ADVERTISEMENT

ಇಎಂಆರ್‌ಸಿಯಲ್ಲಿ ‘ಲೆಗಸಿ ಲಾಂಜ್’: ಸೆಳೆಯುತ್ತಿದೆ ‘ಬಹುಮಾಧ್ಯಮ’ ಸಂಗ್ರಹಾಲಯ!

ಎಲೆಕ್ಟ್ರಾನಿಕ್‌ ಸಾಧನಗಳ ಪರಿಚಯ

ಎಚ್‌.ಕೆ. ಸುಧೀರ್‌ಕುಮಾರ್
Published 5 ನವೆಂಬರ್ 2025, 7:29 IST
Last Updated 5 ನವೆಂಬರ್ 2025, 7:29 IST
ವಿದ್ಯಾರ್ಥಿಗಳ ವೀಕ್ಷಣೆ
ವಿದ್ಯಾರ್ಥಿಗಳ ವೀಕ್ಷಣೆ   

ಮೈಸೂರು: ಆರೇಳು ದಶಕಗಳ ಹಿಂದಿನ ರೇಡಿಯೊ ಹೇಗಿತ್ತು ಎಂಬುದನ್ನು ನೋಡಬೇಕೆ, ಆ ಕಾಲದ ಗ್ರಾಮೊಫೋನ್‌, ಟೆಲಿವಿಷನ್‌ (ಟಿವಿ) ಸಾಧನಗಳ ಬಗ್ಗೆ ತಿಳಿಯುವ ಆಸೆಯೇ? ಹಾಗಿದ್ದರೆ, ಮಾನಸಗಂಗೋತ್ರಿಯ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ (ಇಎಂಆರ್‌ಸಿ) ಸೂಕ್ತ ಜಾಗ.

ಮನೆಗಳ ಅಟ್ಟಗಳಲ್ಲಿ ಅಥವಾ ಹಳೆ ಸಿನಿಮಾಗಳಲ್ಲಿ ಮಾತ್ರ ಕಾಣಲು ಸಿಗುತ್ತವೆ ಎನ್ನುವ ಗತಕಾಲದ ಎಲೆಕ್ಟ್ರಾನಿಕ್‌ ಪರಿಕರಗಳನ್ನು ಒಂದೇ ಸೂರಿನಡಿ ಕಾಣುವ ಅವಕಾಶವನ್ನು ಕೇಂದ್ರವು ಕಲ್ಪಿಸಿದೆ.

‘ಬಹುಮಾಧ್ಯಮ’ ಸಂಶೋಧನೆಯೇ ಕೇಂದ್ರದ ಮುಖ್ಯ ಕಾರ್ಯವಾಗಿದ್ದು, ತನ್ನ ಕೆಲಸಗಳಿಗೆ ಬಳಕೆ ಮಾಡಿಕೊಂಡಿದ್ದ ಹಳೆಯ ಎಲೆಕ್ಟ್ರಾನಿಕ್‌ ಸಾಧನ, ಉಪಕರಣಗಳನ್ನು 16 ಕಪಾಟುಗಳಲ್ಲಿ ವಿವಿಧ ವಿಭಾಗಗಳ ಮೂಲಕ ಮಾಹಿತಿ ಸಹಿತ ಪ್ರದರ್ಶನಕ್ಕೆ ಇರಿಸಿದೆ. ‘ಲೆಗಸಿ ಲಾಂಜ್’ ಎಂಬ ಹೆಸರನ್ನು ನಾಮಕರಣ ಮಾಡಿ ವಸ್ತು ಸಂಗ್ರಹಾಲಯದ ರೂಪ ಕೊಟ್ಟಿದೆ.

ADVERTISEMENT

‘ಉಪಕರಣಗಳು ಸುಧಾರಣೆಗೊಂಡ ಕಥನವು ಅನಾವರಣಗೊಂಡಿದ್ದು, ನೋಡಲು ಬಂದವರಿಗೆ ಬಳಕೆ ಮಾಡುವ ಬಗೆಯನ್ನು ತಿಳಿಸುವುದು ಸಂಗ್ರಹಾಲಯ ಯೋಜನೆಯ ಉದ್ದೇಶ. ವರ್ಷದ ಹಿಂದೆ ಆರಂಭಿಸಿದ ಈ ಪ್ರಯತ್ನಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ’ ಎನ್ನುತ್ತಾರೆ ಕೇಂದ್ರದ ಪ್ರಭಾರ ನಿರ್ದೇಶಕಿ ಪ್ರೊ.ಎಂ.ಎಸ್.ಸಪ್ನಾ. 

