
ಪ್ರಜಾವಾಣಿ ವಾರ್ತೆ
ಮೈಸೂರು: ವಿದ್ಯಾರ್ಥಿಗಳ ನೆಚ್ಚಿನ ವಲಯ ಮಟ್ಟದ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್’ ಸ್ಪರ್ಧೆಗೆ ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಕ್ಯಾಂಪಸ್‌ನ ವಿಜ್ಞಾನ ಭವನದಲ್ಲಿ ಶುಕ್ರವಾರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಇತರರ ಜ್ಞಾನದ ಬಗ್ಗೆಯೂ ವಿನಮ್ರ ಭಾವನೆಯನ್ನು ಹೊಂದಿರಬೇಕು. ನಿರಂತರ ಕಲಿಕೆಯಲ್ಲಿ ತೊಡಗಬೇಕು ಆಗ ಮಾತ್ರ ಯಶಸ್ಸು ಸಾಧ್ಯ ಎಂದರು.
ಪ್ರಜಾವಾಣಿ ಆಯೋಜಿಸಿರುವ ರಸಪ್ರಶ್ನೆ ಸ್ಪರ್ಧೆಯು ಅರಿವು ಹೆಚ್ಚಳಕ್ಕೆ ಪ್ರಯೋಜನಕಾರಿ. ಪ್ರಶ್ನೆ ಕೇಳುವಾಗ ಪ್ರಶ್ನೆ ಕೇಳುವವರ ಹಾವ ಭಾವವನ್ನು ಗಮನಿಸಬೇಕು. ಪ್ರಶ್ನೆಯನ್ನೂ ವಿವಿಧ ಭಾಗಗಳಾಗಿ ವಿಭಜಿಸಿ ಸೂಕ್ತವಾಗಿ ಅರಿತುಕೊಂಡು ಉತ್ತರಿಸಬೇಕು ಎಂದು ಸಲಹೆ ನೀಡಿ ಶುಭ ಹಾರೈಸಿದರು.
ಸ್ಪರ್ಧೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗಿನ 7ರಿಂದ 10ನೇ ತರಗತಿಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.