ಡ್ರಗ್ಸ್ (ಸಾಂದರ್ಭಿಕ ಚಿತ್ರ)
ಮೈಸೂರು: ನಗರದಲ್ಲಿ ಮಾದಕವಸ್ತು ತಯಾರಿಕೆ ಘಟಕ ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರದ ಪೊಲೀಸರು, ಮೂರು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಿದ್ದು, 100ಕ್ಕೂ ಅಧಿಕ ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.
‘60ಕ್ಕೂ ಹೆಚ್ಚು ಮಂದಿ ಗಾಂಜಾ ಸೇವಿಸಿದ್ದು ಪತ್ತೆಯಾಗಿದೆ. 6 ಮಂದಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಲಾಗಿದೆ’ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ಮೈಸೂರಿನಲ್ಲಿ ಪತ್ತೆಯಾದ ಮಾದಕ ವಸ್ತುವಿನ ಮೌಲ್ಯ ₹390 ಕೋಟಿ ಆಗುತ್ತದೆ’ ಎಂಬ ಮುಂಬೈ ಪೊಲೀಸರ ಹೇಳಿಕೆಗೆ ಅವರು, ‘ಸ್ಥಳೀಯ ಪೊಲೀಸರು ಹಾಗೂ ಮಹಾರಾಷ್ಟ್ರ ಪೊಲೀಸರಿಂದ ಜಂಟಿಯಾಗಿ ಕಾರ್ಯಾಚರಣೆ ನಡೆದಿದೆ. ನಂತರ ಅವರು ಮಹಜರು ನಡೆಸಿ ತೆರಳಿದ್ದು, 14.8 ಕೆ.ಜಿ. ಪೌಡರ್ ದೊರೆತಿದೆ ಎಂದಿದ್ದಾರೆ. ಅವರ ಹೇಳಿಕೆ ಕುರಿತು ನಮಗೆ ಹೆಚ್ಚಿನ ಮಾಹಿತಿ ಇಲ್ಲ’ ಎಂದರು.
‘ಮಂಗಳವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 584 ಗ್ರಾಂ. ಗಾಂಜಾ, 5 ಗ್ರಾಂ. ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. 10 ಮೆಡಿಕಲ್ ಸ್ಟೋರ್‌ಗಳಲ್ಲಿ ತಪಾಸಣೆ ನಡೆಸಿದೆ. ಜಯಲಕ್ಷ್ಮೀಪುರಂ ಹಾಗೂ ಪಡುವಾರಹಳ್ಳಿಯಲ್ಲಿ ಹುಡುಗರ ಐದು ಪಿ.ಜಿಗಳಲ್ಲಿ ತಪಾಸಣೆ ನಡೆಸಲಾಗಿದೆ. ಮಂಡಿ ಮೊಹಲ್ಲಾ, ಉದಯಗಿರಿ ಹಾಗೂ ಲಷ್ಕರ್ ಠಾಣೆಗಳ ವ್ಯಾಪ್ತಿಯಲ್ಲಿ, ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ ಕೆಲವು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಹೇಳಿದರು.
‘ಉದಯಗಿರಿ, ಮಂಡಿಮೊಹಲ್ಲಾ ಮತ್ತು ಲಷ್ಕರ್ ಠಾಣಾ ವ್ಯಾಪ್ತಿಯ 10 ಮೆಡಿಕಲ್ ಶಾಪ್‌ಗಳಿಗೆ ಗ್ರಾಹಕರ ಸೋಗಿನಲ್ಲಿ ತೆರಳಿದ್ದ ಪೊಲೀಸರು, ವೈದ್ಯರ ಚೀಟಿ ಇಲ್ಲದೆ ಕೆಲ ಔಷಧಿಗಳನ್ನು ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಿದರು. ಒಂದು ಮೆಡಿಕಲ್ ಶಾಪ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ಔಷಧಿ ದಾಸ್ತಾನು ಇದ್ದುದ್ದು ಪತ್ತೆಯಾಗಿದ್ದು, ಅದರ ನೋಂದಣಿ ರದ್ದುಪಡಿಸುವಂತೆ ಔಷಧ ನಿಯಂತ್ರಕರಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.
ಗಾಂಜಾ ಅಥವಾ ಡ್ರಗ್ಸ್ ಮಾರಾಟ ಪ್ರಕರಣಗಳಲ್ಲಿ ಹೆಚ್ಚು ಬಾರಿ ಭಾಗಿಯಾದವರನ್ನು ಗಡೀಪಾರು ಮಾಡುವ ಕುರಿತು ಚಿಂತನೆ ನಡೆದಿದೆ.ಸೀಮಾ ಲಾಟ್ಕರ್ ಮೈಸೂರು ನಗರ ಪೊಲೀಸ್ ಆಯುಕ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.