ADVERTISEMENT

9ಸಾವಿರ ಮಂದಿಗೆ ನಾಯಿ ಕಡಿತ

ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ; ರೇಬಿಸ್‌ ಕಾಯಿಲೆಯ ಆತಂಕ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 7:07 IST
Last Updated 11 ಜುಲೈ 2025, 7:07 IST
ನಾಯಿ ಕಡಿತ 
ನಾಯಿ ಕಡಿತ    

ಮೈಸೂರು: ಕಳೆದ ಆರು ತಿಂಗಳಲ್ಲಿ ಜಿಲ್ಲೆಯ 9,428 ಮಂದಿ ನಾಯಿ ಕಡಿತದಿಂದ ಚಿಕಿತ್ಸೆಗೆ ಒಳಗಾಗಿದ್ದಾರೆ. ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ರೇಬಿಸ್‌ ಕಾಯಿಲೆಯ ಆತಂಕ ಮನೆ ಮಾಡಿದೆ.

ಈಚೆಗೆ ನಂಜನಗೂಡಿನ ಹುಲ್ಲಹಳ್ಳಿ ಗ್ರಾಮದಲ್ಲಿ ಒಂದೇ ದಿನ 20ಕ್ಕೂ ಅಧಿಕ ಮಂದಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿತ್ತು. ಶಾಲೆಯಿಂದ ಮನೆಗೆ ತೆರಳುತ್ತಿದ್ದ ಮಕ್ಕಳು, ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಿದ್ದವರನ್ನೂ ಬಿಡದೇ ಅಟ್ಟಾಡಿಸಿ ಕಚ್ಚಿದ್ದವು.

ಆರೋಗ್ಯ ಇಲಾಖೆ ಮಾಹಿತಿಯಂತೆ 1ರಿಂದ 12 ವರ್ಷದೊಳಗಿನ 1,763 ಮಕ್ಕಳು, 13ರಿಂದ 18 ವರ್ಷದೊಳಗಿನ 840 ಮಕ್ಕಳು ಹಾಗೂ 18 ವರ್ಷ ಮೇಲ್ಪಟ್ಟ 6,825 ಮಂದಿ ಕಳೆದ ಆರು ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ನಾಯಿಗಳ ಕಡಿತಕ್ಕೆ ಒಳಗಾಗಿದ್ದಾರೆ. ಅವರೆಲ್ಲರೂ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಅಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿಯೂ 114 ಮಂದಿ ಚಿಕಿತ್ಸೆ ಪಡೆದಿದ್ದಾರೆ.

ADVERTISEMENT

ರೇಬಿಸ್‌ ಆತಂಕ: ‘ನಾಯಿಗಳು ರೇಬಿಸ್ ಸೋಂಕು ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸೋಂಕು ಪೀಡಿತ ನಾಯಿಗಳ ಜೊಲ್ಲಿನ ಸಂಪರ್ಕದಿಂದ, ತೆರೆದ ಚರ್ಮದ ಮೇಲೆ ಅವು ನೆಕ್ಕುವುದರಿಂದ, ಪರಚುವಿಕೆಯಿಂದ ಹಾಗೂ ಕಚ್ಚುವುದರಿಂದ ಈ ಸೋಂಕು ಮನುಷ್ಯರಿಗೂ ಹರಡುತ್ತದೆ. ಹುಚ್ಚುನಾಯಿ ಕಡಿತದಿಂದ ಮಾರಣಾಂತಿಕ ರೇಬಿಸ್ ಸೋಂಕು ಹರಡುವ ಪ್ರಮಾಣ ಶೇ 97ರಷ್ಟಿದ್ದು, ನಾಯಿಯಿಂದ ಕಚ್ಚಿಸಿಕೊಂಡ ಪ್ರತಿಯೊಬ್ಬರೂ ರೇಬಿಸ್‌ ನಿರೋಧಕ ಲಸಿಕೆ ಹಾಕಿಕೊಳ್ಳುವುದು ಅತ್ಯಗತ್ಯ’ ಎನ್ನುತ್ತಾರೆ ತಜ್ಞರು.

