ಮೈಸೂರಿನ ಆಂದೋಲನ ವೃತ್ತದ ರಾಮಕೃಷ್ಣ ಪರಮಹಂಸ ಪುತ್ಥಳಿಯ ಬಳಿ ಸಂಪತ್ ಸ್ನೇಹ ಬಳಗದ ಸದಸ್ಯರು ಮೋಂಬತ್ತಿ ಬೆಳಗಿ ಶುಕ್ರವಾರ ಹತ್ಯೆಯಾದ ಬಾಲಕಿಗೆ ಶ್ರದ್ಧಾಂಜಲಿ ಸಲ್ಲಿಸಿದರು
ಮೈಸೂರು: ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಗಾಗಿ ಮೈಸೂರಿನ ಜನ ಮರುಕಪಟ್ಟಿದ್ದು, ಆಕೆಯ ಕುಟುಂಬದೊಂದಿಗೆ ನಿಂತು ಧೈರ್ಯ ತುಂಬಿದರು.
ಜೀವನೋಪಾಯಕ್ಕಾಗಿ ಕಲಬುರಗಿಯಿಂದ ಮಕ್ಕಳೊಂದಿಗೆ ಬಂದಿದ್ದ ಬಾಲಕಿ ಪೋಷಕರು, ಗುರುವಾರ ಬೆಳಿಗ್ಗೆ ಕಣ್ಣೀರಾಗಿದ್ದರು. ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರಿ ವ್ಯವಸ್ಥೆ ಹತ್ತಿರ ಸುಳಿಯದಿದ್ದಾಗ ಜನರೇ ಕುಟುಂಬಕ್ಕೆ ಜೊತೆ ನಿಂತರು.
ಮಗಳ ಮೃತದೇಹವನ್ನು ಊರಿಗೆ ಸಾಗಿಸಲು ಆ ಕುಟುಂಬದ ಬಳಿ ಹಣವಿರಲಿಲ್ಲ. ಇದನ್ನು ಗಮನಿಸಿದ ಕೆಲವು ಯುವಕರು ಹಾಗೂ ಪೊಲೀಸ್ ಅಧಿಕಾರಿಗಳು ಕುಟುಂಬಕ್ಕೆ ಸಹಾಯ ಮಾಡಿ ಮಾನವೀಯತೆ ಮೆರೆದರು.
ಮಾಧ್ಯಮದವರೊಂದಿಗೆ ಮಾತನಾಡಿದ ಬಾಲಕಿಯ ತಂದೆಯ ಅಣ್ಣ ಚಂದ್ರಕಾಂತ್, ‘ಊರಿಗೆ ಹೋಗಬೇಕೆನ್ನುವಷ್ಟರಲ್ಲಿ ನಡೆದ ದುರ್ಘಟನೆಯಿಂದ ನಮಗೆ ಆಘಾತವಾಯಿತು. ಮಗಳ ಅಂತ್ಯಸಂಸ್ಕಾರ ಮಾಡಲೂ ಆಕೆಯ ತಂದೆಯ ಬಳಿ ಹಣವಿಲ್ಲ ಎಂದಿದ್ದರು. ಇದಕ್ಕೆ ಸ್ಪಂದಿಸಿದ ವರುಣದ ಸಂಪತ್ ಕುಮಾರ್ ಮತ್ತು ಸ್ನೇಹಿತರು ₹54ಸಾವಿರ ಸಂಗ್ರಹಿಸಿ, ಬಾಲಕಿಯ ಕುಟುಂಬಕ್ಕೆ ಕೊಟ್ಟು ನೆರವಾದರು’ ಎಂದರು.
‘ಹೊಟ್ಟೆ ಪಾಡಿಗಾಗಿ ಮೈಸೂರಿಗೆ ಬಂದ ಕುಟುಂಬವು ಮಗಳನ್ನು ಕಳೆದುಕೊಂಡು ದುಃಖದಲ್ಲಿದ್ದತ್ತು. ಮಗಳ ಅಂತ್ಯಸಂಸ್ಕಾರ ಮಾಡಲೂ ಅವರಲ್ಲಿ ಹಣ ಇರಲಿಲ್ಲ. ಹೀಗಾಗಿ 10ರಿಂದ 15 ಸ್ನೇಹಿತರು ಸೇರಿಕೊಂಡು ಬಾಲಕಿಯ ತಂದೆಗೆ ಹಣ ನೀಡಿದೆವು’ ಎಂದು ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಸಂಪತ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
10ಕ್ಕಿಂತಲೂ ಅಧಿಕ ಕುಟುಂಬಗಳು ಬಾಲಕಿ ಮಲಗಿದ್ದ ಟೆಂಟ್ ಅಕ್ಕಪಕ್ಕ ನೆಲೆಸಿದ್ದರು. ವಿಚಾರಣೆಯ ಕಾರಣಕ್ಕಾಗಿ ಅವರನ್ನು ಸಿಎಆರ್ ಮೈದಾನಕ್ಕೆ ಕರೆದೊಯ್ಯಲಾಗಿತ್ತು. ಗುರುವಾರ ಬೆಳಿಗ್ಗೆ ಊರಿಗೆ ಹೊರಟಿದ್ದ ಅವರು ಪ್ರಕರಣದಿಂದಾಗಿ ನಗರದಲ್ಲೇ ಉಳಿಯುವಂತಾಗಿತ್ತು. ಡಿಸಿಪಿ ಕೆ.ಎಸ್.ಸುಂದರ್‌ರಾಜ್ ಹಾಗೂ ಎಸಿಪಿ ರಾಜೇಂದ್ರ ನೇತೃತ್ವದಲ್ಲಿ ಗುರುವಾರ ರಾತ್ರಿ ಬಸ್ ಮೂಲಕ ಎಲ್ಲರನ್ನೂ ಅವರ ಊರಿಗೆ ಕಳಿಸಿಕೊಡಲಾಯಿತು.
ಕೋರ್ಟ್‌ಗೆ ಹಾಜರು: ಆರೋಪಿ ಕಾರ್ತಿಕ್ ಕಾಲಿಗೆ ಗುಂಡು ಹಾರಿಸಿದ ಬಳಿಕ ಕೆ.ಆರ್. ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಯಿತು. ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.