ಮೈಸೂರು: ನಗರದಾದ್ಯಂತ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ. ಬುಧವಾರವೇ ಗಣೇಶ ಚತುರ್ಥಿ ಮುಗಿದಿದ್ದರೂ ಭಕ್ತರ ಉತ್ಸಾಹ ಮಾತ್ರ ಕಡಿಮೆ ಆಗಿಲ್ಲ.
ನಗರದೆಲ್ಲೆಡೆ ಸದ್ಯ ವಿನಾಯಕನ ಮೂರ್ತಿಗಳೇ ಕಾಣುತ್ತಿವೆ. ಮುಖ್ಯರಸ್ತೆಗಳು ಮಾತ್ರವಲ್ಲದೆ ಗಲ್ಲಿ–ಗಲ್ಲಿಯಲ್ಲೂ ವಿನಾಯಕನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ನಾನಾ ಗಾತ್ರ ಹಾಗೂ ಆಕಾರದ ಮೂರ್ತಿಗಳು ಒದಕ್ಕೊಂದು ಪೈಪೋಟಿಯ ರೀತಿಯಲ್ಲಿ ಕಂಗೊಳಿಸುತ್ತಿವೆ. ಬೃಹತ್ ಆದ ವೇದಿಕೆಗಳನ್ನು ನಿರ್ಮಿಸಿ, ಅಷ್ಟೇ ಚೆಂದದ ಅಲಂಕಾರ ಮಾಡಿ ಅಲ್ಲಿ ವಿಘ್ನ ವಿನಾಶಕನನ್ನು ಇಟ್ಟು ಪೂಜಿಸಲಾಗುತ್ತಿದೆ.
ಕೆ.ಜಿ. ಕೊಪ್ಪಲಿನ ಕನ್ನೇಗೌಡ ವೃತ್ತದಲ್ಲಿ ಕನ್ನೇಗೌಡ ಟೈಗರ್ಸ್ ಬಳಗವು ನಗರದಲ್ಲಿ ಅತಿ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ. 28 ಅಡಿಯಷ್ಟು ಎತ್ತರವಾಗಿರುವ ಈ ದೈತ್ಯಾಕಾರದ ಮೂರ್ತಿಯಲ್ಲಿ ಗಣೇಶ ಅಶ್ವಗಳ ಮೇಲೆ ವಿರಾಜಮಾನನಾಗಿದ್ದು, ಹಿನ್ನೆಲೆಯಲ್ಲಿ ತ್ರಿಮೂರ್ತಿಗಳ ಚಿತ್ರವಿದೆ. ನಿತ್ಯ ಸಾವಿರಾರು ಭಕ್ತರು ಭೇಟಿ ಕೊಟ್ಟು ವೀಕ್ಷಿಸುತ್ತಿದ್ದು, ಸೆಲ್ಫಿ ಸಂಭ್ರಮವೂ ಜೋರಾಗಿದೆ. ಬ್ಯಾರಿಕೇಡ್‌ಗಳನ್ನು ಹಾಕಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ರಾಮಸ್ವಾಮಿ ವೃತ್ತದ ಬಳಿ ಅಥರ್ವ ಗೆಳೆಯರ ಬಳಗವು 22 ಅಡಿ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಗಮನ ಸೆಳೆಯುವಂತೆ ಇದೆ. ಬೋಗಾದಿಯ ಸರಸ್ವತಿನಗರದಲ್ಲಿ ಕಿಂಗ್ಸ್ ಆಫ್ ಕಿಂಗ್ಸ್ ಬಳಗವು ಸಹ 22 ಅಡಿ ಎತ್ತರದ ಮೂರ್ತಿ ಇಟ್ಟಿದೆ. ಈ ಎಲ್ಲ ಮೂರ್ತಿಗಳನ್ನು ದೇವನಹಳ್ಳಿ ಮೊದಲಾದ ಕಡೆಗಳಿಂದ ತರಲಾಗಿದ್ದು, ಇವುಗಳ ಬೆಲೆಯೇ ₹2–3 ಲಕ್ಷದಷ್ಟಿದೆ.
ಆಲನಹಳ್ಳಿ ಗಿರಿದರ್ಶಿನಿ ಬಡಾವಣೆಯ ಗಣಪತಿ ದೇವಸ್ಥಾನದಲ್ಲೂ ಪ್ರತಿ ವರ್ಷದಂತೆ ನೂರಾರು ಗಣಪತಿ ಮೂರ್ತಿಗಳನ್ನು ಸಾಮೂಹಿಕವಾಗಿ ಪ್ರತಿಷ್ಠಾಪಿಸಲಾಗಿದೆ. ಬಲ್ಲಾಳ ವೃತ್ತದ ಬಳಿಯ ಮಾಧವ ಕೃಪ, ಸರಸ್ವತಿಪುರಂನ ಚಂದ್ರಮೌಳೀಶ್ವರ ದೇಗುಲ, ಪಡುವಾರಹಳ್ಳಿ, ವಿಜಯನಗರ, ಬೋಗಾದಿ ಮೊದಲಾದ ಕಡೆಯೂ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. 500ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಈ ಬಾರಿ ಪೊಲೀಸರಿಂದ ಅನುಮತಿ ಪಡೆದು ಮೂರ್ತಿ ಪ್ರತಿಷ್ಠಾಪನೆ ಮಾಡಿವೆ. ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆಯೂ ನಡೆದಿದೆ.
