ADVERTISEMENT

ಮೈಸೂರು: ಜಿಲ್ಲಾ ರೈತ ಸಮಾವೇಶ 23ರಂದು

ಕೆ.ಎಸ್. ಪುಟ್ಟಣ್ಣಯ್ಯ ಪ್ರತಿಮೆ ಅನಾವರಣ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 4:58 IST
Last Updated 5 ಡಿಸೆಂಬರ್ 2025, 4:58 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಮೈಸೂರು: ‘ಕರ್ನಾಟಕ ರಾಜ್ಯ ರೈತ ಸಂಘದಿಂದ ತಾಲ್ಲೂಕಿನ ಇಲವಾಲದ ಸಂತೆಮಾಳದಲ್ಲಿ ಡಿ.23ರಂದು ಬೆಳಿಗ್ಗೆ 11ಕ್ಕೆ ‘ಬೃಹತ್‌ ಜಿಲ್ಲಾ ರೈತ ಸಮಾವೇಶ’ ಹಮ್ಮಿಕೊಳ್ಳಲಾಗಿದೆ’ ಎಂದು ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

‘ಅಂದು ನಾಡು ಕಂಡ ಅಪ್ರತಿಮ ರೈತಪರ ಹೋರಾಟಗಾರ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಅವರ ಜನ್ಮದಿನವೂ ಹೌದು. ಅಂದೇ ರೈತ ದಿನಾಚರಣೆಯೂ ಇದೆ. ಈ ಕಾರಣದಿಂದ ಅವರ ಪ್ರತಿಮೆಯನ್ನೂ ಅಲ್ಲಿ ಅನಾವರಣ ಮಾಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ನಿರ್ಣಯಗಳನ್ನು ಕೈಗೊಳ್ಳಲಾಗುವುದು’ ಎಂದು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸಂಘದ ಪದಾಧಿಕಾರಿಗಳು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಘಗಳ 5ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವರು’ ಎಂದು ಹೇಳಿದರು.

ADVERTISEMENT

‘ರೈತ ಪರವಾದ ಯೋಜನೆಗಳನ್ನು ರೂಪಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ’ ಎಂದು ತಿಳಿಸಿದರು.

ಹಕ್ಕೊತ್ತಾಯಗಳನ್ನು ಈಡೇರಿಸಬೇಕು: 

‘ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿರುವಂತೆ, ಎಲ್ಲ ಕೃಷಿ ಉತ್ಪನ್ನಗಳಿಗೆ ಎಂ.ಎಸ್. ಸ್ವಾಮಿನಾಥನ್ ವರದಿಯ ಶಿಫಾರಸಿನ ಅನ್ವಯ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೊಳಿಸಬೇಕು. ಐತಿಹಾಸಿಕ ದೆಹಲಿ ರೈತ ಆಂದೋಲನದಲ್ಲಿ ಮುಂದಿಟ್ಟಿದ್ದ ಎಲ್ಲ ಹಕ್ಕೊತ್ತಾಯಗಳನ್ನೂ ಈಡೇರಿಸಬೇಕು’ ಎಂದು ಒತ್ತಾಯಿಸಿದರು.

‘ರೈತ ವಿರೋಧಿ ಕರಾಳ ಕೃಷಿ ಕಾಯ್ದೆಯ ತದ್ರೂಪವಾಗಿರುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆ–2025, ಬೀಜ ಕಾಯ್ದೆ–2025, ವಿದ್ಯುತ್‌ಕಾಯ್ದೆ–2025 ವಾಪಸ್ ಪಡೆಯಬೇಕು. ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂಬ ತೀರ್ಮಾನಕ್ಕೆ ಸರ್ಕಾರ ಬರಬೇಕು. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಕೇಂದ್ರವು ಅಮೆರಿಕ ಜೊತೆ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಬಾರದು. ಮುಸುಕಿನ ಜೋಳ, ಸಕ್ಕರೆ, ಹಾಲಿನ ಉತ್ಪನ್ನ, ಹತ್ತಿ, ಎಣ್ಣೆಯನ್ನು ಆಮದು ಮಾಡಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ರೈತರ ಸಾಲವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ 50ರ ಅನುಪಾತದಲ್ಲಿ ಮನ್ನಾ ಮಾಡಬೇಕು. ಶೂನ್ಯ ಬಡ್ಡಿ ದರದಲ್ಲಿ ಹೊಸದಾಗಿ ಸಾಲ ನೀಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಇದ್ದರು.

60 ವರ್ಷ ದಾಟಿದ ಎಲ್ಲ ಕೃಷಿಕರಿಗೆ ₹ 5ಸಾವಿರ ಪಿಂಚಣಿ ನೀಡಬೇಕು ಕೇರಳ ಮಾದರಿ ಋಣ ಮುಕ್ತ ಕಾಯ್ದೆ ಜಾರಿಗೊಳಿಸಬೇಕು

-ಬಡಗಲಪುರ ನಾಗೇಂದ್ರ ಅಧ್ಯಕ್ಷ ರಾಜ್ಯ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.