ಸದ್ದಾಂ
ಮೈಸೂರು: ಇಲ್ಲಿನ ಮಹಾರಾಣಿ ಕಾಲೇಜಿನ ಶಿಥಿಲಗೊಂಡಿದ್ದ ಕಟ್ಟಡ ತೆರವುಗೊಳಿಸುತ್ತಿದ್ದಾಗ ಮೇಲ್ಛಾವಣಿ ಕುಸಿದು ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕನ ಮೃತದೇಹ ಮಂಗಳವಾರ ತಡರಾತ್ರಿ ಪತ್ತೆಯಾಗಿದೆ.
ಗೌಸಿಯಾನಗರದ ನಿವಾಸಿ ಸದ್ದಾಂ (32) ಮೃತ ವ್ಯಕ್ತಿ. ವಿಜ್ಞಾನ ಕಾಲೇಜಿಗೆ ಸೇರಿದ 107 ವರ್ಷಗಳ ಹಳೆಯ ಕಟ್ಟಡದ ಒಂದು ಭಾಗವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಯೋಜಿಸಲಾಗಿತ್ತು.
ಸೋಮವಾರದಿಂದ 15 ಕಾರ್ಮಿಕರನ್ನು ಈ ಕೆಲಸಕ್ಕಾಗಿ ನೇಮಿಸಿದ್ದರು. ಅವರು ಮಂಗಳವಾರ ಕಟ್ಟಡದಲ್ಲಿನ ಕಿಟಕಿಗಳನ್ನು ತೆರವುಗೊಳಿಸುತ್ತಿದ್ದರು. ಸಂಜೆ 5ರ ವೇಳೆಗೆ ಎಲ್ಲರೂ ಚಹಾ ಸೇವನೆ ಮಾಡುತ್ತಿದ್ದಾಗ ಸದ್ದಾಂ ಈ ಹಿಂದೆ ಎವಿ (ಆಡಿಯೋ ವಿಶುವಲ್) ಕೊಠಡಿಯಾಗಿದ್ದ ಕೋಣೆಗೆ ತೆರಳಿದ್ದಾಗ ಕಟ್ಟಡ ಒಂದು ಭಾಗದ ಚಾವಣಿ ದಿಢೀರ್ ಕುಸಿದಿತ್ತು.
ಸದ್ದಾಂ ಪತ್ತೆಗಾಗಿ ಮಂಗಳವಾರ ಸಂಜೆ 5 ರಿಂದ ಅಗ್ನಿಶಾಮಕ ದಳ, ನಗರಸಭೆ ಸಿಬ್ಬಂದಿ, ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದರು. ಹಿಟಾಚಿ ಮೂಲಕ ಕಾರ್ಯಾಚರಣೆ ನಡೆಸಿದಾಗ ತಡರಾತ್ರಿ 2.30 ರ ಸುಮಾರಿಗೆ ಮೃತದೇಹ ಪತ್ತೆಯಾಗಿದೆ. 'ಹಿಟಾಚಿ ಕಾರ್ಯಾಚರಣೆಯ ವೇಳೆ ದೇಹದ ಎರಡು ಭಾಗವಾಗಿತ್ತು' ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.