ಏನೆಲ್ಲಾ ನೋಡಬಹುದು: 1980–2010ರ ಅವಧಿಯಲ್ಲಿ ಚಿತ್ರೀಕರಣ ಮಾಡಲು ಬಳಸುತ್ತಿದ್ದ ಬೀಟಾ ವಿಡಿಯೊ ಕ್ಯಾಮೆರಾಗಳು, ರೇಡಿಯೊ ಕಾರ್ಯಕ್ರಮಗಳು ಹಾಗೂ ಟಿ.ವಿ ಸಂದರ್ಶನಗಳಲ್ಲಿ ಮಾತನಾಡುವವರ ಕಾಲರ್‌ಗಳಿಗೆ ಅಳವಡಿಸುತ್ತಿದ್ದ 1932ರ ನಂತರದ ಮೈಕ್ರೋಫೋನ್‌ಗಳು, ಹೆವಿ ಡ್ಯೂಟಿಯ ಲೈಟ್‌ಗಳು, ಲೈಟ್ ಸ್ಟ್ಯಾಂಡ್‌ಗಳು, ಲೈಟ್‌ಗಳ ಫಿಲ್ಟರ್‌ಗಳು, ವಿಸಿಆರ್, ವಿಸಿಎಚ್, ರೆಕಾರ್ಡಿಂಗ್ ಪ್ಲೇಯರ್, ವಿಸಿಆರ್ ಕ್ಯಾಸೆಟ್‌ಗಳು, ಅರ್ಧ ಗಂಟೆ, ಒಂದು ಗಂಟೆ ಅವಧಿಯ ಟೇಪ್‌ವುಳ್ಳ ಕ್ಯಾಸೆಟ್‌ಗಳು, ಮಿಕ್ಸರ್, ಟ್ರೈಪಾಡ್ಸ್‌, ಸ್ಟೂಡಿಯೊ ಸೆಟ್‌ಅಪ್‌ಗೆ ಬಳಕೆಯಾಗುತ್ತಿದ್ದ ಉಪಕರಣಗಳನ್ನು ನೋಡಬಹುದು. ಕ್ಯಾಮೆರಾಗಳನ್ನು ಸಾಗಣೆ ಮಾಡಲು ಬಳಸುತ್ತಿದ್ದ ದೊಡ್ಡಗಾತ್ರದ ಬಾಕ್ಸ್‌‌ಗಳು ಸಹ ನೋಡಲು ಸಿಗುತ್ತವೆ. ಹಲವು ಮಾದರಿಯ ಫೋಟೊ ಕ್ಯಾಮೆರಾಗಳು, ಲೆನ್ಸ್‌‌ಗಳು, ವಿಸಿಆರ್‌ನ ಹೆಡ್‌ಗಳೂ ಇಲ್ಲಿ ಅಡಕ. 

ದಾನಿಗಳ ನೆರವು: ‘ಗೋದಾಮಿನಲ್ಲಿ ಇರಿಸಿದ್ದ ಪರಿಕರಗಳನ್ನು ಸ್ವಚ್ಛಗೊಳಿಸಿ ಒಂದೆಡೆ ಜೋಡಿಸಿ ಅಗತ್ಯವುಳ್ಳವರಿಗೆ ಮಾಹಿತಿ ದೊರೆಯುವಂತೆ ಮಾಡಲಾಗಿದೆ. ದಾನಿಗಳು ನೀಡಿದ 60 ವರ್ಷದ ಹಿಂದಿನ ರೇಡಿಯೊ, ಟೇಪ್‌ರೆಕಾರ್ಡರ್, ಗ್ರಾಮೊಫೋನ್‌ಗಳು, ಅಂದಿನ ಖ್ಯಾತ ಗಾಯಕರ ಹಾಡುಗಳನ್ನು ಒಳಗೊಂಡಿರುವ ‘ಡಿಸ್ಕ್‌’ಗಳು ಸೇರಿದಂತೆ ಸುಮಾರು 180 ವಸ್ತುಗಳನ್ನು ಕಾಣಬಹುದು’ ಎಂದು  ಪ್ರೊ.ಎಂ.ಎಸ್.ಸಪ್ನಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಸ್ತು ಸಂಗ್ರಹಾಲಯ ಇದೇ ಮೊದಲು’

‘ಇಡೀ ದೇಶದಲ್ಲಿ 21 ಮಲ್ಟಿಮೀಡಿಯಾ ರಿಸರ್ಚ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು ಇವುಗಳಲ್ಲಿ ಈ ಮಾದರಿಯ ವಸ್ತು ಸಂಗ್ರಹಾಲಯ ಮಾಡಿರುವುದು ಮೈಸೂರಿನ ಕೇಂದ್ರವೇ ಮೊದಲು’ ಎಂದು ಪ್ರೊ.ಎಂ.ಎಸ್‌.ಸಪ್ನಾ ತಿಳಿಸಿದರು.

‘ಈ ಯೋಜನೆಯನ್ನು ತಮ್ಮಲ್ಲೂ ಅಳವಡಿಸಿಕೊಳ್ಳಲು ಪಾಂಡಿಚೇರಿ ಅಹಮದಾಬಾದ್‌ ಚೆನ್ನೈ ಹೈದರಾಬಾದ್ ಕೇಂದ್ರಗಳ ತಜ್ಞರು ಬಂದು ವೀಕ್ಷಿಸಿ ಹೋಗಿದ್ದಾರೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭೇಟಿ ಕೊಟ್ಟಿದ್ದಾರೆ. ರಜೆ ದಿನ ಹೊರತುಪಡಿಸಿ ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ ಜನರು ಭೇಟಿ ನೀಡಬಹುದು’ ಎಂದು ಮಾಹಿತಿ ನೀಡಿದರು.

ಸಂಗ್ರಹಾಲಯವು ಬಹುಮಾಧ್ಯಮ ಕ್ಷೇತ್ರವನ್ನು ಪರಿಚಯಿಸಲಿದೆ. ಪ್ರದರ್ಶನಯೋಗ್ಯ ಹಲವು ಉಪಕರಣಗಳು ನಮ್ಮಲ್ಲಿದ್ದು ಇನ್ನಷ್ಟು ವಿಸ್ತರಿಸಲಾಗುವುದು.
– ಪ್ರೊ.ಎಂ.ಎಸ್.ಸಪ್ನಾ, ನಿರ್ದೇಶಕಿ (ಪ್ರಭಾರ) ಇಎಂಆರ್‌ಸಿ
ಪ್ರೊ.ಎಂ.ಎಸ್‌.ಸಪ್ನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.