ಮೈಸೂರು: ‘ಮುಡಾದಲ್ಲಿ ನಡೆದಿರುವ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣವನ್ನು ಹಳ್ಳ ಹಿಡಿಸಲಾಗಿದೆ’ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್. ರಘು ದೂರಿದರು.
ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೇ 50:50ರ ಅನುಪಾತದ ನಿವೇಶನಗಳ ಹಗರಣ ರಾಜ್ಯ ಕಂಡ ಬಹುದೊಡ್ಡ ಭ್ರಷ್ಟಾಚಾರ ಹಾಗೂ ಲೂಟಿಕೋರತನದ್ದಾಗಿದೆ. ಬರೋಬ್ಬರಿ 5ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪದ ಪ್ರಕರಣವಿದು. ಇದರ ತನಿಖೆ ಬಗ್ಗೆ ಸರ್ಕಾರ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.
‘ನಿವೇಶನ ರಹಿತರಿಗೆ ಸಿಗಬೇಕಾದ ನಿವೇಶನಗಳನ್ನು, ಹಿಂದಿನ ಇಬ್ಬರು ಮುಡಾ ಆಯುಕ್ತರು ಹಾಗೂ ಅಧಿಕಾರಿಗಳು ಕಾನೂನನ್ನು ಗಾಳಿಗೆ ತೂರಿ ವ್ಯವಸ್ಥಿತ ಜಾಲ ರೂಪಿಸಿಕೊಂಡು ಅಕ್ರಮವಾಗಿ ಮಾರಿ ಲೂಟಿ ಮಾಡಿದ್ದಾರೆ. ಪ್ರಾಧಿಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಹಗರಣದ ತನಿಖೆಯ ಕುರಿತು ಮಾಹಿತಿ ನೀಡದಿರುವುದು ಅನುಮಾನಗಳಿಗೆ ಕಾರಣವಾಗಿದೆ’ ಎಂದು ದೂರಿದರು.
ಅನುಮಾನ:
‘ಈಚೆಗೆ ನಡೆದ ಇ-ಹರಾಜಿನಲ್ಲಿ ಕೇವಲ 200 ನಿವೇಶನಗಳು ₹ 100 ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿವೆ. 20x30 ಅಡಿಯ ನಿವೇಶನವೊಂದು ₹ 2 ಕೋಟಿವರೆಗೆ, 50x80 ನಿವೇಶನ ₹9 ಕೋಟಿವರೆಗೆ ಇ-ಹರಾಜಿನಲ್ಲಿ ಮಾರಾಟವಾಗಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚು ಬೆಲೆಗೆ ಖರೀದಿ ಆಗಿರುವುದನ್ನು ಗಮನಿಸಿದರೆ, ಈ ಪ್ರಕ್ರಿಯೆಯ ಹಿಂದೆ ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಚೈತನ್ಯ ನೀಡುವ ಪ್ರಯತ್ನವಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ’ ಎಂದು ಆರೋಪಿಸಿದರು.
‘ಜಾರಿ ನಿರ್ದೇಶನಾಲಯ (ಇಡಿ) ಶೇ 50:50 ಅನುಪಾತದ ನಿವೇಶನಗಳನ್ನು ನೋಂದಣಿ ಮಾಡದಂತೆ ಉಪ ನೋಂದಣಾಧಿಕಾರಿಗಳಿಗೆ ಸೂಚಿಸಿದೆ. ಆದರೆ, ಎಂಡಿಎ ಯಾವುದೇ ಕ್ರಮ ಜರುಗಿಸುತ್ತಿಲ್ಲ. ನ್ಯಾಯಮೂರ್ತಿ ದೇಸಾಯಿ ಆಯೋಗ ನೀಡಿದ ವರದಿಯಲ್ಲೇನಿದೆ ಎಂಬುದನ್ನೂ ಬಹಿರಂಗಪಡಿಸಿಲ್ಲ. ಲೋಕಾಯುಕ್ತ ತನಿಖೆ ಹಾಗೂ ಜನಪ್ರತಿನಿಧಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆಯಾದರೂ ಮುಖ್ಯಮಂತ್ರಿಯವರ ಕುಟುಂಬದ 14 ನಿವೇಶನಗಳತ್ತಲೇ ವಿಷಯ ಕೇಂದ್ರೀಕೃತವಾಗಿದೆಯೇ ಹೊರತು, ಲೂಟಿಯಾದ ಉಳಿದ ನಿವೇಶನಗಳನ್ನು ರಕ್ಷಿಸುವಲ್ಲಿ ಸರ್ಕಾರ ಕ್ರಮ ಕೈಗೊಂಡಂತೆ ಕಾಣಿಸುತ್ತಿಲ್ಲ’ ಎಂದು ದೂರಿದರು.
‘ಇಂತಹ ಬಹು ದೊಡ್ಡ ಹಗರಣ ನಡೆಸಿದ ಯಾವ ಅಧಿಕಾರಿಗೂ ಸರ್ಕಾರ ಶಿಕ್ಷಿಸಲಿಲ್ಲ. ನಿವೇಶನಗಳನ್ನು ಸಂರಕ್ಷಣೆಗೂ ಪ್ರಯತ್ನಿಸಿಲ್ಲ. ಸರ್ಕಾರ ಗಂಭೀರ ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಬೇಕಾಗುತ್ತದೆ’ ಎಂದರು.
ಪಕ್ಷದ ನಗರ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ಕೇಬಲ್, ಮಾಧ್ಯಮ ಸಂಚಾಲಕ ಮಹೇಶ್‌ರಾಜೇ ಅರಸ್, ಮಾಧ್ಯಮ ಸಹ ಸಂಚಾಲಕ ಸಂತೋಷ್ ಕುಮಾರ್ ಬಿ.ಎಂ., ಗ್ರಾಮಾಂತರ ಕಾರ್ಯಾಲಯ ಕಾರ್ಯದರ್ಶಿ ಪಾಪಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.