ADVERTISEMENT

ಮೈಸೂರು: ಅಪರಾಧ ಪತ್ತೆಗೆ ಡ್ರೋನ್ ಕಣ್ಣು

ಮಾದಕ ವಸ್ತು ಮಾರಾಟಗಾರರ ವಿರುದ್ಧ ಕಾರ್ಯಾಚರಣೆ

ಶಿವಪ್ರಸಾದ್ ರೈ
Published 20 ಫೆಬ್ರುವರಿ 2026, 2:43 IST
Last Updated 20 ಫೆಬ್ರುವರಿ 2026, 2:43 IST
ಮೈಸೂರಿನ ನರಸಿಂಹರಾಜ ಉಪವಿಭಾಗದ ಮಂಡಿ ಹಾಗೂ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪತ್ತೆಗೆ ಡ್ರೋನ್ ಕ್ಯಾಮೆರಾ ಮೂಲಕ ಪರಿಶೀಲನೆ ನಡೆಸಲಾಯಿತು
ಮೈಸೂರಿನ ನರಸಿಂಹರಾಜ ಉಪವಿಭಾಗದ ಮಂಡಿ ಹಾಗೂ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪತ್ತೆಗೆ ಡ್ರೋನ್ ಕ್ಯಾಮೆರಾ ಮೂಲಕ ಪರಿಶೀಲನೆ ನಡೆಸಲಾಯಿತು   

ಮೈಸೂರು: ನಗರ ಪೊಲೀಸ್‌ ವತಿಯಿಂದ ಅಪರಾಧ ಪತ್ತೆಗೆ ವಿಶೇಷ ವಿಧಾನ ಅನುಸರಿಸಿದ್ದು, ಡ್ರೋನ್ ಕ್ಯಾಮೆರಾಗಳ ಮೂಲಕ ಸೂಕ್ಷ್ಮ ಪ್ರದೇಶಗಳ ಮಾಹಿತಿ ಪಡೆಯಲಾಗುತ್ತಿದೆ.

ಈಚೆಗೆ ನಡೆದ ಸರಣಿ ಅಪರಾಧಗಳ ಬಳಿಕ ಪೊಲೀಸ್‌ ಇಲಾಖೆಯ ಕಾರ್ಯ ವೈಖರಿ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗಿತ್ತು. ಇದೀಗ ಇಲಾಖೆಯು ಚುರುಕಿನ ಕಾರ್ಯಾಚರಣೆಗಳನ್ನು ನಡೆಸಿ, ಅಪರಾಧ ತಡೆಯಲು ಶ್ರಮಿಸುತ್ತಿದೆ. ಸಾರ್ವಜನಿಕರ ಚಲನವಲನ ಹಾಗೂ ಚಟುವಟಿಕೆಗಳನ್ನು ಗಮನಿಸಲು ಬೀಟ್‌ ವ್ಯವಸ್ಥೆ ಹೆಚ್ಚಿಸಬೇಕು ಎಂಬ ಆಗ್ರಹ ಕೇಳಿಬಂದಿದ್ದು, ಅದಕ್ಕೆ ಪೂರಕವಾಗಿ ಡ್ರೋನ್‌ ಕಾರ್ಯಾಚರಣೆ ಗಮನಸೆಳೆಯುತ್ತಿದೆ.

ಪೊಲೀಸ್‌ ಇಲಾಖೆಯು ಕಮಿಷನರೇಟ್‌ ವ್ಯಾಪ್ತಿಗೆ ನಾಲ್ಕು ಡ್ರೋನ್‌ ಕ್ಯಾಮೆರಾಗಳನ್ನು ನೀಡಿದ್ದು, ಸದ್ಯ ಮೂರನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ವೈರ್‌ಲೆಸ್‌ ವಿಭಾಗದ ಎಸಿಪಿ ನೇತೃತ್ವದಲ್ಲಿ ತರಬೇತಿ ಪಡೆದ ಇಬ್ಬರು ಮಹಿಳಾ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಸದ್ಯ ಉದಯಗಿರಿ, ಮಂಡಿ, ನರಸಿಂಹರಾಜ ಠಾಣಾ ವ್ಯಾಪ್ತಿಯಲ್ಲಿ ಬಳಸುತ್ತಿದ್ದು, ಮುಂದೆ ವಿಸ್ತರಿಸುವ ಉದ್ದೇಶವಿದೆ. ಬಂದೋಬಸ್ತ್‌ಗೂ ಬಳಸಲಾಗುತ್ತಿದೆ.

ADVERTISEMENT

16 ಪೆಡ್ಲರ್‌ಗಳ ಬಂಧನ: ಕಾರ್ಯಾಚರಣೆಯ ವಿಧಾನ ಬದಲಿಸಿರುವ ಪೊಲೀಸರು, ಮಾದಕ ವಸ್ತು ಸೇವನೆ ಮಾಡುವವರ ಬದಲಿಗೆ ಮಾರಾಟಗಾರರನ್ನು (ಪೆಡ್ಲರ್‌) ಬಂಧಿಸುತ್ತಿದ್ದಾರೆ. 2 ವಾರಗಳಲ್ಲಿ 16 ಪೆಡ್ಲರ್‌ಗಳನ್ನು ಬಂಧಿಸಿದ್ದು, ಇವರಲ್ಲಿ ಕೆಲವರು ಬೆಂಗಳೂರು ಹಾಗೂ ಹೊರರಾಜ್ಯದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

‘ನಗರದೊಳಗೆ ಮಾದಕ ವಸ್ತು ಪ್ರವೇಶಿಸುವುದನ್ನು ತಡೆಯುವುದರಿಂದ ಮಾದಕ ವಸ್ತು ಸೇವನೆಯ ಪ್ರಮಾಣವೂ ಕಡಿಮೆಯಾಗುತ್ತದೆ. ನಿತ್ಯ ಲಾಡ್ಜ್‌, ಪ್ರವಾಸಿ ಕೇಂದ್ರ, ಹಾಸ್ಟೆಲ್‌, ವಾಹನಗಳ ತಪಾಸಣೆ ಮುಂದುವರಿದಿದೆ’ ಎಂದು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ತಿಳಿಸಿದರು.

ರೌಡಿಗಳಿಗೆ ಅಂಕುಶ: ಅಪರಾಧ ತಡೆಗೆ ರೌಡಿ ನಿಗ್ರಹ ಪಡೆ ರಚಿಸಿದ್ದು, ಈವರೆಗೆ 20 ರೌಡಿಶೀಟರ್‌ಗಳನ್ನು ಗಡೀಪಾರು ಮಾಡಲಾಗಿದೆ.

ಮೈಸೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿವಿಧ ಕ್ರಮವಹಿಸಲಾಗಿದೆ. ಡ್ರೋಣ್‌ ಕ್ಯಾಮೆರಾವು ಕಡಿಮೆ ಸಮಯದಲ್ಲಿ ಹೆಚ್ಚು ಸ್ಥಳಗಳ ಕುರಿತು ಮಾಹಿತಿ ಪಡೆಯಲು ಸಹಾಯಕವಾಗಿದೆ
ಸೀಮಾ ಲಾಟ್ಕರ್‌ ನಗರ ಪೊಲೀಸ್‌ ಆಯುಕ್ತೆ
ಸೀಮಾ ಲಾಟ್ಕರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.