ಮಹಾ ಶಿವರಾತ್ರಿ
ಮೈಸೂರು: ಮಹಾಶಿವರಾತ್ರಿ ಹಬ್ಬದ ಮುನ್ನಾ ದಿನವಾದ ಶನಿವಾರ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಕಂಡುಬಂತು. ಪೂಜಾಸಾಮಗ್ರಿಗಳು, ಹೂ–ಹಣ್ಣಿಗೆ ಬೇಡಿಕೆ ಹೆಚ್ಚಿತ್ತು.
ನಗರದ ದೇವರಾಜ ಮಾರುಕಟ್ಟೆ, ಅಗ್ರಹಾರ, ನಂಜುಮಳಿಗೆ, ಜೆ.ಕೆ. ಮೈದಾನದ ಆಸುಪಾಸು ಹೂವಿನ ಹಾರಗಳ ರಾಶಿ ಹಾಕಲಾಗಿತ್ತು. ಅದರಲ್ಲೂ ಸೇವಂತಿಗೆಗೆ ಬೇಡಿಕೆ ಹೆಚ್ಚಿತ್ತು. ಸಂಜೆ ಹೊತ್ತು ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಿದ್ದು, ಗ್ರಾಹಕರು ಭೇಟಿ ಕೊಟ್ಟರು.
ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಅಲ್ಲಲ್ಲಿ ಇಟ್ಟು ಮಾರಲಾಯಿತು. ಪ್ರತಿ ಕಟ್ಟಿಗೆ ₹20ರಂತೆ ವ್ಯಾಪಾರ ನಡೆಯಿತು. ಪೂಜಾ ಸಾಮಗ್ರಿ ಖರೀದಿಗೂ ಜನರು ಬಂದಿದ್ದು, ಈ ಬಾರಿ ವೀಳ್ಯದೆಲೆ ಹಾಗೂ ಅಡಿಕೆ ಬೆಲೆ ಏರಿಕೆಯ ಬಿಸಿ ತಟ್ಟಿತು.
ಹೂವುಗಳ ಬೆಲೆಯಲ್ಲಿ ಅಲ್ಪ ಏರಿಕೆ ಆಗಿದೆ. ಕನಕಾಂಬರ ಪ್ರತಿ ಕೆ.ಜಿ.ಗೆ ₹700–₹800ರವರೆಗೆ ದರ ಏರಿಸಿಕೊಂಡಿದ್ದರೆ, ಸೇವಂತಿಗೆ ₹200-₹250, ಮಲ್ಲಿಗೆ ₹700–₹800, ಗುಲಾಬಿ ₹250–₹300 ಹಾಗೂ ಚೆಂಡು ಹೂವು ₹40–₹50ರಂತೆ ವ್ಯಾಪಾರ ನಡೆದಿದೆ.
ಬಾಳೆ ದುಬಾರಿ: ಈ ಬಾರಿ ಶಿವರಾತ್ರಿ ಹಬ್ಬಕ್ಕೆ ಏಲಕ್ಕಿ ಬಾಳೆ ದುಬಾರಿ ಆಗಿದೆ. ಪೂರೈಕೆ ಕಡಿಮೆಯಾಗಿರುವ ಕಾರಣಕ್ಕೆ ಹಬ್ಬಕ್ಕೆ ಮುಂಚೆಯೇ ಬೆಲೆ ಹೆಚ್ಚಳಗೊಂಡಿದ್ದು, ಉತ್ತಮ ದರ್ಜೆಯ ಹಣ್ಣು ಕೆ.ಜಿ.ಗೆ ₹120ವರೆಗೆ ಮಾರಾಟ ನಡೆದಿದೆ. ಉಳಿದ ಹಣ್ಣುಗಳೂ ಬಹುತೇಕ ಬೆಲೆ ಏರಿಸಿಕೊಂಡಿವೆ. ತೆಂಗಿನಕಾಯಿ ಎಂದಿನಂತೆ ದುಬಾರಿಯಾಗಿಯೇ ಇದ್ದು, ದೊಡ್ಡ ಗಾತ್ರದ ಕಾಯಿ ಒಂದಕ್ಕೆ ₹50ರ ಸರಾಸರಿಯಲ್ಲಿ ಮಾರಾಟ ನಡೆದಿದೆ.
ಮಹಾ ಶಿವರಾತ್ರಿ ಆಚರಣೆಗೆ ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ಶಿವನ ದೇಗುಲಗಳಲ್ಲಿ ಶನಿವಾರ ಸಿದ್ಧತೆಗಳು ನಡೆದವು. ಬಹುತೇಕ ದೇಗುಲಗಳಲ್ಲಿ ಭಾನುವಾರ ಬೆಳಿಗ್ಗೆ 6ರಿಂದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಪತ್ರೆ ಅರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ತಯಾರಿ ಭರದಿಂದ ನಡೆಯಿತು. ಕೆಲವು ದೇಗುಲಗಳ ಮುಂಭಾಗ ಬ್ಯಾರಿಕೇಡ್, ಹಗ್ಗ ಕಟ್ಟಲಾಯಿತು.
ಅರಮನೆಯ ತ್ರಿನೇಶ್ವರ ದೇಗುಲದ ತ್ರಿನೇಶ್ವರ ಸ್ವಾಮಿ ದೇಗುಲದಲ್ಲಿ ಶಿವರಾತ್ರಿ ಅಂಗವಾಗಿ ದೇವರ ಮೂರ್ತಿಗೆ ಚಿನ್ನದ ಕೊಳಗ ತೊಡಿಸುವ ಪದ್ಧತಿಯಿದ್ದು, ಅದರ ಸಿದ್ಧತೆಗಳು ನಡೆದವು.
ರಾಮಾನುಜ ರಸ್ತೆಯಲ್ಲಿನ ಗುರುಕುಲದಲ್ಲಿರುವ 108 ಶಿವಲಿಂಗಗಳನ್ನು ಸ್ವಚ್ಛಗೊಳಿಸಿ, ಪೂಜೆಗೆ ಸಜ್ಜು ಮಾಡಲಾಯಿತು. ಅದರ ಮುಂಭಾಗದಲ್ಲಿರುವ ಕಾಮೇಶ್ವರ, ಕಾಮೇಶ್ವರಿ, ಕೆ.ಜಿ.ಕೊಪ್ಪಲು, ಪಡುವಾರಹಳ್ಳಿಯಲ್ಲಿರುವ ಚಂದ್ರಮೌಳೇಶ್ವರ, ಚಾಮುಂಡಿ ಬೆಟ್ಟದ ಮಹಾಬಲೇಶ್ವರಸ್ವಾಮಿ ದೇಗುಲದಲ್ಲೂ ಶಿವರಾತ್ರಿಯ ಆಚರಣೆ ಸಿದ್ಧತೆ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.