ADVERTISEMENT

ಮೈಸೂರು | ಜೀವಜಾಲದ ತಾಣದಲ್ಲಿ ಕ್ರೀಡಾಂಗಣ

50ಕ್ಕೂ ಹೆಚ್ಚು ಪ್ರಭೇದದ ಪಕ್ಷಿ ಹಾಗೂ ಪತಂಗ ಪತ್ತೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 4:13 IST
Last Updated 17 ಫೆಬ್ರುವರಿ 2026, 4:13 IST
ಬೂದು ಮಂಗಟ್ಟೆ ಜೋಡಿ
ಬೂದು ಮಂಗಟ್ಟೆ ಜೋಡಿ   

ಮೈಸೂರು: ತಿ.ನರಸೀಪುರದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ (ಕೆಎಸ್‌ಐಸಿ) 5 ಎಕರೆ ಆವರಣದಲ್ಲಿ ಕ್ರೀಡಾಂಗಣ ತಲೆ ಎತ್ತಲಿದ್ದು, ಈ ಜಾಗದಲ್ಲಿ 80 ವರ್ಷಕ್ಕೂ ಹಳೆಯ 552 ಮರಗಳ ಹನನ ನಡೆಯುವ ಆತಂಕ ವ್ಯಕ್ತಪಡಿಸಿರುವ ಪರಿಸರವಾದಿಗಳು ‘ಜೀವವೈವಿಧ್ಯ’ ಸಮೀಕ್ಷೆ ನಡೆಸಿದ್ದಾರೆ. ಈ ವೇಳೆ 50ಕ್ಕೂ ಹೆಚ್ಚು ಪ್ರಭೇದದ ಪಕ್ಷಿ ಹಾಗೂ ಪತಂಗಗಳನ್ನು ಗುರುತಿಸಿದ್ದಾರೆ. 

ಮರಗಳ ಹನನ ವಿರೋಧಿಸಿ ಚಳವಳಿ ನಡೆಸುತ್ತಿರುವ ‘ಪರಿಸರಕ್ಕಾಗಿ ನಾವು’ ಸಂಘಟನೆಯ ಪರಶುರಾಮೇಗೌಡ ಮತ್ತು ತಂಡದವರು ಪಕ್ಷಿ ವೀಕ್ಷಕರಾದ ಸಂಜಯ್ ದತ್ತಾತ್ರಿ, ಸಹನಾ, ಕಶ್ಯಪ್ ಅವರೊಂದಿಗೆ ಅಧ್ಯಯನ ನಡೆಸಿ, ಸದರಿ ಜಾಗವನ್ನು ಆವಾಸಸ್ಥಾನವಾಗಿ ಮಾಡಿಕೊಂಡಿರುವ 39 ಪಕ್ಷಿಗಳು ಹಾಗೂ 10ಕ್ಕೂ ಪ್ರಭೇದದ ಚಿಟ್ಟೆಗಳ ಮಾಹಿತಿ ಸಂಗ್ರಹಿಸಿದ್ದಾರೆ. ಈ ಹಿಂದೆ ಬಳಗವು 552 ಮರಗಳನ್ನು ಲೆಕ್ಕ ಹಾಕಿತ್ತು. 

ಹಕ್ಕಿಗಳು ಯಾವ್ಯಾವು: ಕಾಜಾಣ, ನವಿಲು, ಪಾರಿವಾಳ, ಚೋರೆ ಹಕ್ಕಿ, ಕೆಂಬೂತ, ಏಷ್ಯಾದ ಕೋಗಿಲೆ, ಬೂದು ಕೋಗಿಲೆ, ನೀರು ಕಾಗೆ, ಕರಿ ಕೆಂಬರಲು, ಕೊಕ್ಕರೆ, ಕತ್ತಲಗುಪ್ಪಿ, ಗೋವಕ್ಕಿ, ಜೇನುಗಿಡುಗ, ಗಿಡುಗ, ಗರುಡ, ಹದ್ದು, ಮಚ್ಚೆಗೂಬೆ, ಬೂದು ಮಂಗಟ್ಟೆ, ಕಳ್ಳಿಪೀರ, ನೀಲಿಬಾಲದ ಕಳ್ಳಿಪೀರ, ಬಿಳಿ ಕಂಠದ ಮಿಂಚುಳ್ಳಿ, ಕಂಚುಕುಟಿಗ, ಬಿಳಿಕೆನ್ನೆಯ ಕುಟಿಗ, ಮರಕುಟಿಗ, ರಾಮಗಿಳಿ, ಬುರುಡೆ ಹಕ್ಕಿ, ಬಾಲದಂಡೆ ಹಕ್ಕಿ (ಇಂಡಿಯನ್ ಪ್ಯಾರಡೈಸ್‌ ಫ್ಲೈಕ್ಯಾಚರ್), ಮನೆ ಕಾಗೆ, ಉದ್ದಕೊಕ್ಕಿನ ಕಾಗೆ, ಟುವ್ವಿ ಹಕ್ಕಿ, ಗದ್ದೆ ಟುವ್ವಿ, ಕೆಂಪುಬೆನ್ನಿನ ಕವಲುತೋಕೆ, ಕೆಂಪುಮೀಸೆಯ ಪಿಕಳಾರ (ಬುಲ್‌ಬುಲ್‌), ಕಬ್ಬಕ್ಕಿ, ಮೈನಾ, ಕಾಡು ಮೈನಾ, ಮಡಿವಾಳ ಹಕ್ಕಿ, ಬದನಿಕೆ ಹಕ್ಕಿ, ನೇರಳೆ ಬೆನ್ನಿನ ಸೂರಕ್ಕಿ, ನೇರಳೆ ಸೂರಕ್ಕಿ, ಗುಬ್ಬಚ್ಚಿ ಹಕ್ಕಿಗಳನ್ನು ತಂಡವು ಲೆಕ್ಕ ಹಾಕಿದೆ.

