ADVERTISEMENT

ಮೈಸೂರು: ‘ಈಶಾನ್ಯದೊಂದಿಗೆ ಸಂವಹನ ಅಗತ್ಯ’

ಸಿಐಐಎಲ್‌: ‘ಈಶಾನ್ಯ ರಾಜ್ಯಗಳು ಕರೆಯುತ್ತಿವೆ’ ವಿಷಯ ಕುರಿತು ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 4:10 IST
Last Updated 17 ನವೆಂಬರ್ 2025, 4:10 IST
ಮೈಸೂರಿನ ಸಿಐಐಎಲ್‌ನಲ್ಲಿ ಭಾನುವಾರ ನಡೆದ ‘ಈಶಾನ್ಯ ರಾಜ್ಯಗಳು ಕರೆಯುತ್ತಿವೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ನಿವೇದಿತಾ ಭಿಡೆ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಆರ್‌. ಬಾಲಸುಬ್ರಹ್ಮಣ್ಯಂ ಹಾಗೂ ಶೈಲೇಂದ್ರ ಮೋಹನ್‌ ಪಾಲ್ಗೊಂಡಿದ್ದರು 
ಮೈಸೂರಿನ ಸಿಐಐಎಲ್‌ನಲ್ಲಿ ಭಾನುವಾರ ನಡೆದ ‘ಈಶಾನ್ಯ ರಾಜ್ಯಗಳು ಕರೆಯುತ್ತಿವೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ನಿವೇದಿತಾ ಭಿಡೆ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಆರ್‌. ಬಾಲಸುಬ್ರಹ್ಮಣ್ಯಂ ಹಾಗೂ ಶೈಲೇಂದ್ರ ಮೋಹನ್‌ ಪಾಲ್ಗೊಂಡಿದ್ದರು    

ಮೈಸೂರು: ‘ಈಶಾನ್ಯ ರಾಜ್ಯಗಳೆಂದರೆ ನೃತ್ಯ ಮತ್ತು ಸಂಗೀತವಷ್ಟೇ ಅಲ್ಲ. ಅಲ್ಲಿ ಅನೇಕ ಆಳವಾದ ಅಧ್ಯಯನ ಯೋಗ್ಯ ವಿಚಾರಗಳಿವೆ. ಭಾವನಾತ್ಮಕ ಸಂವಹನ ಬೆಳೆಸಿ ಅವರನ್ನು ಅರಿಯಬೇಕಿದೆ’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಆಯೋಗದ ಸದಸ್ಯ ಆರ್‌. ಬಾಲಸುಬ್ರಹ್ಮಣ್ಯಂ ಹೇಳಿದರು.

ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದ ಕರ್ನಾಟಕ ಪ್ರಾಂತವು ಇಲ್ಲಿನ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್‌)ದಲ್ಲಿ ಭಾನುವಾರ ‘ಈಶಾನ್ಯ ರಾಜ್ಯಗಳು ಕರೆಯುತ್ತಿವೆ’ (ನಾರ್ತ್‌ ಈಸ್ಟ್‌ ಕಾಲಿಂಗ್‌) ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರಗಳು ಈಶಾನ್ಯ ರಾಜ್ಯಗಳಿಗೆ ಆರ್ಥಿಕವಾಗಿ ಬಲತುಂಬುವ ಕೆಲಸ ಮಾಡಬಹುದು. ಆದರೆ, ಸಮಾಜವು ಅವರನ್ನು ಭಾವನಾತ್ಮಕವಾಗಿ ಅರ್ಥೈಸಿಕೊಂಡು ಬೆಂಬಲಿಸಬೇಕು. ವಿಶಾಲ ಹೃದಯದಿಂದ ಕಾಣಲು ಮುಂದಾಗಬೇಕು. ಏಕೆಂದರೆ, ಭಾರತ ದೇಶಕ್ಕೆ ಈಶಾನ್ಯ ರಾಜ್ಯಗಳು ಮುಖವಾಣಿ ಇದ್ದಂತೆ’ ಎಂದು ಪ್ರತಿಪಾದಿಸಿದರು.

