ಮೈಸೂರು: ಚೊಚ್ಚಲ ಕೊಕ್ಕೊ ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಭಾರತದ ವನಿತೆಯರ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕರ್ನಾಟಕದ ಆಟಗಾರ್ತಿ ಚೈತ್ರಾಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಧಕಿಯ ಸ್ವಾಗತಕ್ಕೆ ಆಕೆಯ ಸ್ವಗ್ರಾಮದಲ್ಲಿ ಸಂಭ್ರಮದ ಸಿದ್ಧತೆ ನಡೆದಿದೆ.
ಚೈತ್ರಾ ಜಿಲ್ಲೆಯ ತಿ. ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ. ಕೊಕ್ಕೊ ವಿಶ್ವಕಪ್‌ಗೆ ದಕ್ಷಿಣ ಭಾರತದಿಂದ ಆಕೆಯಾದ ಏಕೈಕ ಆಟಗಾರ್ತಿ ಎಂಬ ಶ್ರೇಯ ಆಕೆಯದ್ದು.
ಕುರುಬೂರಿನ ಕೆ.ಎಂ. ಬಸವಣ್ಣ ಹಾಗೂ ನಾಗರತ್ನಾ ದಂಪತಿಯ ಪುತ್ರಿ ಚೈತ್ರಾ ಮನೆಯಲ್ಲಿ ಸೋಮವಾರ ಸಂಭ್ರಮ ಮನೆ ಮಾಡಿತ್ತು. ಗ್ರಾಮಸ್ಥರು, ನೆಂಟರಿಷ್ಟರು ಆಕೆಯ ಪೋಷಕರನ್ನು ಅಭಿನಂದಿಸಿದರು.
‘ಫೈನಲ್‌ನಲ್ಲಿ ಆಕೆಯ ಆಟ ನೋಡಿ ಖುಷಿಯಾಯಿತು. ಹೆಣ್ಣು ಮಗಳನ್ನು ಕ್ರೀಡೆಯಲ್ಲಿ ತೊಡಗಿಸಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ನಾವು ಅದೆಲ್ಲವನ್ನೂ ಕೇಳಿಯೂ ಕೇಳದಂತೆ ಇದ್ದೆವು. ಅದನ್ನೇ ಆಶೀರ್ವಾದ ಎಂದುಕೊಂಡೆವು. ಮಗಳು ಅದನ್ನೇ ಸವಾಲಾಗಿ ಸ್ವೀಕರಿಸಿ ಆಡಿದ್ದಾಳೆ. ಈ ಸಾಧನೆ ಮೂಲಕವೇ ಉತ್ತರ ಕೊಟ್ಟಿದ್ದಾಳೆ’ ಎಂದು ತಾಯಿ ನಾಗರತ್ನಾ ಕಣ್ಣೀರಾದರು.
‘8 ವರ್ಷದಿಂದ ಆಕೆ ಕೊಕ್ಕೊ ಆಡುತ್ತಿದ್ದಾಳೆ. ಆಕೆಗೆ ಶೂ ಕೊಡಿಸುವಷ್ಟು ನಮಗೆ ಆರ್ಥಿಕವಾಗಿ ಶಕ್ತಿ ಇರಲಿಲ್ಲ. ನಿರಂತರ ಆಟದಿಂದ ಆಕೆಯ ಪಾದಗಳು ಸೀಳುತ್ತಿದ್ದವು. ಅದಕ್ಕೆ ರಾತ್ರಿಯೆಲ್ಲ ಔಷಧಿ ಹಚ್ಚಿದ್ದೇವೆ. ಮಗಳು ಅದೆಲ್ಲವನ್ನೂ ಲೆಕ್ಕಿಸದೇ ಸಾಧನೆ ಮಾಡಿದ್ದಾಳೆ’ ಎಂದು ತಂದೆ ಬಸವಣ್ಣ ಮಗಳ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದರು.
‘ಕುರಬೂರು ವಿದ್ಯಾದರ್ಶಿನಿ ಕಾನ್ವೆಂಟ್‌ನಲ್ಲಿ ಆಕೆ ಮತ್ತು ಸಂಗಡಿಗರು ನಿರಂತರ ಅಭ್ಯಾಸ ಮಾಡುತ್ತಿದ್ದಾರೆ. ಅವಳಂತೆ ಅವಳ ಸಂಗಡಿಗರೂ ಸಾಧನೆ ಮಾಡಲಿ. ಮಂಜುನಾಥ್ ಮಾಸ್ಟರ್, ವಸಂತಕುಮಾರಿ ಅವರು ಮಗಳಿಗೆ ನೀಡಿದ ಮಾರ್ಗದರ್ಶನವನ್ನು ನಾವು ಮರೆಯುವುದಿಲ್ಲ’ ಎಂದರು.
