
ಮೈಸೂರು: ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಎಲ್‌ಎಸ್‌ಇಜಿ ಫೌಂಡೇಷನ್ ಸಹಯೋಗದಲ್ಲಿ ಉದ್ಯೋಗ ಮೇಳ ನಡೆಸಲಾಯಿತು.
35ಕ್ಕೂ ಹೆಚ್ಚು ಕಂಪನಿಗಳು ಹಾಗೂ ಸಾವಿರಕ್ಕೂ ಹೆಚ್ಚಿನ ಆಕಾಂಕ್ಷಿಗಳು ಪಾಲ್ಗೊಂಡಿದ್ದರು.
ಚಾಲನೆ ನೀಡಿದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ‘ಶಿಕ್ಷಣ ಮತ್ತು ಅವಕಾಶಗಳು ವಿದ್ಯಾರ್ಥಿಗಳೆಲ್ಲರಿಗೂ ಸಮಾನವಾಗಿ ಲಭ್ಯವಾಗಬೇಕು ಎಂಬ ನಂಬಿಕೆ ನಮ್ಮದು. ಇಂದಿನ ಉದ್ಯೋಗ ಮೇಳವು ಆ ನಂಬಿಕೆಯನ್ನು ಸಾಕಾರಗೊಳಿಸುವ ವೇದಿಕೆಯಾಗಿದೆ’ ಎಂದು ಹೇಳಿದರು.
‘ವೈವಿಧ್ಯಮಯ ಜೀವನ ಹಂತಗಳ ವಿದ್ಯಾರ್ಥಿಗಳು ಹಾಗೂ ವೈವಿಧ್ಯತೆಯನ್ನು ಗೌರವಿಸುವ ಕಂಪನಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವಲ್ಲಿ ಮೇಳ ಯಶಸ್ವಿಯಾಗಿದೆ. ಉದ್ಯೋಗ ಮೇಳವೆಂದರೆ ಕೇವಲ ಕಾರ್ಯಕ್ರಮವಲ್ಲ. ಅದು ಪ್ರೇರಣೆಯೂ ಹೌದು. ವಿದ್ಯಾರ್ಥಿಗಳು ಸಾಮರ್ಥ್ಯವನ್ನು ಪ್ರದರ್ಶಿಸಲು ದೊರೆಯುವ ಸುವರ್ಣ ಅವಕಾಶವೂ ಹೌದು. ಇಂದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಎಂ. ಪ್ರಭು ಮಾತನಾಡಿ, ‘ದೇಶದ ಆರ್ಥಿಕ ಪ್ರಗತಿಯಲ್ಲಿ ಉದ್ಯೋಗ ಮಹತ್ವದ ಪಾತ್ರ ವಹಿಸುತ್ತದೆ. ಯುವಜನರು ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸಲು ನೆರವಾಗುವ ಉದ್ದೇಶದಿಂದಲೇ ಇಂತಹ ಮೇಳವನ್ನು ಆಯೋಜಿಸಲಾಗುತ್ತಿದೆ’ ಎಂದರು.
ಕಾಲೇಜಿನ ಉದ್ಯೋಗಾಧಿಕಾರಿ ಜಿ.ಕಾರ್ತಿಕ್, ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು, ಪ್ರಾಧ್ಯಾಪಕರಾದ ಬಿ.ಎಲ್. ಕಿರಣ್, ಸೌಮ್ಯಾ, ಸಮರ್ಥನಂ ಸಂಸ್ಥೆಯ ವೀರಭದ್ರ ಪಟೇಲ್, ಮಹಾಂತೇಶ್, ಆರ್. ಸುಬ್ರಮಣಿ ಉಪಸ್ಥಿತರಿದ್ದರು.
‘ನಿರುದ್ಯೋಗದಿಂದ ಅಭಿವೃದ್ಧಿ ಕುಂಠಿತ’
‘ನಿರುದ್ಯೋಗದಿಂದಾಗಿ ಅನೇಕ ದೇಶಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ. ಹಿಂದೆ ಉದ್ಯೋಗವನ್ನು ಉದ್ಯೋಗಂ ಪುರುಷ ಲಕ್ಷಣಂ ಎನ್ನಲಾಗುತ್ತಿತ್ತು. ಆದರೆ ಇಂದು ಉದ್ಯೋಗಂ ಸರ್ವ ಲಕ್ಷಣ ಎಂಬಂತಾಗಿದ್ದು ಎಲ್ಲರಿಗೂ ಅಗತ್ಯವೂ ಆಗಿದೆ. ಹಿಂದೆ ಕಾಲೇಜುಗಳಲ್ಲಿ ಉದ್ಯೋಗದಾತರು ಬಂದು ನೇರ ಸಂದರ್ಶನ ನಡೆಸುವುದು ಕಡಿಮೆ ಇತ್ತು. ಇಂದಿನ ದಿನಗಳಲ್ಲಿ ಉದ್ಯೋಗ ಮೇಳಗಳು ಸಾಮಾನ್ಯವಾಗಿದ್ದು ಉತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಕಾರಿಯಾಗಿವೆ’ ಎಂದು ಹೇಳಿದರು. ಸಮರ್ಥನಂ ಅಂಗವಿಕಲರ ಸಂಸ್ಥೆಯ ಬೆಂಗಳೂರು ಕೇಂದ್ರದ ಮುಖ್ಯಸ್ಥ ಸುಭಾಷ್ ಚಂದ್ರ ‘ಸಮರ್ಥನಂ ಸಂಸ್ಥೆಯು ಭಾರತದಲ್ಲಿನ ದೃಷ್ಟಿಹೀನರು ಅಂಗವಿಕಲರು ಹಾಗೂ ಅವಕಾಶ ವಂಚಿತರ ಸಬಲೀಕರಣಕ್ಕಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.