ ಶ್ರೀಮಂತ ಕಲಾಪ್ರಪಂಚವನ್ನು ಪರಿಚಯಿಸುವ ಕೆಲಸವನ್ನು ಮಾಡಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.