ADVERTISEMENT

ಮೈಸೂರು: ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 4:37 IST
Last Updated 19 ನವೆಂಬರ್ 2025, 4:37 IST
ಸರಗಳ್ಳತನ ಕಾರ್ಟೂನ್‌
ಸರಗಳ್ಳತನ ಕಾರ್ಟೂನ್‌   

ಮೈಸೂರು: ನಗರದ ಜೆ.ಕೆ.ಮೈದಾನದ ಬಳಿ ಎಂಜಿನಿಯರ್ ಮೇಲೆ ಹಲ್ಲೆ ನಡೆಸಿದ ಮೂವರು ದುಷ್ಕರ್ಮಿಗಳು, ಕಾರು ಸೇರಿದಂತೆ ನಗದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಮೈಸೂರು ತಾಲ್ಲೂಕು ಹಡಜನ ಸಮೀಪದ ಬಡಾವಣೆಯೊಂದರ ನಿವಾಸಿ ಆಕಾಶ್ ಆದಿತ್ಯ (42) ಹಲ್ಲೆಗೊಳಗಾದವರು.

‘ನ. 12ರಂದು ರಾತ್ರಿ 12ರ ವೇಳೆಗೆ ಆಕಾಶ್ ಆದಿತ್ಯ ಅವರು ಮೈಸೂರು ರೈಲು ನಿಲ್ದಾಣದ ಬಳಿ ಕಾರಿನಲ್ಲಿ ಬಂದು ಟೀ ಸೇವಿಸುತ್ತಿದ್ದಾಗ ಎದುರಾದ ಮೂವರು, ನಮ್ಮನ್ನು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಡ್ರಾಪ್ ಮಾಡಿ ಎಂದು ಕೇಳಿದ್ದಾರೆ. ಅದಕ್ಕೆ ಸ್ಪಂದಿಸಿದ ಆಕಾಶ್, ಮೂವರನ್ನು ಕಾರಿನಲ್ಲಿ ಕೂರಿಸಿಕೊಂಡು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ತೆರಳಿದ್ದಾರೆ. ಜೆ.ಕೆ.ಮೈದಾನದ ಬಳಿ ಕಾರನ್ನು ನಿಲ್ಲಿಸುವಂತೆ ಹೇಳಿದ ಮೂವರು ದುಷ್ಕರ್ಮಿಗಳು, ಅವರಿಗೆ ಹಲ್ಲೆ ನಡೆಸಿ, ಹಣ, ಕ್ರೆಡಿಟ್ ಕಾರ್ಡ್ ಇದ್ದ ಪರ್ಸ್‌, ಬೆಳ್ಳಿ ಚೈನ್ ಮತ್ತು ಕಡಗವನ್ನು ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಪ್ರಜ್ಞೆ ಕಳೆದುಕೊಂಡ ಆಕಾಶ್‌ಗೆ ಬೆಳಗಿನ ಜಾವ ಎಚ್ಚರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತನಿಂ‌ದ ಬೈಕ್‌ ಚಾಲನೆ: ₹25 ಸಾವಿರ ದಂಡ

ಮೈಸೂರು: ಅಪ್ರಾಪ್ತ ಬಾಲಕನಿಗೆ ಚಾಲನೆ ಮಾಡಲು ಬೈಕ್ ನೀಡಿದ ಪೋಷಕರಿಗೆ ₹25 ಸಾವಿರ ದಂಡ ವಿಧಿಸಿ ಜೆಎಂಎಫ್‌ಸಿ ನ್ಯಾಯಾಲಯವು ಆದೇಶಿಸಿದೆ.

ವಿವಿಪುರಂ ಸಂಚಾರ ಠಾಣೆ ಪೊಲೀಸರು ವಿಜಯನಗರ ವರ್ತುಲ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವಾಗ ಅಪ್ರಾಪ್ತ ಬಾಲಕ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದಿದ್ದು, ಆತನನ್ನು ತಡೆದ ಪೊಲೀಸರು ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಲಯವು ಬಾಲಕನ ಪೋಷಕರಾದ ಮಿಥುನ್ ಅವರಿಗೆ ₹25 ಸಾವಿರ ದಂಡ ವಿಧಿಸಿದೆ.

