ಮೈಸೂರು: ಬದುಕು–ಸಾವಿನ ಹೋರಾಟ ಬಿಂಬಿಸುವ ಚಿತ್ರಗಳು ಒಂದೆಡೆ, ಮತ್ತೊಂದೆಡೆ ಸೃಷ್ಟಿಮೂಲವಾದ ಪಂಚಭೂತಗಳ ಚಿತ್ರಣ, ಮಹಡಿಯಲ್ಲಿ ಅಧ್ಯಾತ್ಮ, ಗ್ರಾಮೀಣ ಬದುಕು, ಸೌಂದರ್ಯವನ್ನು ತೋರುವ ವರ್ಣಚಿತ್ರಗಳು..
ಹೀಗೆ ವಿಭಿನ್ನ ಥೀಮ್‌ಗಳಲ್ಲಿ ಹತ್ತು ಕಲಾವಿದರು ರಚಿಸಿರುವ ಕಲಾಕೃತಿಗಳು ಇಲ್ಲಿನ ಕಾಂತರಾಜ ಅರಸ್ ರಸ್ತೆಯ ಹೆರಿಟೇಜ್ ಹೌಸ್‌ನಲ್ಲಿ ‘ಛೇದಕಗಳು’(ಇಂಟರ್‌ಸೆಕ್ಷನ್ಸ್) ಹೆಸರಿನಲ್ಲಿ ಗಮನ ಸೆಳೆಯುತ್ತಿವೆ.
ಅಕ್ರಾಲಿಕ್ ಆನ್ ಕ್ಯಾನ್ವಸ್, ತೈಲವರ್ಣ, ಜಲವರ್ಣ, ಪಾಲಿಕ್ರೋಮಸ್ ಪೆನ್ಸಿಲ್ಸ್ ಮತ್ತು ಮೈಕ್ರಾನ್ ಪೆನ್ಸ್ ಮಾಧ್ಯಮಗಳಲ್ಲಿ ಮೂಡಿಬಂದಿರುವ ಫಿಗರೇಟಿವ್, ಅಬ್‌ಸ್ಟ್ರಾಕ್ಟ್, ಇಂಪ್ರೆಷನಿಸ್ಟ್, ಸರ್ರಿಯಲಿಸ್ಟಿಕ್ ಮಾದರಿಯ ಚಿತ್ರಗಳು ಚಿಂತನೆಗೆ ದೂಡುತ್ತವೆ.
ಕಲಾವಿದರ ಹಿನ್ನೆಲೆಯೂ ವಿಭಿನ್ನವಾಗಿದ್ದು, ತಮ್ಮ ಪರಿಸರ, ಅನುಭವಗಳನ್ನು ಚಿತ್ರಗಳ ಮೂಲಕ ದಾಟಿಸಿದ್ದಾರೆ. ಉಡುಪಿಯ ಸುಬ್ರಹ್ಮಣ್ಯ ಬೆಲ್ಮನ್ ಅವರು ‘ಜೀವನ, ಸಾವು, ಸಂಕಟ ಮತ್ತು ವಿಯೋಗ’ ಎಂಬ ಥೀಮ್‌ನಲ್ಲಿ ರಚಿಸಿರುವ ಚಿತ್ರಗಳು ಬದುಕಿನ ಸತ್ಯ ಸಾರುತ್ತವೆ. ಉಷಾ ಬಾಲ ಅಯ್ಯದೇವರ ರಚಿಸಿರುವ ಇಂಪ್ರೆಷನಿಸ್ಟ್ ಶೈಲಿಯ ಕಲಾಕೃತಿಗಳಲ್ಲಿನ ಸುರುಳಿಗಳು ಮತ್ತು ಕೋನಗಳು ವೈಯಕ್ತಿಕ ಸಂವಾದವನ್ನು ಹುಟ್ಟುಹಾಕುತ್ತವೆ. ಹೀಗೆ ಪ್ರತಿಯೊಬ್ಬರದ್ದೂ ವಿಭಿನ್ನ ಓಳನೋಟಗಳು.