ADVERTISEMENT

ಬುದ್ದಿಗೇಡಿ ಕೆಲಸ: ‘ಜೀವವೈವಿಧ್ಯದ ಸ್ಥಳದಲ್ಲಿ ಮರಗಳನ್ನು ಕಡಿದರೆ ಅಲ್ಲಿನ ಜೀವಜಾಲವನ್ನು ನಾಶ ಮಾಡಿದಂತಾಗುತ್ತದೆ. ಇಲ್ಲಿ ಕ್ರೀಡಾಂಗಣ ಕಟ್ಟುವುದು ಅತ್ಯಂತ ಬುದ್ದಿಗೇಡಿ ಕೆಲಸ’ ಎಂದು ಪರಿಸರ ಬಳಗದ ಪರಶುರಾಮೇಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕ್ರೀಡಾಂಗಣ ನಿರ್ಮಾಣ ಮಾಡಿದರೆ ಕಾರ್ಖಾನೆ ಮುಚ್ಚಬೇಕಾಗುತ್ತದೆ. ಗುಣಮಟ್ಟದ ರೇಷ್ಮೆ ಸೀರೆ ತಯಾರಿಕೆಗೂ ತೊಂದರೆ ಆಗುತ್ತದೆ. ಸಿಬ್ಬಂದಿ ಮತ್ತು ಕಾರ್ಮಿಕರೂ ಕೆಲಸ ಕಳೆದುಕೊಳ್ಳಲಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು. 

ಕಳ್ಳಿಪೀರ
ಗೂಬೆ 

ಜಾಗ ವಾಪಸ್‌ಗೆ ಮನವಿ ಇಂದು  ‘ಕೆಎಸ್ಐಸಿ ನೇಯ್ಗೆ ಕಾರ್ಖಾನೆ ಆವರಣದಲ್ಲಿನ 5 ಎಕರೆ ಜಾಗವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮಾಡಿರುವ ವರ್ಗಾವಣೆಯನ್ನು ರದ್ದುಗೊಳಿಸಬೇಕು’ ಎಂದು ಪರಿಸರಕ್ಕಾಗಿ ನಾವು ಸಂಘಟನೆ ಸದಸ್ಯರು ಫೆ.17ರಂದು ಬೆಳಿಗ್ಗೆ 10.30ಕ್ಕೆ ಮನವಿ ಸಲ್ಲಿಸಲಿದ್ದಾರೆ.  ‍ಪ್ರೊ.ಕೆ.ಕಾಳಚನ್ನೇಗೌಡ ಗಂಟಯ್ಯ ಭಾನು ಪ್ರಶಾಂತ್ ಗಾಯತ್ರಿ ಸುಗುಣ ಶ್ರೀಲಕ್ಷ್ಮಿ ವಿಶ್ವನಾಥ್‌ ಪರಶುರಾಮೇಗೌಡ ಪ್ರೊ.ಎನ್‌.ಎಸ್‌.ರಂಗರಾಜು ಸಿಂಧುವಳ್ಳಿ ಅಕ್ಬರ್ ಗಣೇಶ್‌ ಲಕ್ಷ್ಮಣ್‌ ಪಾಲ್ಗೊಳ್ಳುವರು ಎಂದು ಸಂಘಟನೆ ತಿಳಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.