ADVERTISEMENT

ಸಮಸ್ಯೆಗಳ ನಡುವೆಯೂ...: 

‘ದಿಢೀರ್‌ ಬಂದ್ ಮಾಡಲಾಗುವ ರಸ್ತೆಗಳು, ರಾಜಕೀಯ ಸ್ಥಾನಪಲ್ಲಟ, ಇಂಟರ್‌ನೆಟ್‌ ಸೌಲಭ್ಯ ವಿರಳದಂತಹ ಸಮಸ್ಯೆಗಳ ನಡುವೆಯೂ ಅಲ್ಲಿನ ಜನ ಸುಂದರವಾದ ಬದುಕು ಕಟ್ಟಿಕೊಂಡಿದ್ದಾರೆ. ಭಾಷೆ, ಜನಜೀವನ, ಬಣ್ಣಗಳಲ್ಲಿ ಪ್ರತಿ ಎರಡು ಕಿ.ಮೀ.ಗೆ ಬದಲಾವಣೆ ಕಾಣಸಿಗುತ್ತದೆ. ಅಕ್ಕಿಯನ್ನು 800ರಿಂದ 900 ರೀತಿಯಲ್ಲಿ ಬಳಸುತ್ತಾರೆ. ಈ ವೈವಿಧ್ಯವನ್ನು ಇತರೆಡೆ ಕಾಣುವುದು ಅಸಾಧ್ಯ. ಹೀಗಾಗಿ ಈಶಾನ್ಯದ ರಾಜ್ಯಗಳನ್ನು ಪ್ರವಾಸದ ದೃಷ್ಟಿಯಿಂದಷ್ಟೇ ನೋಡದೆ, ಅಲ್ಲಿನ ಜನರನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನೂ ಮಾಡಬೇಕು’ ಎಂದು ಸಲಹೆ ನೀಡಿದರು.

ವಿಜಯವಿಠ್ಠಲ ಶಾಲೆ ವಿದ್ಯಾರ್ಥಿಗಳು ಮೇಘಾಲಯದ ಖಾಸಿ ಭಾಷೆಯ ಹಾಡು ಹಾಡಿದರು. ಬನ್ನೂರಿನ ಹನುಮನಾಳು ಶಾರದಾ ವಿದ್ಯಾಮಂದಿರದ ವಿದ್ಯಾರ್ಥಿನಿಯರು ಈಶಾನ್ಯ ರಾಜ್ಯದ ಸಂಸ್ಕೃತಿ ಬಿಂಬಿಸುವ ನೃತ್ಯ ಪ್ರದರ್ಶಿಸಿದರು.

ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ವಿಡಿಯೊ ಮೂಲಕ ಸಂದೇಶ ನೀಡಿದರು. ಸಿಐಐಎಲ್‌ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್‌, ಕನ್ಯಾಕುಮಾರಿ ವಿವೇಕಾನಂದ ಕೇಂದ್ರದ ನಿವೇದಿತಾ ಭಿಡೆ ಭಾಗವಹಿಸಿದ್ದರು. 

ಆಹ್ವಾನಿತರಿಗೆ ಈಶಾನ್ಯ ಶೈಲಿಯಲ್ಲೇ ಸಾಂಪ್ರದಾಯಿಕ ಸ್ವಾಗತ ವಿವಿಧ ಕ್ಷೇತ್ರದ ಮುಖಂಡರು ಭಾಗಿ ಬುಡಕಟ್ಟು ಸಂಸ್ಕೃತಿಯ ಅನಾವರಣ

‘ವಿವೇಕಾನಂದರ ಕೊಡುಗೆ ಅರಿಯುವ ಭಾವನೆ ಇಲ್ಲವಾಗಿದೆ’

‘ತ್ಯಾಗ ಮತ್ತು ಸೇವೆ ನಮ್ಮ ಧ್ಯೇಯವಾಗಬೇಕು ಎಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದಾರೆ. ಅವರ ಆದರ್ಶಗಳನ್ನು ಮುಂದಿಟ್ಟುಕೊಂಡು ಈಶಾನ್ಯದ ಬಗ್ಗೆ ಚರ್ಚಿಸಬೇಕಿದೆ‘ ಎಂದು ಬಾಲಸುಬ್ರಹ್ಮಣ್ಯಂ ಹೇಳಿದರು. ‘ಸ್ವಾಮಿ ವಿವೇಕಾನಂದರ ಬಗ್ಗೆ ತಿಳಿಯುತ್ತಾ ಹೋದಂತೆ ವಿವಿಧ ಮಜಲುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರನ್ನು ಅರ್ಥೈಸಿಕೊಳ್ಳುವ ಪ್ರಯತ್ನವಷ್ಟೇ ಮಾಡಬಹುದು ಸಂಪೂರ್ಣವಾಗಿ ಅರ್ಥೈಸಿಕೊಳ್ಳುವುದು ಅಸಾಧ್ಯ. ದೇಶಸೇವೆಯ ಮೂಲಕ ಅವರ ವಿಚಾರಗಳನ್ನು ಅರಿಯೋಣ’ ಎಂದು ಆಶಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.