
ಮೈಸೂರು: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಆಸರೆಯಾಗುವ ಉದ್ದೇಶದಿಂದ ಸರ್ಕಾರದಿಂದ ಆರಂಭಿಸಿರುವ, ನಗರದ ಮೊದಲ ‘ಅಕ್ಕ ಕೆಫೆ’ಯು ಜಿಲ್ಲಾ ಪಂಚಾಯಿತಿ ಹಿಂಭಾಗ ಸೋಮವಾರ ಆರಂಭವಾಯಿತು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ) ಮೂಲಕ ಯೋಜನೆ ಆರಂಭವಾಗಿದ್ದು, 15 ಲಕ್ಷ ವೆಚ್ಚದಲ್ಲಿ ಕೆಫೆ ನಿರ್ಮಿಸಲಾಗಿದೆ. ಹಳೆಯ ಕಟ್ಟಡಕ್ಕೆ ಹೊಸ ರೂಪ ನೀಡಲಾಗಿದೆ. ಅಕ್ಕ ಕೆಫೆ ಕಮಿಟಿಯು ಇದರ ಮೇಲುಸ್ತುವಾರಿ ನೋಡಿಕೊಳ್ಳಲಿದೆ. ಮಹಿಳೆಯರೇ ವ್ಯವಹಾರ ನಡೆಸುವ ವ್ಯವಸ್ಥೆ ರೂಪಿಸಲಾಗಿದ್ದು, ಅದಕ್ಕಾಗಿ ಸ್ತ್ರೀ ಶಕ್ತಿ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.
ಕೆಫೆ ಮುನ್ನಡೆಸಲು ಸುಮಾರು ಆರು ತಂಡಗಳು ಅರ್ಜಿ ಸಲ್ಲಿಸಿದ್ದವು, ಕಮಿಟಿಯು ಅಡುಗೆಯ ರುಚಿ ನೋಡಿದ ಬಳಿಕ ನಾಗವಾಲದ ಶ್ರೀ ಗಂಗ ಸ್ತ್ರೀಶಕ್ತಿ ಸಂಘವನ್ನು ಆಯ್ಕೆ ಮಾಡಿದೆ. ಐವರು ಮಹಿಳೆಯರು ಸ್ವಚ್ಛತೆ, ಅಡುಗೆ ಹಾಗೂ ಹಣಕಾಸಿನ ವ್ಯವಹಾರವನ್ನೆಲ್ಲಾ ತಾವೇ ನೋಡಿಕೊಳ್ಳಲಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಎನ್‌ಆರ್‌ಎಲ್‌ಎಂ ಅಧಿಕಾರಿ ಹಾಗೂ ಕೆಫೆ ನಡೆಸುವ ಮಹಿಳೆಯರ ಜಂಟಿ ಖಾತೆ ಮಾಡಿದ್ದು, ಅದರ ಮೂಲಕವೇ ಹಣಕಾಸಿನ ವ್ಯವಹಾರ ನಡೆಯಲಿದೆ.
ಸದ್ಯ ಉಪ್ಪಿಟ್ಟು, ಕೇಸರಿಬಾತ್ ಮುಂತಾದ ಉಪಹಾರ ಹಾಗೂ ಮಧ್ಯಾಹ್ನ ಮುದ್ದೆ, ಪಲ್ಯ, ಅನ್ನ, ಸಾರು, ಟೀ, ಕಾಫಿ ಇರಲಿದ್ದು, ಗ್ರಾಹಕರ ಪ್ರತಿಕ್ರಿಯೆ ಗಮನಿಸಿ ಹೆಚ್ಚಿನ ತಿಂಡಿ ಮಾಡಲಿದ್ದೇವೆ. ತಾಲ್ಲೂಕು ಕಚೇರಿಯಲ್ಲೂ ಕೆಫೆ ಕೆಲಸ ಪೂರ್ಣಗೊಂಡಿದ್ದು, ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ. ತಾಲ್ಲೂಕು ಕೇಂದ್ರದಲ್ಲೂ ಕೆಫೆ ತೆರೆಯಲಿದ್ದೇವೆ’ ಎಂದು ಎನ್‌ಆರ್‌ಎಲ್‌ಎಂ ಅಧಿಕಾರಿ ಬಸವರಾಜು ತಿಳಿಸಿದರು.
ಚಾಲನೆ: ಕೆಫೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಶಾಸಕ ತನ್ವೀರ್ ಸೇಠ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.