ಸಿಬ್ಬಂದಿ ಕೊರತೆ: ‘ಮೈಸೂರು ನಗರದಲ್ಲಿ 2011ರ ಜಾನುವಾರು ಗಣತಿ ಅನ್ವಯ 25ಸಾವಿರ ನಾಯಿಗಳಿದ್ದವು. ಅವುಗಳ ಸಂತಾನಹರಣ ಚಿಕಿತ್ಸೆಗೆಂದು ಪಾಲಿಕೆಯಲ್ಲಿರುವ ಶ್ವಾನ ಸಂತಾನಹರಣ ಪಡೆಯಲ್ಲಿ ಲಭ್ಯವಿರುವ ಸಿಬ್ಬಂದಿ ಕೇವಲ ಇಬ್ಬರು ಮಾತ್ರ, ಒಂದು ವಾಹನವನ್ನು ಈ ಪಡೆಯ ಕಾರ್ಯಾಚರಣೆಗೆ ನೀಡಿದ್ದು ಒಂದು ದಿನದಲ್ಲಿ ಹೆಚ್ಚೆಂದರೆ 7ರಿಂದ 8 ನಾಯಿಗಳನ್ನು ಇವರು ಶಸ್ತ್ರ ಚಿಕಿತ್ಸೆಗೆ ಒಳಪಡಿಸುತ್ತಿದ್ದಾರೆ.

‘ಇದೇ ತಂಡ ‘ಪ್ರಾಣಿಗಳ ಸಂತಾನ ನಿಯಂತ್ರಣ’ ಎಂಬ ಯೋಜನೆ ಅನ್ವಯ ಜಿಲ್ಲೆಯಲ್ಲಿಯೂ ಕಾರ್ಯಾಚರಣೆ ನಡೆಸುತ್ತದೆ. ಸಿಬ್ಬಂದಿ ಕೊರತೆ ಬೀದಿ ನಾಯಿಗಳ ನಿಯಂತ್ರಣದಲ್ಲಿ ದೊಡ್ಡ ಸವಾಲಾಗಿದೆ’ ಎಂದು ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್‌ ತಿಳಿಸಿದರು.

‘ಆಯಾ ತಾಲ್ಲೂಕಿನ ನಗರಸಭೆ, ಪುರಸಭೆಗಳು ತಮ್ಮದೇ ಬೀದಿ ನಾಯಿಗಳ ನಿಯಂತ್ರಣ ಕಾರ್ಯಕ್ರಮಗಳನ್ನು ಹೊಂದಿದ್ದರೂ ಜನರ ದೂರು ಹೆಚ್ಚಾದಾಗ ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ. ರಸ್ತೆಯಲ್ಲಿ ಸುರಕ್ಷಿತವಾಗಿ ಓಡಾಡುವುದೇ ಕಷ್ಟ’ ಎಂಬುದು ಸಾರ್ವಜನಿಕರ ಆರೋಪ.

‘ಚಿಕಿತ್ಸೆಗೆ ಮುಂದಾಗದಿದ್ದರೆ ಅಪಾಯ’

‘ನಾಯಿ ಕಚ್ಚಿದರೆ ನಿರ್ಲಕ್ಷ್ಯ ಮಾಡಬಾರದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಹೇಳಿದರು. ‘ನಾಯಿ ಕಡಿತದಿಂದ ರೇಬಿಸ್‌ ಕಾಣಿಸಿಕೊಳ್ಳುವುದು ಹೆಚ್ಚು. ಕಚ್ಚಿದ ಗಾಯವನ್ನು ಮೊದಲು ಶುದ್ಧ ನೀರಿನಿಂದ ತೊಳೆಯಬೇಕು. ಸಾಬೂನಿನಿಂದ ಗಾಯವನ್ನು ಸ್ವಚ್ಛಗೊಳಿಸಿದಲ್ಲಿ ಸೋಂಕು ದೇಹದ ನರವ್ಯೂಹ ಸೇರುವುದನ್ನು ತಡೆಯಬಹುದು. ‌ಗಾಯ ದೊಡ್ಡದಾಗಿ ರಕ್ತಸ್ರಾವ ಅಧಿಕವಾಗಿದ್ದಲ್ಲಿ ಶುದ್ಧ ಬಟ್ ಕಟ್ಟಿಕೊಳ್ಳಬೇಕು. ಕೂಡಲೇ ಆಸ್ಪತ್ರೆಗೆ ತೆರಳಿ ರೇಬಿಸ್ ನಿರೋಧಕ ಚುಚ್ಚುಮದ್ದು ಪಡೆಯಬೇಕು. ಕಚ್ಚಿದ ನಾಯಿ ಮೇಲೆ ಕೂಡ ನಿಗಾ ಇಡಬೇಕಾಗುತ್ತದೆ. ಗರ್ಭಿಣಿಯರು ಹಾಲುಣಿಸುವ ತಾಯಂದಿರು ಒಂದು ವರ್ಷದೊಳಗಿನ ಮಕ್ಕಳು ಮತ್ತು ವಯಸ್ಕರು ಸಹ ರೇಬಿಸ್ ವಿರುದ್ಧದ ಲಸಿಕೆ ತೆಗೆದುಕೊಳ್ಳಬಹುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.