ADVERTISEMENT

ಮೈಸೂರು | ಕುಡಿಯುವ ನೀರಿಗೆ ಸಮಸ್ಯೆ ಆಗದಿರಲಿ: ಸಚಿವ ಎಚ್.ಸಿ. ಮಹದೇವಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 3:21 IST
Last Updated 3 ಮಾರ್ಚ್ 2026, 3:21 IST
ಡಾ. ಎಚ್.ಸಿ. ಮಹದೇವಪ್ಪ
ಡಾ. ಎಚ್.ಸಿ. ಮಹದೇವಪ್ಪ   

ಮೈಸೂರು: ‘ಬೇಸಿಗೆ ಪ್ರಾರಂಭವಾಗುತ್ತಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ ಸಮಿತಿ ಕ್ರಮ ವಹಿಸಬೇಕು. ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ನೀರಿಗೆ ತೊಂದರೆ ಉಂಟಾಗಬಹುದಾದ ಗ್ರಾಮಗಳನ್ನು ಪಟ್ಟಿ ಮಾಡಿಕೊಳ್ಳಬೇಕು’ ಎಂದರು.

‘ಕಳೆದ ಬಾರಿ ಕೊರೆಯಲಾಗಿರುವ ಹಾಗೂ ಲಭ್ಯವಿರುವ ಬೋರ್‌ವೆಲ್‌ಗಳ ಸ್ಥಿತಿಗತಿ ಪರಿಶೀಲಿಸಬೇಕು. ನೀರು ಲಭ್ಯವಿರುವ ಖಾಸಗಿ ಬೋರ್‌ವೆಲ್ ಪಟ್ಟಿ ಮಾಡಿಕೊಳ್ಳಬೇಕು. ಕುಡಿಯುವ ನೀರಿನ ತೊಂದರೆಯಾದ ತಕ್ಷಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೆ ತರಬೇಕು. ಬೇಸಿಗೆ ಕಾಲದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದ್ದು, ವೈದ್ಯಾಧಿಕಾರಿಗಳು ರೋಗ ಹರಡದಂತೆ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಯೋಜನೆ ರೂಪಿಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

ಶಾಸಕ ತನ್ವೀರ್ ಸೇಠ್ ಮಾತನಾಡಿ, ‘ಜೆಜೆಎಂ ಹಾಗೂ ಎಂವಿಎಸ್‌ ಯೋಜನೆಯಡಿ ಒದಗಿಸಲಾಗುತ್ತಿರುವ ಕುಡಿಯುವ ನೀರಿನ ಯೋಜನೆಗಳ ಕಾರ್ಯನಿರ್ವಹಣೆಯ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಮುಂದೆ ಬರಗಾಲ ಉಂಟಾದರೆ ವಹಿಸಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ಸಭೆ ನಡೆಸಿ ಬೇಕಿರುವ ಅನುದಾನದ ಬಗ್ಗೆ ವರದಿ ಸಿದ್ಧಪಡಿಸಬೇಕು’ ಎಂದರು.

ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಮಹೇಶ್, ‘ಅಣೆಕಟ್ಟಿನಲ್ಲಿ ನೀರಿನ ಲಭ್ಯತೆ ಇದೆ. ಹೀಗಾಗಿ, ಮಳೆ ಬಾರದಿದ್ದರೂ ಜೂನ್ ಅಂತ್ಯದವರೆಗೆ ಕುಡಿಯುವ ನೀರಿಗೆ ತೊಂದರೆ ಆಗುವುದಿಲ್ಲ. ಮೇ ಆರಂಭದಲ್ಲಿ ಮಳೆ ನಿರೀಕ್ಷಿಸಲಾಗಿದೆ’ ಎಂದು ಹೇಳಿದರು.

ನಗರ ಯೋಜನಾ ನಿರ್ದೇಶಕಿ ಪ್ರಿಯದರ್ಶಿನಿ ಮಾತನಾಡಿ, ‘ರಮ್ಮನಳ್ಳಿ, ಬೋಗಾದಿ, ಕಡಕೊಳ ಹಾಗೂ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿ ಬೇಕಿರುವ 13 ಎಂಎಲ್‌ಡಿ ನೀರಿಗೆ ಕಬಿನಿ ಯೋಜನೆಯಡಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಶಾಸಕ ಡಿ.ರವಿಶಂಕರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಜಿ.ಪಂ. ಸಿಇಒ ಎಸ್.ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.