ADVERTISEMENT

ಮೈಸೂರು ಡ್ರಗ್ಸ್ ಪ್ರಕರಣ: ಎರಡು ತಿಂಗಳಿಗೊಮ್ಮೆ ಸ್ಥಳ ಬದಲಾಯಿಸುತ್ತಿದ್ದ ತಂಡ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 17:05 IST
Last Updated 28 ಜುಲೈ 2025, 17:05 IST
ಮೈಸೂರಿನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಸೇವಿಸಿದವರನ್ನು ವಶಕ್ಕೆ ಪಡೆಯಿತು
ಮೈಸೂರಿನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಸೇವಿಸಿದವರನ್ನು ವಶಕ್ಕೆ ಪಡೆಯಿತು   

ಮೈಸೂರು: ನಗರದ ಬನ್ನಿಮಂಟಪದ ವರ್ತುಲ ರಸ್ತೆಯ ಉನ್ನತಿ ನಗರದ ಗ್ಯಾರೇಜ್‌ನಲ್ಲಿ ನಡೆಸುತ್ತಿದ್ದ ಮಾದಕ ವಸ್ತು ತಯಾರಿಕಾ ಘಟಕದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಗಳು ಎರಡು ತಿಂಗಳಿಗೊಮ್ಮೆ ಸ್ಥಳ ಬದಲಾಯಿಸುತ್ತಿದ್ದರು. ಅವರ ಜಾಲ ಗುಜರಾತ್‌ನಿಂದ ಆರಂಭವಾಗಿ ಕೇರಳಕ್ಕೂ ಹರಡಿತ್ತು.

‘ಪೊಲೀಸರು ಬಂಧಿಸಿರುವ ತಂಡವು ಈ ಹಿಂದೆ ಕೇರಳದ ಪಾಲಕ್ಕಾಡ್‌, ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮಾದಕ ವಸ್ತು ತಯಾರಿಸುತ್ತಿತ್ತು. ಪೊಲೀಸರು ದಾಳಿ ನಡೆಸಿದಾಗ, ಅಲ್ಲಿಂದ ತಪ್ಪಿಸಿಕೊಂಡು ಇಪ್ಪತ್ತು ದಿನಗಳ ಹಿಂದೆ ಬನ್ನಿಮಂಟಪದ ವರ್ತುಲ ರಸ್ತೆಯ ಕಾರ್‌ ಗ್ಯಾರೇಜ್‌ನ ಪಕ್ಕದ ಜಾಗದ ಶೆಡ್‌ನಲ್ಲಿ ಬಂದು ಎಂಡಿಎಂಎ ತಯಾರಿಕೆಯಲ್ಲಿ ತೊಡಗಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಸಾವಿರ ಚದರ ಅಡಿ ಜಾಗದಲ್ಲಿ ಉಳಿದುಕೊಂಡಿದ್ದ ತಂಡದ ಕುರಿತು ಸ್ಥಳೀಯರಿಗೂ ಮಾಹಿತಿಯಿರಲಿಲ್ಲ. ಶೆಡ್‌ ಪಕ್ಕದಲ್ಲೇ ಇರುವ ಟೀ ಅಂಗಡಿಗೆ ತಂಡದಲ್ಲಿದ್ದ ಯುವಕನೊಬ್ಬ ಬಂದು ಟೀ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದ. ಮತ್ಯಾರು ಹೊರಬರುತ್ತಿರಲಿಲ್ಲ. ಶೆಡ್‌ನೊಳಗೆ ಗಾಳಿ, ಬೆಳಕು ಬರದಂತೆ ಮುಚ್ಚಲಾಗಿತ್ತು’ ಎಂದು ಹೇಳಿದ್ದಾರೆ.

