
ಸಿದ್ದರಾಮಯ್ಯ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಾದ ಮೈಸೂರು ಜಿಲ್ಲೆಯಲ್ಲಿ ‘ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿ’ ಒಂದೂ ಇಲ್ಲ ಎಂಬ ಅಂಶ ಹೊರಬಿದ್ದಿದೆ. ಇದು, ಈ ‘ಸಾಮಾಜಿಕ ಪಿಡುಗು’ ನಿಂತಿಲ್ಲದಿರುವುದಕ್ಕೆ ಕನ್ನಡಿ ಹಿಡಿದಿದೆ.
‘ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿಗಳನ್ನು ಉತ್ತೇಜಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಲಾ ₹25ಸಾವಿರ ಬಹುಮಾನ ನೀಡಲಾಗುವುದು’ ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಇದಕ್ಕಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅರ್ಜಿ ಆಹ್ವಾನಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಮಾಹಿತಿಯನ್ನೂ ಕೊಡಿಸಲಾಗಿತ್ತು. ಅರ್ಜಿ ಸಲ್ಲಿಸಿ ಘೋಷಿಸಿಕೊಳ್ಳಲು ಜನವರಿ 30 ಕೊನೆಯ ದಿನವಾಗಿತ್ತು. ಗಡುವು ಮುಗಿದು ಫೆಬ್ರುವರಿಯೇ ಕಳೆದಿದ್ದರೂ ಜಿಲ್ಲೆಯ ಯಾವೊಂದು ಪಂಚಾಯಿತಿಯಿಂದಲೂ ಅರ್ಜಿ ಸಲ್ಲಿಕೆಯಾಗಿಲ್ಲ.
ಇದು ‘ಬಾಲ್ಯವಿವಾಹ ಮುಕ್ತ ಜಿಲ್ಲೆ’ ಎಂದು ಘೋಷಿಸಿಕೊಳ್ಳುವುದಕ್ಕೂ ತೊಡಕಾಗಿದೆ.
256 ಗ್ರಾಮ ಪಂಚಾಯಿತಿ
ಜಿಲ್ಲೆಯಲ್ಲಿ ಒಟ್ಟು 256 ಗ್ರಾಮ ಪಂಚಾಯಿಗಳಿವೆ. ಇವುಗಳಲ್ಲಿ ಯಾವ ಪಂಚಾಯಿತಿಯೂ ‘ಬಾಲ್ಯವಿವಾಹ ಮುಕ್ತ’ ಎಂದು ಘೋಷಿಸಿಕೊಳ್ಳಲು ಮುಂದೆ ಬಂದಿಲ್ಲ. ಪಂಚಾಯಿತಿ ವ್ಯಾಪ್ತಿಯ ಒಂದಿಲ್ಲೊಂದು ಗ್ರಾಮದಲ್ಲಿ ಬಾಲ್ಯವಿವಾಹ ನಡೆದಿರುವುದು ಇದಕ್ಕೆ ಕಾರಣ. ಇತರ ಹಲವು ಜಿಲ್ಲೆಗಳಿಂದಲೂ ಅರ್ಜಿಗಳು ಸಲ್ಲಿಕೆಯಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಮಾನದಂಡವೇನು?
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ವರ್ಷದಲ್ಲಿ ಬಾಲ್ಯ ವಿವಾಹ ನಡೆದಿರಬಾರದು. ಈ ಅವಧಿಯಲ್ಲಿ, ಬಾಲ್ಯ ವಿವಾಹದಿಂದ ರಕ್ಷಿಸಲಾದ ಮಕ್ಕಳ ಶಿಕ್ಷಣ ಮುಂದುವರಿಕೆಗೆ ಪ್ರೋತ್ಸಾಹಿಸಿರಬೇಕು. ಪಂಚಾಯಿತಿಯಿಂದ ನಿಯಮಿತವಾಗಿ ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗೆ ಕಾವಲು ಸಮಿತಿ ಅಥವಾ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ನಡೆಸಿರಬೇಕು. ಗ್ರಾ.ಪಂ. ಅಭಿವೃದ್ಧಿ ಯೋಜನೆಯಲ್ಲಿ ಬಾಲ್ಯವಿವಾಹ ನಡೆಯದಂತೆ ಯೋಜನೆ ರೂಪಿಸಿರುವ ಬಗ್ಗೆ ದಾಖಲೆ ಇರಬೇಕು ಎಂಬಿತ್ಯಾದಿ ಮಾನದಂಡಗಳನ್ನು ಬಹುಮಾನಕ್ಕಾಗಿ ನಿಗದಿಪಡಿಸಲಾಗಿದೆ. ಆಯ್ಕೆ ಪ್ರಕ್ರಿಯೆಯನ್ನು ರಾಜ್ಯ ಮಟ್ಟದಲ್ಲೇ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
‘ಬಾಲ್ಯವಿವಾಹ ತಡೆಗಾಗಿ ಸರ್ಕಾರ ಕೈಗೊಂಡಿರುವ ಪ್ರೋತ್ಸಾಹದಾಯಕ ಕ್ರಮವಿದು. ಬಾಲ್ಯದಲ್ಲೇ ಮದುವೆ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮಾಹಿತಿ ಆಧರಿಸಿ ತಡೆಯುವ ಕೆಲಸವನ್ನು ಮಾಡುತ್ತಿದ್ದೇವೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯೋಗೇಶ್ ಎನ್.ಟಿ. ಪ್ರತಿಕ್ರಿಯಿಸಿದರು.
ಜಿಲ್ಲೆಯಲ್ಲಿ 2024ರಲ್ಲಿ 224 ಬಾಲ್ಯವಿವಾಹ ತಡೆಯಲಾಗಿತ್ತು. ಆದಾಗ್ಯೂ 56 ಮದುವೆ ನಡೆದಿವೆ. 2025ರಲ್ಲಿ 268 ಬಾಲ್ಯ ವಿವಾಹ ತಡೆದಿದ್ದು, 24 ಮದುವೆ ನಡೆದಿವೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಗ್ರಾ.ಪಂ.ಗಳಿಂದ ಈವರೆಗೆ ಒಂದು ಅರ್ಜಿಯೂ ಬಂದಿಲ್ಲ. ಹೀಗಾಗಿ, ಪೊಲೀಸ್ ಠಾಣೆಗಳಿಂದ ಮಾಹಿತಿ ಕೇಳಿದ್ದೇವೆ. ಅಲ್ಲಿ ಮಾಹಿತಿ ಸಿಕ್ಕರೆ ಪ್ರಸ್ತಾವ ಸಲ್ಲಿಸಲಾಗುವುದು.– ಯೋಗೇಶ್ ಎನ್.ಟಿ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಮೈಸೂರು
ಬಾಲ್ಯ ವಿವಾಹದ ದುಷ್ಪರಿಣಾಮ ಅಪಾರ. ಇದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮದ ಅಗತ್ಯವಿದೆ.– ಎಂ.ಎಲ್.ಪರಶುರಾಮ್, ನಿರ್ದೇಶಕ, ಒಡನಾಡಿ ಸೇವಾ ಸಂಸ್ಥೆ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.