ADVERTISEMENT

ಮೈಸೂರು| ಫಲಪುಷ್ಪ ಪ್ರದರ್ಶನ ಆರಂಭ: ಅರಮನೆಯಲ್ಲಿ ಹೂಗಳ ಕಂಪು, ಸಂಗೀತದ ಇಂಪು

ಶೃಂಗೇರಿ ದೇಗುಲ, ಸಾಲುಮರದ ತಿಮ್ಮಕ್ಕ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 7:40 IST
Last Updated 22 ಡಿಸೆಂಬರ್ 2025, 7:40 IST
<div class="paragraphs"><p>ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ವರ್ಷಾಂತ್ಯ ಹಾಗೂ ಹೊಸ ವರ್ಷದ ಅಂಗವಾಗಿ ಅರಮನೆ ಮಂಡಳಿಯಿಂದ ಭಾನುವಾರದಿಂದ ಆಯೋಜಿಸಿರುವ ‘ಮಾಗಿ ಉತ್ಸವ’ದ ‘ಫಲ–ಪುಷ್ಪ ಪ್ರದರ್ಶನ’ವನ್ನು ಸಾರ್ವಜನಿಕರು ವೀಕ್ಷಿಸಿದರು &nbsp;&nbsp;</p></div>

ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ವರ್ಷಾಂತ್ಯ ಹಾಗೂ ಹೊಸ ವರ್ಷದ ಅಂಗವಾಗಿ ಅರಮನೆ ಮಂಡಳಿಯಿಂದ ಭಾನುವಾರದಿಂದ ಆಯೋಜಿಸಿರುವ ‘ಮಾಗಿ ಉತ್ಸವ’ದ ‘ಫಲ–ಪುಷ್ಪ ಪ್ರದರ್ಶನ’ವನ್ನು ಸಾರ್ವಜನಿಕರು ವೀಕ್ಷಿಸಿದರು   

   

ಪ್ರಜಾವಾಣಿ ಚಿತ್ರಗಳು: ಅನೂಪ್ ರಾಘ. ಟಿ.  

ಮೈಸೂರು: ಚಳಿಯ ಸಂಜೆಯಲ್ಲಿ ಅರಮನೆಗೆ ಬಂದ ನಾಗರಿಕರು, ಪ್ರವಾಸಿಗರು ಅರಳಿ ನಳನಳಿಸುತ್ತಿದ್ದ ಹೂ ಲೋಕಕ್ಕೆ ವಿಸ್ಮಿತರಾದರು. ಶೃಂಗೇರಿಯ ವಿದ್ಯಾಶಂಕರ ದೇಗುಲದ ಸೌಂದರ್ಯಕ್ಕೆ ಅಚ್ಚರಿ ಪಟ್ಟರೆ, ಸಾಲುಮರ ತಿಮ್ಮಕ್ಕನ ಪ್ರತಿಕೃತಿ ನೋಡಿ ‘ಪರಿಸರ ಪ್ರೀತಿ’ಯ ಭಾವವನ್ನು ಎದೆಗಿಳಿಸಿಕೊಂಡರು. 

ADVERTISEMENT

ಅರಮನೆ ಮಂಡಳಿಯು ಕ್ರಿಸ್‌ಮಸ್‌ ರಜೆ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿರುವ 10 ದಿನಗಳ ‘ಮಾಗಿ ಉತ್ಸವ’– ಫಲಪುಷ್ಪ ಪ್ರದರ್ಶನವು ಭಾನುವಾರ ಆರಂಭವಾಯಿತು.

ಘಮ್ಮೆನ್ನುವ ಪುಷ್ಪಗಳ ಸುವಾಸನೆಯೊಂದಿಗೆ ಚಲನಚಿತ್ರ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರಿಂದ ಹೊಮ್ಮಿದ ಮಾಧುರ್ಯದ ಗೀತೆಗಳು ಸಹೃದಯರ ಕಿವಿದುಂಬಿದವು. 

ಉಯ್ಯಾಲೆಯಲ್ಲಿ ರಾಧೆಯೊಂದಿಗೆ ಕುಳಿತ ಕೃಷ್ಣ, ಸಿರಿಧಾನ್ಯಗಳನ್ನು ಮೈವೆತ್ತು ನಿಂತ ಸಾಲುಮರದ ತಿಮ್ಮಕ್ಕ ಸೆಳೆದರು. ಶೃಂಗೇರಿ ದೇವಾಲಯ ಸೂಜಿಗಲ್ಲಿನಂತೆ ಆಕರ್ಷಿತು. 4 ಲಕ್ಷ ಹೂಗಳಿಂದ ವಿವಿಧ ಮಾದರಿಗಳನ್ನು ಅರಳಿಸಲಾಗಿತ್ತು. ಶೃಂಗೇರಿ ದೇಗುಲವು 50 ಅಡಿ ಅಗಲ, 16 ಅಡಿ ಉದ್ದ ಹಾಗೂ 25 ಅಡಿ ಎತ್ತರ ಹೊಂದಿದ್ದು, ಗುಲಾಬಿ, ಸೇವಂತಿಗೆ ಸೇರಿದಂತೆ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ದ್ವಾರಗಳನ್ನು ಹೂ ಹಾಗೂ ತೆಂಗಿನ ಗರಿಗಳ ಚಪ್ಪರದಿಂದ ಸಿಂಗರಿಸಲಾಗಿತ್ತು.  

