ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ರಾಜವಂಶಸ್ಥರ ಖಾಸಗಿ ದರ್ಬಾರ್ ಅಂಬಾವಿಲಾಸ ಅರಮನೆಯಲ್ಲಿ ಇಂದಿನಿಂದ (ಸೆ.22) ಆರಂಭವಾಗಲಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ 11ನೇ ದರ್ಬಾರ್ ನಡೆಸಲಿದ್ದಾರೆ.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಬೆಳಿಗ್ಗೆ 5ರಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಮಧ್ಯಾಹ್ನ 2ರವೆರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದೆ.
ರತ್ನ ಖಚಿತ ಸಿಂಹಾಸನದ ಸಿಂಹ ಜೋಡಣೆಯ ಕಾರ್ಯವು ಬೆಳಿಗ್ಗೆ 5.30ರಿಂದ 5.45ರ ಶುಭಮುಹೂರ್ತದಲ್ಲಿ ನಡೆಯಲಿದ್ದು, ಬೆಳಿಗ್ಗೆ 9.55ರಿಂದ 10.15ರ ಒಳಗೆ ‘ಕಂಕಣ ಧಾರಣೆ’ಯು ನಡೆಯಲಿದೆ. ಯದುವೀರ್ ಚಾಮುಂಡಿ ತೊಟ್ಟಿಯಲ್ಲಿ ಹಾಗೂ ತ್ರಿಷಿಕಾ ಕುಮಾರಿ ದೇವಿ ಒಡೆಯರ್ ಅವರು ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ಧರಿಸುವರು.
ಬೆಳಿಗ್ಗೆ 11.30ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸು ಸವಾರಿ ತೊಟ್ಟಿಗೆ ಬರಲಿದ್ದು, 11.50ಕ್ಕೆ ಯದುವೀರ್ ಅವರು ದರ್ಬಾರ್ ಹಾಲ್‌ನಲ್ಲಿ ಕಳಶ ಪೂಜೆ ನೆರವೇರಿಸುವರು. ನಂತರ ಸಿಂಹಾಸನ ಪೂಜೆ ಮಾಡಿ, ಮಧ್ಯಾಹ್ನ 12.42ರಿಂದ 12.58ರವರೆಗೆ ಸಿಂಹಾಸನ ಅಲಂಕರಿಸಿ, ಖಾಸಗಿ ದರ್ಬಾರ್ ನಡೆಸುವರು ಎಂದು ಅರಮನೆ ಮೂಲಗಳು ತಿಳಿಸಿವೆ.
ನಂತರ ಮಧ್ಯಾಹ್ನ 2.05ರಿಂದ 2.15ರ ಒಳಗೆ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ತರಲಾಗುತ್ತದೆ.
ನಿತ್ಯ ದರ್ಬಾರ್:
ಯದುವೀರ್ ಅವರು ನಿತ್ಯ ಸಂಜೆ 7ರ ಸುಮಾರಿಗೆ ಖಾಸಗಿ ದರ್ಬಾರ್ ನಡೆಸಲಿದ್ದು, 2020ರಿಂದ ರಾಜವಂಶಸ್ಥರನ್ನು ಹೊರತು ಪಡಿಸಿ ಯಾರೊಬ್ಬರಿಗೂ ಪ್ರವೇಶ ಇರುವುದಿಲ್ಲ.
ಸೆ.29ರಂದು ಬೆಳಿಗ್ಗೆ 10.10ರಿಂದ 10.30ರ ಒಳಗೆ ಕನ್ನಡಿ ತೊಟ್ಟಿಯಲ್ಲಿ ಸರಸ್ವತಿ ಪೂಜೆ ಮಾಡುವರು. ಅದೇ ದಿನ ಕಾಳರಾತ್ರಿ ಆಚರಣೆ ಇದ್ದು, ಸೆ.30ರಂದು ದುರ್ಗಾಷ್ಟಮಿ ಪೂಜೆಗಳು ನಡೆಯಲಿವೆ. ಅ.1ರ ಮಹಾನವಮಿಯಂದು ಬೆಳಿಗ್ಗೆ 6ಕ್ಕೆ ಚಂಡಿಹೋಮ ನಡೆಯಲಿದ್ದು, ಬೆಳಿಗ್ಗೆ 9.15ಕ್ಕೆ ಪೂರ್ಣಾಹುತಿ ಇರಲಿದೆ.
ಬೆಳಿಗ್ಗೆ 6.45ಕ್ಕೆ ಪಟ್ಟದ ಆನೆ, ಕುದುರೆ ಹಾಗೂ ಹಸು ಆನೆ ಬಾಗಿಲಿಗೆ ಬರಲಿವೆ. 7.30ರಿಂದ 7.42ರಲ್ಲಿ ಖಾಸಾ ಆಯುಧಗಳಿಗೆ ಪೂಜೆ ಸಲ್ಲಿಸಲು ಕೋಡಿ ಸೋಮೇಶ್ವರ ಸ್ವಾಮಿ ದೇಗುಲಕ್ಕೆ ಒಯ್ಯಲಾಗುತ್ತದೆ. ನಂತರ 8.40ಕ್ಕೆ ಯದುವೀರ್ ವಾಪಸಾಗಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10.55ರಿಂದ 11.15ರೊಳಗೆ ‘ಆಯುಧಪೂಜೆ’ ನೆರವೇರಿಸುವರು.
ದರ್ಬಾರ್ ನಂತರ ಸಿಂಹ ವಿಸರ್ಜನೆ ಹಾಗೂ ಕಂಕಣ ವಿಸರ್ಜನೆಯು ನಡೆಯಲಿದೆ. ಅಂಬಾವಿಲಾಸ ತೊಟ್ಟಿಯಲ್ಲಿ ಪೂಜೆ ನೆರವೇರಿಸುವರು.
ಮುಂಜಾನೆ ಸಿಂಹ ಜೋಡಣೆ ನಿತ್ಯ ಸಂಜೆ 7ಕ್ಕೆ ದರ್ಬಾರ್ ಪಟ್ಟದಾನೆ ಆಗಿ ‘ಶ್ರೀಕಂಠ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.