
ಮೈಸೂರು: ‘ಐಟಿಸಿ ಕಂಪನಿಯು ಹರಾಜಿನಲ್ಲಿ ನ್ಯಾಯಯುತ ಬೆಲೆಗೆ ತಂಬಾಕು ಖರೀದಿಸಬೇಕು. ರೈತರಿಗೆ ಅನ್ಯಾಯವಾದರೆ ಕಂಪನಿಯ ಗೋದಾಮುಗಳನ್ನು ಜಪ್ತಿ ಮಾಡಲಾಗುವುದು’ ಎಂದು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಸೋಮವರ ಇಲ್ಲಿ ಎಚ್ಚರಿಸಿದರು.
ತಂಬಾಕು ಬೆಳೆಗಾರರು, ಜಿಲ್ಲಾಡಳಿತ, ತಂಬಾಕು ಮಂಡಳಿ ಹಾಗೂ ಕಂಪನಿ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಅವರು, ‘ಹರಾಜು ಆರಂಭಗೊಂಡ ದಿನ ಇದ್ದ ಬೆಲೆ ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲೇ ಹರಾಜು ನಡೆಸಬೇಕು. ಕಂಪನಿಯವರು ಮಂಗಳವಾರ ಸಂಜೆ ಒಳಗೆ ನಿರ್ಧಾರ ಪ್ರಕಟಿಸಬೇಕು’ ಎಂದು ಸೂಚಿಸಿದರು.
‘ಹೊಗೆಸೊಪ್ಪು ಬೆಲೆ ಕುಸಿತದಿಂದ ರೈತರಿಗೆ ನಷ್ಟವಾಗುತ್ತಿದೆ. ಕಡಿಮೆ ಬೆಲೆಗೆ ಹರಾಜು ಮಾಡುವುದು, ಕಡಿಮೆ ಉತ್ಪನ್ನ ಖರೀದಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ತಂಬಾಕಿನಿಂದ ಬೇರೆ ಬೆಳೆಗಳಿಗೆ ರೈತರನ್ನು ಪರಿವರ್ತಿಸುವ ಕುರಿತು ಯೋಜನೆಗಳ ಅವಶ್ಯಕತೆ ಇದೆ. ಈ ಸಂಬಂಧ ಚರ್ಚೆಗೆ ಕೇಂದ್ರ ಸರ್ಕಾರದ ಬಳಿಗೆ ನಿಯೋಗ ಕರೆದೊಯ್ಯಲಾಗುವುದು’ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ‘ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 10 ಕೋಟಿ ಕೆ.ಜಿ.ಗಳಷ್ಟು ತಂಬಾಕು ಉತ್ಪಾದನೆಯ ಗುರಿ ಇತ್ತು. ಆದರೆ ಕೇವಲ 8 ಕೋಟಿ ಕೆ.ಜಿ.ಗಳಷ್ಟೇ ಉತ್ಪನ್ನವಾಗಿದೆ. ನಿರೀಕ್ಷೆಗಿಂತ ಕಡಿಮೆ ಇದ್ದರೂ ಕಂಪನಿಯು ಖರೀದಿಸದೆ ಸತಾಯಿಸುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.
‘ಕಂಪನಿಯ ಷೇರು ದರ ವ್ಯತ್ಯಾಸದಿಂದಾಗಿ ಹರಾಜಿನಲ್ಲಿ ವ್ಯತ್ಯಯವಾಗಿದೆ. ಆದರೆ ಹರಾಜು ನಿಲ್ಲಿಸಿಲ್ಲ. ಕೃಷಿಕರ ಸಮಸ್ಯೆಗಳನ್ನು ಪ್ರಧಾನ ಕಚೇರಿ ಗಮನಕ್ಕೆ ತರಲಾಗುವುದು’ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದರು.
ಬೆಲೆ ಕುಸಿತದಿಂದ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ. ಆಂಧ್ರಪ್ರದೇಶ ಮಾರುಕಟ್ಟೆ ತೆರೆಯುವ ಮೊದಲೇ ಇಲ್ಲಿನ ಸಮಸ್ಯೆ ಬಗೆಹರಿಸಿ ಹರಾಜು ಮುಗಿಸಬೇಕುಜಿ.ಡಿ. ಹರೀಶ್ ಗೌಡ ಹುಣಸೂರು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.