ಸದ್ಯ ಮಂಡ್ಯ ಜಿಲ್ಲೆಯ ಪಾಂಡವಪುರದ ಶ್ರೀ ಶಂಭುಲಿಂಗೇಶ್ವರ ಕಾಲೇಜಿನಲ್ಲಿ ಬಿಪಿ.ಇಡಿ ಓದುತ್ತಿರುವ ಚೈತ್ರಾ ಶಾಲಾ ದಿನದಿಂದಲೂ ಕೊಕ್ಕೊನಲ್ಲಿ ತೊಡಗಿಸಿಕೊಂಡವರು. ಈವರೆಗೆ 30ಕ್ಕೂ ಹೆಚ್ಚು ಟೂರ್ನಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು, 11 ಚಿನ್ನ ಸಹಿತ ಹಲವು ಪದಕಗಳಿಗೆ ಕೊರಳೊಡ್ಡಿದ್ದಾರೆ.
- ಕುರುಬೂರು ಎಂಬ ಕ್ರೀಡಾಪಟುಗಳ ಗ್ರಾಮ ನಾಡಿಗೆ ಸಾಲುಸಾಲು ಕೊಕ್ಕೊ ಪಟುಗಳನ್ನು ಕೊಡುಗೆಯಾಗಿ ಕೊಟ್ಟ ಕೀರ್ತಿ ತಿ. ನರಸೀಪುರ ತಾಲ್ಲೂಕಿನ ಕುರುಬೂರಿನದ್ದು. ಅಲ್ಲಿನ ವಿದ್ಯಾದರ್ಶಿನಿ ಕಾನ್ವೆಂಟ್‌ನ ಅಂಗಳ ಚೈತ್ರಾರಂತಹ ಹತ್ತಾರು ಕ್ರೀಡಾಪಟುಗಳ ಭವಿಷ್ಯ ರೂಪಿಸಿದೆ. ಮಂಜುನಾಥ್‌ರಂತಹ ತರಬೇತುದಾರರ ಗರಡಿಯಲ್ಲಿ ಕ್ರೀಡಾಪಟುಗಳು ಬೆಳಗುತ್ತಿದ್ದಾರೆ. ಬೆಳಿಗ್ಗೆ 6ಕ್ಕೆ ಕೊಕ್ಕೊ ಅಭ್ಯಾಸ ಆರಂಭಗೊಂಡರೆ 9ರವರೆಗೂ ಮುಂದುವರಿಯುತ್ತದೆ. ಮತ್ತೆ ಸಂಜೆಯೂ ಅಭ್ಯಾಸ ನಿರಂತರವಾಗಿರುತ್ತದೆ.
- ಸಾಮಾಜಿಕ ಜಾಲತಾಣಗಳಲ್ಲೂ ಅಭಿನಂದನೆ
ಸಾಮಾಜಿಕ ಜಾಲತಾಣಗಳಲ್ಲಿ ಚೈತ್ರಾಗೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯ ರೈತನ ಮಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ‘ನಿನ್ನ ಈ ಸಾಧನೆ ಯುವಜನರಿಗೆ ಸ್ಪೂರ್ತಿ. ಕರ್ನಾಟಕವೇ ಇದಕ್ಕೆ ಹೆಮ್ಮೆ ಪಡುತ್ತಿದೆ’ ಎಂದಿದ್ದಾರೆ. ಇನ್ನೂ ಹತ್ತು ಹಲವು ಗಣ್ಯರು ಚೈತ್ರಾಗೆ ಅಭಿನಂದನೆ ಸಲ್ಲಿಸಿದ್ದಾರೆ.
- ‘ಚೈತ್ರೋತ್ಸವ’ ಇಂದು
ಚೈತ್ರಾಳ ಸಾಧನೆಯನ್ನು ಸಂಭ್ರಮಿಸುವ ಸಲುವಾಗಿ ತಿ. ನರಸೀಪುರದಲ್ಲಿ ಮಂಗಳವಾರ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ‘ಚೈತ್ರೋತ್ಸವ’ ಕಾರ್ಯಕ್ರಮ ನಡೆಯಲಿದೆ. ‘ಸಂಜೆ 5ಕ್ಕೆ ತಿ. ನರಸೀಪುರದ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಆರಂಭಗೊಳ್ಳಲಿದ್ದು ವಿವಿಧ ಶಾಲಾ–ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ವಿದ್ಯೋದಯ ಕಾಲೇಜುವರೆಗೆ ಚೈತ್ರಾರನ್ನು ಬೆಳ್ಳಿರಥದಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಗುವುದು. ಸಂಜೆ 6ಕ್ಕೆ ವಿದ್ಯೋದಯ ಕಾಲೇಜು ಆವರಣದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ’ ಎಂದು ಸೇವಾಶ್ರಯ ಫೌಂಡೇಶನ್ ಅಧ್ಯಕ್ಷ ಆರ್. ಮಣಿಕಂಠರಾಜ್ ಗೌಡ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.