ಕಲಾವಿದರಾದ ಅಪರ್ಣಾ ರಾಜಪಾಂಡಿಯನ್, ಬೆನ್ನಿ ಡಿಸಾ, ಲೋಕೇಶ್ವರ ರಾವ್ ಮಾದಿರಾಜು, ಮಲ್ಲಿಕಾ ಬುಲುಸು, ಪ್ರವೀಣ್ ಸಿದ್ಯಾಳ್, ರೇಖಾ ಶ್ರೀವತ್ಸನ್, ರಿಯಾ ಅಬೂಬಕರ್, ಶೋಭಾರಾಣಿ ಪಸುಮರ್ತಿ ಅವರ ಕಲಾಕೃತಿಗಳೂ ಇಲ್ಲಿವೆ.
‘ಯುವ ಹಾಗೂ ಹವ್ಯಾಸಿ ಕಲಾವಿದರು ತಮ್ಮ ಕಲಾಕೃತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶವಿಲ್ಲದೆ, ಪ್ರದರ್ಶನಕ್ಕೆ ಅಗತ್ಯವಾದ ವ್ಯವಸ್ಥೆಗಳ ಬಗ್ಗೆ ಮಾಹಿತಿಯಿಲ್ಲದೇ ಸಮಸ್ಯೆಯಲ್ಲಿರುತ್ತಾರೆ. ಅವರ ಶ್ರಮಕ್ಕೆ ಮೌಲ್ಯವಾಗಲಿ, ಪ್ರಶಂಸೆಯಾಗಲಿ ದೊರೆಯುವುದಿಲ್ಲ. ಅಂಥ ಕಲಾವಿದರಿಗೆ ಸಹಕರಿಸುವ ಉದ್ದೇಶದಿಂದ ಪ್ರದರ್ಶನ ಆಯೋಜಿಸಲಾಗಿದೆ’ ಎಂದು ಗ್ಯಾಲರಿ ಕ್ರೆಸೆಂಟ್ ಸ್ಥಾಪಕ ಸಚಿನ್ ಶೆಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘44 ಚಿತ್ರಗಳನ್ನು ಇಲ್ಲಿ ಪ್ರಸ್ತುತಪಡಿಸಿದ್ದೇವೆ. ಹೆಚ್ಚು ಜನರು ನೋಡಬೇಕು, ಅಭಿಪ್ರಾಯ ದಾಖಲಿಸಬೇಕು ಎಂಬುದು ನಮ್ಮ ಪ್ರಯತ್ನ, ಕೊಳ್ಳಲು ಆಸಕ್ತಿಯಿರುವವರಿಗೂ ಅವಕಾಶವಿದೆ. ಎಲ್ಲರಿಗೂ ಉಚಿತ ಪ್ರವೇಶವಿದ್ದು, ಮಾರ್ಚ್ 16ರವರೆಗೆ, ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ಪ್ರದರ್ಶನವಿರುತ್ತದೆ’ ಎಂದರು.
ನಗರದ ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್‌ವರ್ಕ್ ಫೌಂಡೇಶನ್, ಬೆಂಗಳೂರಿನ ಹಸ್ತಾ ಗ್ಯಾಲರಿ ಮತ್ತು ಗ್ಯಾಲರಿ ಕ್ರೆಸೆಂಟ್ ಈ ಪ್ರದರ್ಶನವನ್ನು ಆಯೋಜಿಸಿದೆ.
ವಿವಿಧ ಮಾದರಿಯ 44 ಚಿತ್ರಗಳ ಪ್ರದರ್ಶನ 10 ಕಲಾವಿದರು; ವಿಭಿನ್ನ ಥೀಮ್‌ಗಳು ಮಾರ್ಚ್ 16ರವರೆಗೆ, ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ಪ್ರದರ್ಶನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.