
ಮೈಸೂರು: ದಸರಾ ರಂಗು ಹೆಚ್ಚಿಸುತ್ತಿರುವ ‘ಯುವ ಸಂಭ್ರಮ’ದಲ್ಲಿ ಶುಕ್ರವಾರ ಸರ್ಕಾರದ ‘ಗ್ಯಾರಂಟಿ’ಗಳ ಸಂಭ್ರಮ ಕುರಿತ ನೃತ್ಯ ರೂಪಕ ಗಮನ ಸೆಳೆಯಿತು. ಶಕ್ತಿ, ಗೃಹ ಜ್ಯೋತಿ, ಅನ್ನಭಾಗ್ಯ, ಗೃಹ ಲಕ್ಷ್ಮಿ, ಯುವ ನಿಧಿ ಯೋಜನೆಗಳ ಫಲಕಗಳು ಜಗಮಗಿಸುವ ವೇದಿಕೆಯಲ್ಲಿ ರಾರಾಜಿಸಿದವು.
ರಾಷ್ಟ್ರೀಯ ಭಾವೈಕ್ಯತೆ, ಪರಸರ ಸಂರಕ್ಷಣೆ, ಕರ್ನಾಟಕ ಜಾನಪದ ಸಂಸ್ಕೃತಿ, ವೀರಯೋಧರ ಗಾಥೆ, ಜಲ ಮತ್ತು ಜನಪದರ ಬಗ್ಗೆ ಕೂಗಿ ಹೇಳುವ ನೃತ್ಯ ರೂಪಕಗಳು ಮಾನಸಗಂಗೋತ್ರಿಯ ಬಯಲು ರಂಗಮಂದಿರವನ್ನು ಆವರಿಸಿ ನೋಡುಗರನ್ನು ವಿಸ್ಮಿತರನ್ನಾಗಿಸಿದವು.
ಮೈಸೂರು ಸಿಟಿ ಮೈನಾರಿಟಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ‘ಸರ್ಕಾರದ ಗ್ಯಾರಂಟಿ ಯೋಜನೆಗಳು’ ಹೇಗೆ ಜೀವನ ಸುಧಾರಿಸುತ್ತಿವೆ ಎಂಬುದನ್ನು ಕಟ್ಟಿಕೊಟ್ಟರೆ, ‘ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ಸ್’ ವಿದ್ಯಾರ್ಥಿಗಳು ಜಾನಪದ ನೃತ್ಯಗಳ ಝಲಕ್ ನೀಡಿದರು. ಡೊಳ್ಳು, ಕಂಸಾಳೆ, ನಗಾರಿಗಳ ಅಬ್ಬರದಲ್ಲಿ ಮಹಿಷಾಸುರ ಮರ್ದಿನಿಯ ರೂಪಕವನ್ನು ಜೋಡಿಸಿದ್ದರು. ಇದೇ ಮಾದರಿಯಲ್ಲಿ ತಿ.ನರಸೀಪುರದ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ನೃತ್ಯಿಸಿದರು.
ಬೆಂಗಳೂರಿನ ಕೆಂಗೇರಿಯ ಶ್ರೀಗುರು ಸಾಯಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ‘ಜೈ ಶ್ರೀರಾಮ್’ ಗೀತೆಗೆ ಹೆಜ್ಜೆ ಹಾಕಿ, ಅಯೋಧ್ಯೆಯ ಬಾಲರಾಮ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಗೌರವ ಸಲ್ಲಿಸಿದರೆ, ಶಕ್ತಿ ನಗರದ ಅಧ್ಯಯನ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ‘ಉಳುವ ಯೋಗಿಯ ನೋಡಲ್ಲಿ’’, ಭೂಮಿತಾಯಿ ಚೊಚ್ಚಲ ಮಗ ಚಿತ್ರದ ‘ರೈತ ರೈತ ಅನ್ನ ಕೊಡುವ ದಾತ..’ ಸೇರಿದಂತೆ ರೈತಗೀತೆಗಳಿಗೆ ಹೆಜ್ಜೆ ಹಾಕಿ, ಕೃಷಿ ಪ್ರೀತಿ ಸಾರಿದರು.
ಅಂಗವಿಕಲ ಮಕ್ಕಳು ತೆರೆದಿಟ್ಟ ಭಾವುಕ ಲೋಕ:
ಜನತಾನಗರದ ವಿಕಲ ಚೇತನ ಅಭ್ಯುದಯ ಸೇವಾ ಸಂಸ್ಥೆಯ ಮಕ್ಕಳು ‘ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ’ ಹಾಗೂ ಪುಟ್ಟೀರಮ್ಮ ಕಿವುಡು ಹೆಣ್ಣು ಮಕ್ಕಳ ವಸತಿ ಶಾಲೆಯ ಚಿಣ್ಣರು ‘ಪೌರಾಣಿಕ’ ಕಥನ ಹೇಳಿ ಭಾವುಕ ಲೋಕ ಸೃಷ್ಟಿಸಿದರು.
ಹುಣಸೂರಿನ ಟ್ಯಾಲೆಂಟ್ ಎಜುಕೇಶನ್ ಟ್ರಸ್ಟ್ ವಿದ್ಯಾರ್ಥಿಗಳು ಪೌರಾಣಿಕ ನೃತ್ಯ ಮಾಡಿದರೆ, ಗುಂಡ್ಲುಪೇಟೆಯ ಗೌತಮ ಪ್ರಥಮ ದರ್ಜೆ ಕಾಲೇಜಿನವರು ‘ಕನ್ನಡ ನಾಡು ನುಡಿ’, ಕಾವೇರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ‘ಪೌರಕಾರ್ಮಿಕರ’ ಕಾರುಣ್ಯದ ಸೇವೆಯನ್ನು ತೋರಿದರು. 59 ಕಾಲೇಜುಗಳ ನೃತ್ಯ ಪ್ರದರ್ಶನವನ್ನು ವಿವಿಧೆಡೆಯಿಂದ ಬಂದಿದ್ದ ಯುವ ಸಮೂಹ ವೀಕ್ಷಿಸಿತು. ಕುಣಿದು ಕುಪ್ಪಳಿಸಿತು.
ಅಂಗವಿಕಲ ಮಕ್ಕಳು ತೆರೆದಿಟ್ಟ ಭಾವುಕ ಲೋಕ ರೈತಗೀತೆಗಳಿಗೆ ಹೆಜ್ಜೆ ಹಾಕಿ ಕೃಷಿಪ್ರೀತಿ ತೋರಿದರು ಪೌರಕಾರ್ಮಿಕರ ಸೇವೆ ಸ್ಮರಿಸಿದ ವಿದ್ಯಾರ್ಥಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.