ಮುಮ್ಮಡಿ ಕೃಷ್ಣರಾಜ ಒಡೆಯರ್ ಪ್ರತಿಕೃತಿ, ಸಂವಿಧಾನ ಪ್ರಸ್ತಾವನೆ, ಕಾಳಿಂಗ ಮರ್ಧನ, ವಿಶ್ವಕಪ್‌ ವಿಜೇತ ಮಹಿಳಾ ಕ್ರಿಕೆಟ್‌ ತಂಡ, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸೇನಾ ಪರಿಕರಗಳ ಮಾದರಿಗಳು ಆಕರ್ಷಿಸಿದವು. ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ದೇಶಕ್ಕೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಶೌರ್ಯದಿಂದ ಅಲ್ಲಿ ನಿಂತಿದ್ದರು. 

ಚಾಂಪಿಯನ್ ಆದ ಮಹಿಳಾ ಕ್ರಿಕೆಟಿಗರು, ಕೊಕ್ಕೊ, ಕಬಡ್ಡಿ, ಅಂಧ ಕ್ರಿಕೆಟಿಗರ ಭಾವಚಿತ್ರವನ್ನು ಡಿಜಿಟಲ್ ಬೋರ್ಡ್‌ನಲ್ಲಿ ಪ್ರದರ್ಶಿಸಿ ಸಾಧಕರನ್ನು ಅಭಿನಂದಿಸಲಾಗಿತ್ತು. 25ಸಾವಿರಕ್ಕೂ ಹೆಚ್ಚಿನ ಅಲಂಕಾರಿಕ ಹೂಕುಂಡಗಳು, ಬೋನ್ಸಾಯ್‌ ಗಿಡಗಳು, 35 ಜಾತಿಯ ಹೂ ಗಿಡಗಳು ನಳನಳಿಸಿದವು.  

ಮಕ್ಕಳ ಕಾರ್ಟೂನ್‌ ತಾರೆಗಳ ರಂಗು:

ಮಕ್ಕಳ ಕಾರ್ಟೂನ್ ತಾರೆಗಳಾದ ಛೋಟಾ ಭೀಮ್‌, ಮಾಶಾ– ಕರಡಿ ಸೇರಿದಂತೆ ವಿವಿಧ ಮಾದರಿಗಳು ಸೆಳೆದವು. ಅಂಗಳದಲ್ಲಿ ಫಲಪುಷ್ಪಗಳನ್ನು ವೀಕ್ಷಿಸುತ್ತಲೇ ಜಯಚಾಮರಾಜ ಒಡೆಯರ್‌ ಅವರ ಕರ್ನಾಟಕ ಸಂಗೀತ ಕೃತಿಗಳನ್ನು ನಾಗರಿಕರು ಆಲಿಸಿದರು. ಅರಮನೆಯ ಬೆಳಕಿನಲ್ಲಿ ಅರಳಿದ ಹೂಗಳನ್ನು ಕಣ್ತುಂಬಿಕೊಂಡರು.   

ಆಪರೇಷನ್ ಸಿಂಧೂರ ಕಾರ್ಯಾಚರಣೆ
ಕೃಷ್ಣ--–ರಾಧೆ
ಮುಮ್ಮಡಿ ಕೃಷ್ಣರಾಜ ಒಡೆಯರ್
ಹಂಸಗಳು
ಶೃಂಗೇರಿ ವಿದ್ಯಾಶಂಕರ ದೇಗುಲ ಮಾದರಿ
ಸಿರಿಧಾನ್ಯದಿಂದ ಮಾಡಿದ ಸಾಲುಮರದ ತಿಮ್ಮಕ್ಕ ಮಾದರಿ

ಗಣ್ಯರಿಂದ ಚಾಲನೆ: 

ಮುಮ್ಮಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಶಾಸಕರಾದ ತನ್ವೀರ್ ಸೇಠ್ ಟಿ.ಎಸ್.ಶ್ರೀವತ್ಸ ಪುಷ್ಪಾರ್ಚನೆ ಮಾಡಿ 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು.

ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್ ಕುಮಾರ್ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು. 

ಮಾಧುರ್ಯ ಲೋಕ:

ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ವಿದುಷಿ ಹಂಸಿಕಾ ಅಯ್ಯರ್ ಅವರ ಮಾಧುರ್ಯ ಲೋಕಕ್ಕೆ ಸಹೃದಯರು ತಲೆದೂಗಿದರು. ಇದಕ್ಕೂ ಮೊದಲು ಎಸ್‌.ಸಂಪತ್ ಮತ್ತು ತಂಡದವರು ವಾದ್ಯ ಸಂಗೀತ ಪ್ರಸ್ತುತ ಪಡಿಸಿದರೆ ಯೋಗಶ್ರೀ ಮತ್ತು ತಂಡದವರು ಭಕ್ತಿಗೀತೆ ಎಚ್‌.ಎಸ್‌.ಸ್ನೇಹಾ ಅವರ ತಂಡದವರು ಸಂಸ್ಥಾನ ಗೀತೆ ಹಾಡಿದರು. 

ರಾಗ ರಿದಂ ಇಂದು

ಡಿ.22ರಂದು ಸಂಜೆ 5ಕ್ಕೆ ಭಾರತೀಯ ವಿದ್ಯಾಭವನ ಕಲಾವಿದರಿಂದ ನೃತ್ಯನಾಟಕ ಋತ್ವಿಕ್ ರಾಜ್ ತಂಡದಿಂದ ಸುಗಮ ಸಂಗೀತ ಮನೋ ಮ್ಯೂಸಿಕ್ ಲೈನ್ಸ್‌ ತಂಡದಿಂದ ಕವಿ ಕಾವ್ಯ ಸಂಗೀತ. ರಾತ್ರಿ 8.15ಕ್ಕೆ ಎಚ್‌.ಎಲ್‌.ಶಿವಶಂಕರಸ್ವಾಮಿ ಅವರಿಂದ ‘ರಾಗ ರಿದಂ’ ಫ್ಯೂಷನ್ ಸಂಗೀತ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.