
ಮೈಸೂರು: ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನ ನಾಲ್ವರು ಹಳೆ ವಿದ್ಯಾರ್ಥಿಗಳು 2025ರ ಸಿವಿಲ್ ನ್ಯಾಯಾಧೀಶ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಆಯ್ಕೆಯಾದ 83 ಅಭ್ಯರ್ಥಿಗಳಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಭಾಗ್ಯರತ್ನ ನಾಯ್ಕ್, ಎಂ.ಸೌಂದರ್ಯ, ಆರ್.ವರುಣ್ ರಾಜ್ ಹಾಗೂ ಎನ್.ದೀಪಿಕಾ ಅವರು ಕ್ರಮವಾಗಿ 8, 15, 16 ಹಾಗೂ 32ನೇ ಸ್ಥಾನ ಪಡೆದಿದ್ದಾರೆ.
ನಗರದ ಗಾಂಧಿನಗರ ನಿವಾಸಿಯಾದ ಆರ್.ವರುಣ್‌ರಾಜ್ ಅವರು ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಸಿ.ರಾಜೇಂದ್ರ ಮತ್ತು ನ್ಯಾಯಾಲಯದ ಶೀಘ್ರಲಿಪಿಕಾರರಾದ ಪಿ.ಮಹಾಲಕ್ಷ್ಮಿ ದಂಪತಿ ಪುತ್ರ.
‘ಪೋಷಕರು, ಪ್ರಾಧ್ಯಾಪಕರು ಹಾಗೂ ಹಿರಿಯ ವಕೀಲರ ನೆರವಿನಿಂದ ಈ ಸಾಧನೆ ಸಾಧ್ಯವಾಗಿದೆ. ಉಳಿ ಪೆಟ್ಟುಗಳಿಂದ ಕಲ್ಲು, ಪ್ರತಿಮೆಯಾಗುವಂತೆ ಇವರೆಲ್ಲರೂ ಸಹಾಯ ಮಾಡಿದ್ದಾರೆ’ ಎಂದು ವರುಣ್ ಹೇಳಿದರು.
ರಮ್ಮನಹಳ್ಳಿ ನಿವಾಸಿ ಎಂ.ಸೌಂದರ್ಯ ಅವರು ಮೀನು ವ್ಯಾಪಾರಿ ಮಹದೇವು– ಚಂದ್ರಕಲಾ ದಂಪತಿ ಪುತ್ರಿ. ಭಾಗ್ಯರತ್ನ ನಾಯ್ಕ್ ಅವರು ರಾಯಚೂರು ಜಿಲ್ಲೆಯವರಾಗಿದ್ದು, 2016–21ರಲ್ಲಿ ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು. ಅವರು ಕಸನಪ್ಪ– ಸುಲೋಚನಾ ನಾಯ್ಕ್ ದಂಪತಿ ಪುತ್ರಿ. ತಂದೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಾಗಿದ್ದರು. 3ನೇ ಪ‍್ರಯತ್ನದಲ್ಲಿ ತೇರ್ಗಡೆಯಾಗಿರುವ ಅವರು ಪೋಷಕರು ಮತ್ತು ಪ್ರಾಧ್ಯಾಪಕರ ನೆರವನ್ನು ಸ್ಮರಿಸಿದರು.
ಮಂಡ್ಯ ಜಿಲ್ಲೆಯ ಕೆರಗೋಡಿನ ಗ್ರಾಮೀಣ ಪ್ರತಿಭೆ ಎನ್.ದೀಪಿಕಾ ತಮ್ಮ 5ನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದೆ.
ರಮ್ಯಾ ಸಾಧನೆ
ನಂಜನಗೂಡು: ತಾಲ್ಲೂಕಿನ ಕಿರುಗುಂದ ಗ್ರಾಮದ ಜಾನಪದ ಗಾಯಕ ರಾಜೇಂದ್ರ ಪ್ರಸಾದ್ ಅವರ ಪುತ್ರಿ ಆರ್.ರಮ್ಯಾ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಪದವಿ ನಂತರ ವಕೀಲರಾಗಿ ವೃತ್ತಿ ಆರಂಭಿಸಿದ ಅವರು ನ್ಯಾಯಾಧೀಶರಾಗುವ ಹಂಬಲ ಹೊಂದಿದ್ದರು. ಇದೀಗ 76ನೇ ರ‍್ಯಾಂಕ್‌ನೊಂದಿಗೆ ತೇರ್ಗಡೆಯಾಗಿದ್ದಾರೆ. ಅವರ ಸಾಧನೆಗೆ ಗ್ರಾಮವು ಸಂಭ್ರಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.