ADVERTISEMENT

‘1 ಕೆಜಿ ಎಂಡಿಎಂಎ ಮೌಲ್ಯ ₹50 ಲಕ್ಷ ಎಂದು ಅಂದಾಜಿಸಲಾಗಿದ್ದು, ಅಂತರರಾಷ್ಟ್ರೀಯ ಕಳ್ಳ ಮಾರುಕಟ್ಟೆಯಲ್ಲಿ ₹1.5 ಕೋಟಿಗೂ ಹೆಚ್ಚು ಮೌಲ್ಯವಿದೆ ಎನ್ನಲಾಗಿದೆ. ಉನ್ನತಿ ನಗರದ ಘಟಕದಲ್ಲಿ ಕೇವಲ ತಯಾರಿಯಷ್ಟೇ ನಡೆದಿತ್ತು. ಸಂಗ್ರಹ ಕಾರ್ಯವನ್ನಷ್ಟೇ ಆರೋಪಿಗಳು ಮಾಡಿದ್ದರು. ಎರಡು ವಾರಗಳಲ್ಲಿ ದ್ರವ ರೂಪದಲ್ಲಿದ್ದ ಮಾದಕವಸ್ತುವನ್ನು ಪೌಡರಾಗಿಸುವ ಗುರಿ ಹೊಂದಿದ್ದರು. ಮಾರಾಟಕ್ಕಾಗಿ ಬೇರೆ ಜನರ ತಂಡವಿದ್ದು, ಈ ಜಾಲದ ಪತ್ತೆಗೆ ತನಿಖೆ ಮುಂದುವರಿದಿದೆ’ ಎಂದು ತಿಳಿದು ಬಂದಿದೆ.

ಘಟನೆಯ ಹಿನ್ನೆಲೆ: ನಗರದಲ್ಲಿ ಮಹಾರಾಷ್ಟ್ರ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಎಂಡಿಎಂಎ ತಯಾರಿಕಾ ಘಟಕ ಪತ್ತೆಹಚ್ಚಿದ್ದರು. ಮುಂಬೈನ ಅಂಧೇರಿಯ ಫಿರೋಜ್ ಮೌಲಾ ಶೇಕ್, ಗುಜರಾತ್‌ನ ಸೂರತ್‌ ನಿವಾಸಿ ಶೇಕ್ ಆದಿಲ್, ಬೈರೋಚ್‌ನ ಸೈಯದ್ ಮೆಹಫೂಜ್ ಅಲಿ ಅವರನ್ನು ಬಂಧಿಸಲಾಗಿತ್ತು. ಸೈಯದ್ ರಸಾಯನ ವಿಜ್ಞಾನ ಡಿಪ್ಲೊಮಾ ಮಾಡಿದ್ದು, ಆತನೇ ಟೀ ತೆಗೆದುಕೊಂಡು ಹೋಗಲು ಬರುತ್ತಿದ್ದ. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ‘ಚಾಯಿ ಕೊಡು’ ಎಂದು ಹಿಂದಿಯಲ್ಲಿ ಹೇಳುತ್ತಿದ್ದ ಎನ್ನಲಾಗಿದೆ.

ಸ್ಮಶಾನದಲ್ಲೂ ಶೋಧ

ಡ್ರಗ್ಸ್‌ ಘಟಕ ಪತ್ತೆಯಾದ ಬಳಿಕ ನಗರ ಪೊಲೀಸರು ಎಚ್ಚೆತ್ತಿದ್ದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಭಾನುವಾರ ರಾತ್ರಿ ವಿವಿಧೆಡೆ ದಿಢೀರ್ ಕಾರ್ಯಾಚರಣೆ ನಡೆದಿದೆ. ಗಾಂಜಾ ಸೇವಿಸಿದ 26 ಜನ ಪತ್ತೆಯಾಗಿದ್ದು ಒಬ್ಬ ಪೆಡ್ಲರ್‌ನನ್ನು ಪತ್ತೆಹಚ್ಚಲಾಗಿದೆ.  ಮಂಡಿ ಮೊಹಲ್ಲಾ ಉದಯಗಿರಿ ಎನ್ ಆರ್ ಮೊಹಲ್ಲಾ ನಜರ್ ಬಾದ್ ಕೆ. ಆರ್ ಮೊಹಲ್ಲಾದ ಸೇರಿ ಹಲವು ಕಡೆ ಏಕಕಾಲಕ್ಕೆ ದಾಳಿ ನಡೆಸಿ 59 ಗೋದಾಮು ಪರಿಶೀಲಿಸಿದ್ದಾರೆ. ಲಾಡ್ಜ್‌ ಪಿಜಿ ಹಾಸ್ಟೆಲ್‌ ಗೋಡನ್‌ ಶೆಡ್‌ ಸ್ಮಶಾನಗಳಲ್ಲಿ ಶೋಧ ನಡೆಸಿದ್ದಾರೆ. ಗಾಂಜಾ ಮಾರಾಟ‌ ಪ್ರಕರಣದ ಹಿನ್ನೆಲೆಯುಳ್ಳ 35 ಜನರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಸೋಮವಾರ ರಾತ್ರಿಯೂ ಕಾರ್ಯಾಚರಣೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.