ದರೋಡೆಗೆ ಸಂಚು: ಇಬ್ಬರ ಬಂಧನ

ಮೈಸೂರು: ಮಾದಕ ವಸ್ತು ಖರೀದಿಗಾಗಿ ದರೋಡೆಗೆ ಸಂಚು ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಹೆಬ್ಬಾಳು ಠಾಣೆ ಪೊಲೀಸರು, ನಾಲ್ವರ ಬಂಧನಕ್ಕೆ ಶೋಧ ಕಾರ್ಯ ಮುಂದುವರೆಸಿದೆ.

ಬಂಧಿತರಿಂದ ಬಾಡಿಗೆಗೆ ತಂದಿದ್ದ ಕಾರು ಹಾಗೂ ಚಾಕು ವಶಪಡಿಸಿಕೊಳ್ಳಲಾಗಿದೆ. ಹೆಬ್ಬಾಳು ರಿಂಗ್ ರಸ್ತೆಯ ಶುಭೋದಿನಿ ಜಂಕ್ಷನ್ ಹಾಲ್ ಬಳಿ ಭಾನುವಾರ ಮುಂಜಾನೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ನಗರದ ಮಹಮ್ಮದ್ ಯೂಸ್‌ಫ್‌ (19), ಮುದಾಸೀರ್ ಪಾಷ(18) ಎಂಬುವರನ್ನು ಬಂಧಿಸಲಾಗಿದ್ದು, ಸಹಚರರಾದ ರಾಜ್, ಮೊಹಮ್ಮದ್ ರೋಷನ್, ಸೈಯದ್ ಮುಬಾರಕ್, ಮಹಮ್ಮದ್ ಮಾಜ್ ಪರಾರಿಯಾಗಿದ್ದಾರೆ. ಶನಿವಾರ ರಾತ್ರಿ ಗಸ್ತಿನಲ್ಲಿದ್ದ ಹೆಬ್ಬಾಳು ಠಾಣೆ ಎಸ್‌ಐ ಕೀರ್ತಿ ಮತ್ತು ಸಿಬ್ಬಂದಿ, ರಸ್ತೆ ಬದಿ ಕಾರು ನಿಲ್ಲಿಸಿಕೊಂಡು ನಿಂತಿದ್ದವರ ಬಳಿ ತೆರಳಿದ್ದಾರೆ. ಈ ವೇಳೆ ನಾಲ್ವರು ಪರಾರಿಯಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ನಡೆಸಲು ಸಂಚು ರೂಪಿಸಿದ್ದು ಗೊತ್ತಾಗಿದೆ.

ಬಂಧಿತರ ತಂಡ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮುಗಿಸಿಕೊಂಡು ಹೋಗುವ ಕಾರ್ಮಿಕರನ್ನು ಅಡ್ಡ ಗಟ್ಟಿ ಸುಲಿಗೆ ಮಾಡಲು ಹೊಂಚು ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ

ಮೈಸೂರು: ಎನ್‌ಆರ್ ಮೊಹಲ್ಲಾ ನಿವಾಸಿ ಶೋಯೆಬ್‌ ಖಾನ್(35) ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

‘ಕೌಟುಂಬಿಕ ವಿಚಾರವಾಗಿ ಶೋಯೆಬ್‌ಖಾನ್ ಅವರೊಂದಿಗೆ ಅವರ ಪತ್ನಿ ಆಯಿಷಾ ಬಾನು ಜಗಳವಾಡಿದ್ದು, ಇದರಿಂದ ಮನನೊಂದ ಶೋಯೆಬ್ ಖಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತನ ಸಂಬಂಧಿ ನೀಡಿದ ದೂರು ಆಧರಿಸಿ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.