
ನಂಜನಗೂಡು: ‘ನಗರದ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚುವರಿ ಡಯಾಲಿಸಿಸ್ ಯೂನಿಟ್ ಕೇಂದ್ರ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಇಬ್ಬರು ಸ್ತ್ರೀರೋಗ ತಜ್ಞ ವೈದ್ಯರನ್ನು ನೇಮಕ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಶೀಘ್ರವೇ ಮಂಜೂರಾಗಲಿದೆ’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ತಾಲ್ಲೂಕಿನ ಶಿರಮಳ್ಳಿಯಲ್ಲಿ ಮಂಗಳವಾರ ಡಿಜಿಟಲ್ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ರೈತರಿಗೆ ಉಂಟಾಗಿರುವ ತೊಂದರೆಯ ಬಗ್ಗೆ ಹಾಗೂ ಕಾಡು ಪ್ರಾಣಿಗಳ ತಡೆಗಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಾಗಿದ್ದು, ಅರಣ್ಯ ಸಚಿವರು ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಶೀಘ್ರದಲ್ಲಿ ಬ್ಯಾರಿಕೇಡ್ ನಿರ್ಮಾಣ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳನ್ನು ಸೆರೆ ಹಿಡಿಯಲು ಹೆಚ್ಚುವರಿ ಬೋನ್ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ. ತಾಲ್ಲೂಕಿನ ಗ್ರಾಮಗಳಲ್ಲಿ ಶಿಥಿಲಗೊಂಡ ಶಾಲೆಗಳ ದುರಸ್ತಿ ಕಾರ್ಯಕ್ಕೆ ಅನುದಾನವನ್ನು ಕೊಡುವಂತೆ ಮನವಿ ಮಾಡಿದ್ದೇನೆ ಶೀಘ್ರದಲ್ಲಿ ಅನುದಾನ ಮಂಜೂರಾಗುವ ನಿರೀಕ್ಷೆ ಇದೆ’ ಎಂದು ಹೇಳಿದರು.
‘ಶಕ್ತಿ ಯೋಜನೆ ಜಾರಿಯಾದ ನಂತರ ಬಸ್‌ಗಳ ಸಂಖ್ಯೆ ಕಡಿಮೆಯಾಗಿ ಜನರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಸಾರಿಗೆ ಸಚಿವರಿಗೆ ಮನವರಿಕೆ ಮಾಡಲಾಗಿದ್ದು, ತಾಲ್ಲೂಕು ಘಟಕಕ್ಕೆ ಹೆಚ್ಚುವರಿಯಾಗಿ 60 ಬಸ್‌ಗಳನ್ನು ನೀಡಲಿದ್ದು ಶೀಘ್ರವಾಗಿ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗಿದೆ. ತಾಲ್ಲೂಕಿನ ಶಿರಮಳ್ಳಿ ಗ್ರಾಮದಲ್ಲಿ ₹ 8 ಲಕ್ಷ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಲಾಗಿದೆ’ ಎಂದರು.
‘ಗ್ರಂಥಾಲಯದಲ್ಲಿ ಇಂಟರ್‌ನೆಟ್ ಸೌಲಭ್ಯ ಸೇರಿದಂತೆ ಸುಮಾರು 1,700ಕ್ಕೂ ಅಧಿಕ ಪುಸ್ತಕಗಳ ಸೌಲಭ್ಯವನ್ನು ಗ್ರಂಥಾಲಯದಲ್ಲಿ ಕಲ್ಪಿಸಲಾಗಿದೆ. ದಿನಪತ್ರಿಕೆ ವೃತ್ತ ಪತ್ರಿಕೆಗಳ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಗ್ರಂಥಾಲಯದಲ್ಲಿ ಇಂಟರ್‌ನೆಟ್ ಸೌಲಭ್ಯ ಇರುವುದರಿಂದ ರೈತರು ಸಹ ಯೂ ಟ್ಯೂಬ್ ಮೂಲಕ ಕೃಷಿಗೆ ಸಂಬಂಧಪಟ್ಟ ಕೃಷಿ ವಿಜ್ಞಾನಿಗಳ ಅನುಭವಗಳನ್ನು ವೀಕ್ಷಿಸಬಹುದು. ಸಾರ್ವಜನಿಕರು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಡಿಜಿಟಲ್ ಗ್ರಂಥಾಲಯದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾ.ಪಂ ಇಒ ರಾಜೇಶ್, ಕಾಂಗ್ರೆಸ್ ಮುಖಂಡ ಕಳಲೆ ಕೇಶವಮೂರ್ತಿ, ದೇಬೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್, ನಂಜುಂಡಸ್ವಾಮಿ, ಮಹದೇವ ಶೆಟ್ಟಿ, ಮಹದೇವು, ಕಾಳಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.