ADVERTISEMENT

ದಸರೆಗೆ ಮುನ್ನ ಗುಂಡಿ ಮುಚ್ಚಿ

ಪ್ರಥಮ ಸಭೆ ನಡೆಸಿದ ಮೇಯರ್‌, ಅಧಿಕಾರಿಗಳಿಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 13:37 IST
Last Updated 12 ಸೆಪ್ಟೆಂಬರ್ 2022, 13:37 IST
ನಗರಪಾಲಿಕೆಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮೇಯರ್‌ ಶಿವಕುಮಾರ್‌ ಮಾತನಾಡಿದರು
ನಗರಪಾಲಿಕೆಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮೇಯರ್‌ ಶಿವಕುಮಾರ್‌ ಮಾತನಾಡಿದರು   

ಮೈಸೂರು: ‘ನಗರದಲ್ಲಿ ದಸರಾ ಆರಂಭಕ್ಕೂ ಮುನ್ನವೇ ರಸ್ತೆ ಗುಂಡಿಗಳನ್ನು ಮುಚ್ಚಬೇಕು’ ಎಂದು ಮೇಯರ್‌ ಶಿವಕುಮಾರ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಾಲಿಕೆಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಮೊದಲ ಸಭೆಯಲ್ಲಿ ಅವರು ಮಾತನಾಡಿದರು.

‘ಮಳೆಯು ನವೆಂಬರ್‌ವರೆಗೂ ಮುಂದುವರಿಯುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ತಿಂಗಳ ಕೊನೆಯ ವಾರದಲ್ಲಿ ನಾಡಹಬ್ಬ ಶುರುವಾಗಲಿದೆ. ಹೀಗಾಗಿ, ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

‘ಅಧಿಕಾರಿಗಳು ವಾರ್ಡ್‌ಗಳಿಗೆ ತೆರಳಿ ಜನರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸಬೇಕು. ಕಚೇರಿಯಲ್ಲೇ ಕೂರುವ ಕಾರ್ಯವೈಖರಿಯನ್ನು ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ನಾವೇ ಬದಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಸಹಕಾರ ಕೊಡಬೇಕು:

‘ಆಡಳಿತದಲ್ಲಿ ಚುರುಕು ಮುಟ್ಟಿಸಲು, ಸುಧಾರಣೆ ತರಲು ವಿಭಿನ್ನ ಕಾರ್ಯನಿರ್ವಹಣೆಗೆ ಯೋಜಿಸಲಾಗಿದ್ದು, ಅದಕ್ಕೆ ಅಧಿಕಾರಿಗಳು ಸಹಕಾರ ಕೊಡಬೇಕು. ಏನೇ ಸಮಸ್ಯೆಗಳಿದ್ದರೂ ಮುಕ್ತವಾಗಿ ನೇರವಾಗಿ ಗಮನಕ್ಕೆ ತರಬೇಕು. ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಕ್ಷೇತ್ರದಲ್ಲಿರುವ ನೈಜ ಸಮಸ್ಯೆಗಳನ್ನು ಹೇಳಬೇಕು. ಸಭೆಗೆ ಹಾಜರಾದರೆ ಸಾಕು ಎನ್ನುವ ಮನಸ್ಥಿತಿಯಿಂದ ಹೊರಬರಬೇಕು’ ಎಂದರು.

‘ಆನ್‌ಲೈನ್‌ನಲ್ಲಿ ತೆರಿಗೆ ಪಾವತಿಸಲು ಗ್ರಾಹಕರು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಪರಿಹರಿಸಲು ಸಾಧ್ಯವಾಗಿಲ್ಲವೇಕೆ?’ ಎಂದು ಕೇಳಿದರು.

ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ‘ಈವರೆಗೆ ಸಂಗ್ರಹವಾದ ತೆರಿಗೆಯಲ್ಲಿ ₹ 45 ಕೋಟಿ ಆನ್‌ಲೈನ್ ಪೇಮೆಂಟ್‌ನಿಂದಲೇ ಬಂದಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಮಸ್ಯೆ ಇತ್ತು. ಬಳಿಕ ನಿವಾರಣೆಯಾಗಿದೆ’ ಎಂದು ತಿಳಿಸಿದರು.

₹ 185 ಕೋಟಿ ಸಂಗ್ರಹಿಸುವ ಗುರಿ:

‘ಆರ್ಥಿಕ ವರ್ಷದ 5 ತಿಂಗಳಲ್ಲಿ ₹ 120 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. 2023ರ ಮಾರ್ಚ್‌ ಅಂತ್ಯಕ್ಕೆ ₹ 185 ಕೋಟಿ ಸಂಗ್ರಹಿಸುವ ಗುರಿ ಇದೆ’ ಎಂದು ಕಂದಾಯ ವಿಭಾಗದ ಉಪ ಆಯುಕ್ತ ಡಾ.ದಾಸೇಗೌಡ ತಿಳಿಸಿದರು.

‘ಕಂದಾಯ ಇನ್‌ಸ್ಪೆಕ್ಟರ್‌ಗಳು, ಬಿಲ್ ಕಲೆಕ್ಟರ್‌ಗಳು ಸೇರಿ 138 ಹುದ್ದೆಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಮಾತ್ರ ಇದ್ದಾರೆ. ಸಿಬ್ಬಂದಿ ಕೊರತೆ ನಡುವೆಯೂ ಶೇ 60ರಷ್ಟು ತೆರಿಗೆ ಸಂಗ್ರಹಿಸಿದ್ದೇವೆ’ ಎಂದು ಪಾಲಿಕೆ ಆಯುಕ್ತರು ಮಾಹಿತಿ ನೀಡಿದರು.

ಉಪ ಮೇಯರ್‌ ಡಾ.ಜಿ.ರೂಪಾ, ಉಪ ಆಯುಕ್ತೆ ಎಂ.ಕೆ.ಸವಿತಾ, ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ, ವಾಣಿವಿಲಾಸ ನೀರು ಸರಬರಾಜು ಮಂಡಳಿ ಎಸ್‌ಇ ಸುವರ್ಣಾ ಇದ್ದರು.

ಮೇಯರ್‌ ಸೂಚನೆಗಳು

* ಪಾಲಿಕೆ ವಿರುದ್ಧವಾಗಿ ನ್ಯಾಯಾಲಯಕ್ಕೆ ಹೋಗುವವರಿಗೆ ಮತ್ತೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕೊಡಬಾರದು. ಕಪ್ಪುಪಟ್ಟಿಗೆ ಸೇರಿಸಬೇಕು.

* ಮಾಲ್ ತುಂಬಾ ಹಾಕಿರುವ ಜಾಹೀರಾತು ಫಲಕಗಳನ್ನು ಪರಿಶೀಲಿಸಿ ತೆರವುಗೊಳಿಸಬೇಕು.

* ವಾಕಿ–ಟಾಕಿಗಳನ್ನು ಕಡ್ಡಾಯವಾಗಿ ಬಳಸಬೇಕು.

* ಸ್ವಚ್ಛ ನಗರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಕ್ರಮ ಕೈಗೊಳ್ಳಬೇಕು.

* ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆಗೆ ದಿನಾಂಕ ನಿಗದಿಪಡಿಸಬೇಕು.

* ಆಕಾಶವಾಣಿ ವೃತ್ತ ಬಳಿಯ ‘ಮೇಯರ್ ಮನೆ’ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.