ರೈಲು ನಿಲ್ದಾಣ ಸಮೀಪ ‘ಇಂದಿರಾ ಕಾಂಗ್ರೆಸ್ ಭವನ’ ನಿರ್ಮಾಣಕ್ಕೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೂಮಿಪೂಜೆ ನೆರವೇರಿಸಿದರು
ಪ್ರಜಾವಾಣಿ ಚಿತ್ರ
ಮೈಸೂರು: ‘ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಇಂದಿರಾ ಗಾಂಧಿ ಹೆಸರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಆಗುತ್ತಿದ್ದು, ವರ್ಷದ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ನಗರದ ರೈಲು ನಿಲ್ದಾಣ ಸಮೀಪ ಶನಿವಾರ ಅಂದಾಜು ₹10 ಕೋಟಿ ವೆಚ್ಚದಲ್ಲಿ ‘ಇಂದಿರಾ ಕಾಂಗ್ರೆಸ್ ಭವನ’ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಜಿಲ್ಲಾ ಕೇಂದ್ರದಲ್ಲಿ ಪಕ್ಷಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ದೇವರಾಜ ಅರಸು ಕಾಲದಲ್ಲಿ ಈ ಭೂಮಿಯನ್ನು ನೀಡಲಾಗಿತ್ತು. ತಿವಾರಿಯವರು ಇದನ್ನು ಜೋಪಾನ ಮಾಡಿದ್ದು, ಕಾಂಗ್ರೆಸ್ ಭವನಕ್ಕೆ ಬಳಕೆಯಾಗುತ್ತಿದೆ. ಕಾರ್ಯಕರ್ತರ ವಂತಿಗೆ ಹಣದಿಂದಲೇ ಈ ಭವನ ನಿರ್ಮಾಣ ಆಗಲಿದೆ. ಶಾಸಕರು, ಮುಖಂಡರ ಆದಿಯಾಗಿ ಪ್ರತಿಯೊಬ್ಬರೂ ಶಕ್ತಿ ಮೀರಿ ಎಲ್ಲರೂ ವಂತಿಗೆ ನೀಡಬೇಕು’ ಎಂದರು.
ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಕಾಂಗ್ರೆಸ್ ಕಚೇರಿ ನಮಗೆಲ್ಲ ದೇಗುಲವಿದ್ದಂತೆ. ಶಾಸಕರು ಹಾಗೂ ಬ್ಲಾಕ್ ಅಧ್ಯಕ್ಷರು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಚೇರಿ ನಿರ್ಮಾಣ ಮಾಡಿದಾಗ ಮಾತ್ರ ಪಕ್ಷ ನಿಮಗೆ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಿದ್ದಕ್ಕೆ ಸಾರ್ಥಕವಾಗುತ್ತದೆ. ಇಲ್ಲವಾದರೆ ಪಕ್ಷಕ್ಕೆ ನಿಮ್ಮ ಕೊಡುಗೆ ಏನೂ ಇರುವುದಿಲ್ಲ ಎಂದು ಸಂಕೋಚವಿಲ್ಲದೇ ಹೇಳುತ್ತೇನೆ’ ಎಂದರು.
‘ಇದು ಹೆಸರಿಗೆ ಕಾಂಗ್ರೆಸ್ ಭವನ. ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ಇದೊಂದು ದೇವಸ್ಥಾನ. ಪ್ರತಿಯೊಬ್ಬ ಕಾರ್ಯಕರ್ತರು ಕೈಲಾದಷ್ಟು ದೇಣಿಗೆ ನೀಡಿ ಈ ಭವನ ನಿರ್ಮಾಣಕ್ಕೆ ನೆರವಾಗಬೇಕು. ರಾಜ್ಯದ 100 ಕಡೆ ಕಾಂಗ್ರೆಸ್ ಕಚೇರಿ ನಿರ್ಮಿಸುವ ಗುರಿ ಹೊಂದಿದ್ದೇವೆ’ ಎಂದು ಹೇಳಿದರು.
ಮಾಜಿ ಶಾಸಕ ಮಂಜುನಾಥ್ ಅವರ ತಂದೆ ಪ್ರೇಮ್ ಕುಮಾರ್ ಭವನ ನಿರ್ಮಾಣಕ್ಕೆ ₹5 ಲಕ್ಷ ದೇಣಿಗೆ ನೀಡಿದರು.
ಸಚಿವರಾದ ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಸಂಸದ ಸುನಿಲ್ ಬೋಸ್, ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ರವಿಶಂಕರ್, ದರ್ಶನ್ ಧ್ರುವನಾರಾಯಣ, ವಿಧಾನಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಡಾ.ಡಿ. ತಿಮ್ಮಯ್ಯ, ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ, ಕಾಂಗ್ರೆಸ್ ಜಿಲ್ಲಾ ನಗರ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾ ಗ್ರಾಮಾಂತರ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಸೂರಜ್ ಹೆಗಡೆ ಇದ್ದರು.
ಕೇಕ್ ಒಲ್ಲೆ ಎಂದ ಸಿದ್ದರಾಮಯ್ಯ
ಈಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನ ಆಚರಿಸಿಕೊಂಡಿದ್ದು ಕಾರ್ಯಕ್ರಮದ ವೇದಿಕೆಯಲ್ಲಿಯೂ ಕೇಕ್ ಕತ್ತರಿಸಿ ಸಂಭ್ರಮಿಸಲು ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೇಕ್ ಕತ್ತರಿಸಲು ಒಪ್ಪದ ಸಿದ್ದರಾಮಯ್ಯ ಒಲ್ಲೆ ಎನ್ನುತ್ತಲೇ ಕೈ ಬೀಸಿ ಕೆಳಗೆ ಇಳಿದರು. ಕಡೆಗೆ ಕಾರ್ಯಕರ್ತರ ಅಭಿಮಾನಕ್ಕೆ ಮಣಿದು ಸನ್ಮಾನವನ್ನಷ್ಟೇ ಸ್ವೀಕರಿಸಿದರು. ತನ್ವೀರ್ ಸೇಠ್ ಅವರು ತಮ್ಮ ಭಾಷಣದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ‘ನನ್ನ ರಾಜಕೀಯ ಗುರು’ ಎಂದು ಕರೆದದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.