ಹಬ್ಬ ಆಚರಣೆ
ಬುಧವಾರ ನಗರದೆಲ್ಲೆಡೆ ಗಣೇಶ ಚತುರ್ಥಿಯನ್ನು ಜನ ಸಂಭ್ರಮದಿಂದ ಆಚರಿಸಿದರು. ಗಣಪತಿ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಮಹಾ ಸಂಕಲ್ಪ, ಗಂಗೆಪೂಜೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾ ರುದ್ರಾಭಿಷೇಕ, ನೈವೇದ್ಯ ನಡೆಯಿತು.
ಅಗ್ರಹಾರದ 101 ಗಣಪತಿ ದೇವಸ್ಥಾನ, ಅರಮನೆಯ ಕೋಟೆ ವಿನಾಯಕ ಸ್ವಾಮಿ ದೇವಸ್ಥಾನ, ಖಾಸಗಿ ಬಸ್ ನಿಲ್ದಾಣ ಬಳಿಯ ಪಂಚಮುಖಿ ದೇವಸ್ಥಾನ, ಕೆ.ಆರ್.ಠಾಣೆ ಬಳಿಯ ಗಣಪತಿ ದೇವಸ್ಥಾನ, ಟಿ.ಕೆ. ಬಡಾವಣೆ, ಸಿದ್ಧಾರ್ಥನಗರ, ಪಡುವಾರಹಳ್ಳಿ, ಬೋಗಾದಿ 2ನೇ ಹಂತ, ಶಾರದಾದೇವಿ ನಗರ, ರಾಮಕೃಷ್ಣನಗರ ಮತ್ತು ವಿವೇಕಾನಂದ ವೃತ್ತ ಸೇರಿದಂತೆ ನಗರದ ವಿವಿಧೆಡೆ ಇರುವ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.
ಮನೆಗಳಲ್ಲಿ ಪ್ರತಿಷ್ಠಾಪನೆ
ಭಕ್ತರು ಮನೆಗಳಲ್ಲಿ ಸಣ್ಣ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರು.ವಿವಿಧ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಸಮರ್ಪಿಸಿದರು. ಸಂಜೆ ಬಳಿಕ ಅವುಗಳ ವಿಸರ್ಜನೆ ಕಾರ್ಯವೂ ನಡೆಯಿತು.
ಮೆರವಣಿಗೆಯಲ್ಲಿ ಮೂರ್ತಿಗಳನ್ನು ಕೊಂಡೊಯ್ದು ವಿಸರ್ಜಿಸಲಾಯಿತು. ಪಾಲಿಕೆಯು ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಟ್ಯಾಂಕರ್ ವ್ಯವಸ್ಥೆ ಮಾಡಿತ್ತು.
ಈ ಬಾರಿ ಮೆರವಣಿಗೆಯಲ್ಲಿ ಡಿ.ಜೆ. ಸೌಂಡ್ ಬಳಕೆಗೆ ಪೊಲೀಸರು ನಿರ್ಬಂಧ ವಿಧಿಸಿದ್ದು, ಇದರ ಬದಲಿಗೆ ಕಲಾ ತಂಡಗಳು ತಮ್ಮ ತಮಟೆ–ಡೊಳ್ಳು ಮೊದಲಾದ ಸ್ವರಗಳ ಮೂಲಕ ಹಬ್ಬದ ರಂಗು ಹೆಚ್ಚಿಸಿದವು.
ಶುಕ್ರವಾರ ಮೂರನೇ ದಿನದಂದು ಹಲವು ಗಣೇಶೋತ್ಸವ ಸಮಿತಿಗಳು ಮೂರ್ತಿಗಳ ವಿಸರ್ಜನೆಗೆ ಸಿದ್ಧತೆ ನಡೆಸಿವೆ. ಪೊಲೀಸರು ಮೆರವಣಿಗೆಗಳಿಗೆ ಭದ್ರತೆ ಒದಗಿಸಿದ್ದಾರೆ.
1021 ಗಣಪತಿ ಪ್ರತಿಷ್ಠಾಪನೆ
ನಗರದ ಬೃಂದಾವನ ಬಡಾವಣೆಯಲ್ಲಿ ಇದೇ ಮೊದಲ ಬಾರಿಗೆ 1021 ಗಣೇಶ ಮೂರ್ತಿಗಳನ್ನು ಸಾಮೂಹಿಕವಾಗಿ ಪ್ರತಿಷ್ಠಾಪಿಸಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಒಂದೇ ವಿನ್ಯಾಸದ ಮೂರ್ತಿಗಳನ್ನು ಸಾಲಾಗಿ ಜೋಡಿಸಿದ್ದು ಭಕ್ತರು ಒಟ್ಟಿಗೆ ದರ್ಶನ ಪಡೆಯುತ್ತಿದ್ದಾರೆ. ನಗರದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಮೂರ್ತಿಗಳ ಸಾಮೂಹಿಕ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಆಯೋಜಕರು ಹೇಳುತ್ತಾರೆ. ಮೂರ್ತಿ ಪ್ರತಿಷ್ಠಾಪನೆ ಜೊತೆಗೆ ‘ಬೃಂದಾವನ ರಂಗ ವೇದಿಕೆ’ ಯನ್ನು ನಿರ್ಮಿಸಿದ್ದು ಸೆಪ್ಟೆಂಬರ್ 4ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.