
ಮೈಸೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿರುವ ‘ದಿ ಇಂಡಿಯನ್ ಆರ್ಟಿಸನ್ಸ್ ಹಾತ್’ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವು ಗ್ರಾಹಕರನ್ನು ಆಕರ್ಷಿಸಿತು. ದೇಶದ ವಿವಿಧೆಡೆಯಿಂದ ಬಂದಿರುವ ಕರಕುಶಲಕರ್ಮಿಗಳು ತಯಾರಿಸಿದ ಪಾರಂಪರಿಕ ಕಲಾ ವಸ್ತುಗಳ ಜಾತ್ರೆಯು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಶುಕ್ರವಾರ ಆರಂಭವಾಯಿತು.
ಬಹುವೈವಿಧ್ಯದ ಕುಸುರಿಕಲೆಗಳ ಪರಿಕರಗಳು, ದೇಸಿ ಶೈಲಿಯಲ್ಲಿ ಮನೆಯನ್ನು ಅಲಂಕರಿಸಬಹುದಾದ ಅಗತ್ಯ ವಸ್ತುಗಳು, ಸೌಂದರ್ಯ ವರ್ಧಕಗಳು, ಆಹಾರೋತ್ಪನ್ನಗಳು, ತರಾವರಿ ಉಡುಪುಗಳು, ಪಿಂಗಾಣಿ ಪಾತ್ರೆಗಳು, ಜಂಬೆ, ಡರ್ಬೂಕ, ಲೋಹದಿಂದ ತಯಾರಿಸಿ ಸಂಗೀತ ಪರಿಕರಗಳು ಕುಶಲಕರ್ಮಿಗಳ ಶ್ರಮದ ಬದುಕಿಗೆ ಸಾಕ್ಷಿಯಾಗಿದ್ದವು!
ಚಂದದ ಮನೆಗೆ ಬೇಕಾದ ಅಗತ್ಯ ಅಲಂಕಾರಿಕ ವಸ್ತುಗಳು, ಪರಿಕರಗಳಲ್ಲಿ ಮೂಡಿದ ಸಾಂಪ್ರದಾಯಿಕ ಕುಸುರಿ ಕಲೆಯನ್ನು ನೋಡಿದವರು ವಸ್ತುಗಳನ್ನು ಕೊಂಡರು. ₹ 10ನಿಂದ ₹ 2.5 ಲಕ್ಷ ಮೌಲ್ಯದ ಕಲಾಕೃತಿಗಳೂ ಮೇಳದಲ್ಲಿವೆ.
ಮಣ್ಣಿನಿಂದ ಸಿದ್ಧಪಡಿಸಿದ ಒಡವೆಗಳು, ವಿವಿಧ ಲೋಹಗಳಿಂದ ಮಾಡಿದ ಆಭರಣ, ಲಖ್ನೋದ ಬಟ್ಟೆ ಹಾಗೂ ಚರ್ಮದಿಂದ ಮಾಡಿದ ಪಾದರಕ್ಷೆಗಳನ್ನು ಕೊಳ್ಳಲು ಯುವತಿಯರು ಗುಂಪಾದರು. ಹರಿಯಾಣದ ಫರಿದಾಬಾದ್‌ನ ಕಲಾವಿದರು ಅಮೃತಶಿಲೆಯ ಪುಡಿಯಿಂದ ರಚಿಸಿದ ಚಿತ್ರ ಕಲಾಕೃತಿಗಳು ಗಮನ ಸೆಳೆದವು. ₹ 1 ಸಾವಿರದಿಂದ ₹ 2.5 ಲಕ್ಷ ಮೌಲ್ಯದ ಚಿತ್ರ ಕಲಾಕೃತಿಗಳು ಲಭ್ಯವಿದ್ದವು. ಕಲಾವಿದೆ ರೂಹಿ ಸಾಂಪ್ರದಾಯಿಕ ಕಲೆಯ ಬಗ್ಗೆ ಮಾಹಿತಿಯನ್ನೂ ನೀಡಿದರು.
ಕೇರಳದ ವಯನಾಡ್‌ನ ‘ಓಲ್ವ್ ಕ್ರಿಯೇಶನ್ಸ್’ ಕಲಾವಿದರು ಮರದಿಂದ ತಯಾರಿಸಿದ ಆಟಿಕೆಗಳು, ಗೃಹಾಲಂಕಾರಿಕ ವಸ್ತುಗಳು ಗಮನ ಸೆಳೆದವು. ಮಂಗಟ್ಟೆ ಹಕ್ಕಿ, ಕೋಳಿ, ಹಾರುವ ಹಕ್ಕಿಗಳು ಅತ್ಯಾಕರ್ಷಕವಾಗಿದ್ದವು. ಅವುಗಳ ಬೆಲೆ ₹ 1,500ರಿಂದ ₹ 2,500 ಇತ್ತು.
ಆಂಧ್ರಪ್ರದೇಶದ ತಿರುಪತಿಯ ಸುಮಂತ್ ಹಾಗೂ ತಂಡದ ಕಲಾವಿದರು ಮಾಡಿರುವ ‘ನೀಲಗಿರಿ’ ಮರದ ಕಲಾಕೃತಿಗಳು ಆಕರ್ಷಿಸಿದವು. ಉತ್ತರಪ್ರದೇಶದ ಬಾರಬಂಕಿಯ ಮೈನುದ್ದೀನ್ ‘ಹ್ಯಾಪಿ ಡ್ರಂ’ ವಾದ್ಯ, ಜಂಬೆ, ಢಮರುಗ, ಡೋಲಾಕ್ ಸೇರಿದಂತೆ ಚರ್ಮಗಳನ್ನು ನುಡಿಸಿದ್ದು ಆಕರ್ಷಿಸಿತು. ಇದಲ್ಲದೇ ಸಾಹಿತ್ಯ ಪುಸ್ತಕ ಮಾರಾಟವೂ ಭರದಿಂದ ನಡೆದಿತ್ತು. ಶೇ 50ರವರೆಗೆ ರಿಯಾಯಿತಿಯೂ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.