
ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ವಸೂಲಾತಿಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದ್ದು, ಇದು ದೈನಂದಿನ ಕಾರ್ಯಚಟುವಟಿಕೆಗಳ ನಿರ್ವಹಣೆಗೆ ವರಮಾನದ ‘ಶಕ್ತಿ’ಯನ್ನು ತುಂಬಿದೆ.
ಮೈಸೂರು ಮಹಾನಗರಪಾಲಿಕೆಯಿಂದ ₹ 243.66 ಕೋಟಿ ತೆರಿಗೆ ವಸೂಲಾತಿ ಗುರಿ ಹೊಂದಲಾಗಿದ್ದು, ಇದರಲ್ಲಿ ಅಕ್ಟೋಬರ್ ಅಂತ್ಯದವರೆಗೆ ₹ 202.16 ಕೋಟಿ ವಸೂಲಿಯಾಗಿದ್ದು, ಶೇ 82.97ರಷ್ಟು ಸಾಧನೆಯಾಗಿದೆ. ಆರ್ಥಿಕ ವರ್ಷ ಪೂರ್ಣಗೊಳ್ಳಲು ನಾಲ್ಕನೇ ತ್ರೈಮಾಸಿಕ ಬಾಕಿ ಇದ್ದು, ಅಷ್ಟರೊಳಗೆ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ವಸೂಲಾತಿಗೆ ಮಹಾನಗರಪಾಲಿಕೆ ಯೋಜನೆ ಹಾಕಿಕೊಂಡಿದೆ. 2024–25ನೇ ಸಾಲಿನಲ್ಲಿ ಅತಿ ಹೆಚ್ಚು ಅಂದರೆ ಶೇ 91.13ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿಯೂ ಹೊಸ ದಾಖಲೆ ಮಾಡುವುದಕ್ಕೆ ಅಧಿಕಾರಿಗಳು ಯೋಜಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಹಾಗೂ ಸ್ವಯಂ ತೆರಿಗೆ ಪಾವತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಶೇ 5ರಷ್ಟು ರಿಯಾಯಿತಿ ದೊರೆಯುವ ಅವಧಿಯನ್ನು ಸೆ.14ರವರೆಗೆ ವಿಸ್ತರಿಸಲಾಗಿತ್ತು. ಇದು ಕೂಡ ತೆರಿಗೆ ಸಂಗ್ರಹದ ವೇಗ ಹೆಚ್ಚಿಸಲು ಕಾರಣವಾಯಿತು ಎನ್ನುತ್ತಾರೆ ಅಧಿಕಾರಿಗಳು.
ಹಲವು ಕ್ರಮ:
ಈ ಬಗ್ಗೆ ಪ್ರತಿಕ್ರಿಯಿಸಿದ ಮಹಾನಗರಪಾಲಿಕೆ ಉಪ ಆಯುಕ್ತ (ಕಂದಾಯ) ಸೋಮಶೇಖರ್ ಜಿ.ಎಸ್., ‘ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲಿಸಿದ ಪರಿಣಾಮ ಪ್ರಗತಿ ಸಾಧ್ಯವಾಗಿದೆ. ವಲಯವಾರು ಹಳೆಯ ಬಾಕಿ ವಸೂಲಾತಿಗೆ ಕ್ರಮ ಕೈಗೊಂಡಿದ್ದೇವೆ. ಈ ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನೂ ಸಮಯವಿದ್ದು, ಶೇ 100ರಷ್ಟು ಸಂಗ್ರಹದ ಗುರಿ ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಾಗೃತಿಯನ್ನೂ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಹಳೆಯ ಬಾಕಿ ಸೇರಿದಂತೆ, ಗುರಿಯಂತೆ ₹ 30 ಕೋಟಿ ಬಾಕಿ ಇದೆ. ಉಳಿದ ಮೂರು ತಿಂಗಳಲ್ಲಿ ಸಂಗ್ರಹಕ್ಕೆ ಆದ್ಯತೆ ನೀಡಲಾಗುವುದು. ಹಳೆಯ ಬಾಕಿಯಲ್ಲಿ ಈವರೆಗೆ ₹ 12 ಕೋಟಿ ವಸೂಲಾಗಿದೆ’ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳಾದ ನಂಜನಗೂಡು, ಹುಣಸೂರು ಹಾಗೂ ಹೂಟಗಳ್ಳಿ ನಗರಸಭೆಗಳು, ಕೆ.ಆರ್.ನಗರ, ಬನ್ನೂರು, ಪಿರಿಯಾಪಟ್ಟಣ, ತಿ. ನರಸೀಪುರ ಮತ್ತು ಎಚ್.ಡಿ. ಕೋಟೆ ಪುರಸಭೆಗಳು, ಸರಗೂರು, ಕಡಕೊಳ, ಶ್ರೀರಾಂಪುರ, ಬೋಗಾದಿ ಹಾಗೂ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
₹ 96.68 ಕೋಟಿ ಬೇಡಿಕೆಯಲ್ಲಿ ಅಕ್ಟೋಬರ್ ಅಂತ್ಯದವರೆಗೆ ₹ 80.29 ಕೋಟಿ ವಸೂಲಾಗಿದೆ. ಅಂದರೆ ಶೇ 83.04ರಷ್ಟು ಪ್ರಗತಿ ಸಾಧಿಸಲಾಗಿದೆ. 2024–25ನೇ ಸಾಲಿನಲ್ಲೂ ಇವು ಉತ್ತಮ ಪ್ರಗತಿ ಸಾಧಿಸಿದ್ದವು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಮೂಲಗಳು ತಿಳಿಸಿವೆ.
Highlights - ತೆರಿಗೆದಾರರಿಂದ ಉತ್ತಮ ಪ್ರತಿಕ್ರಿಯೆ ಕೆಲವು ತಿಂಗಳು ಬಾಕಿ ಗರಿಷ್ಠ ಸಂಗ್ರಹಿಸಲು ಸ್ಥಳೀಯ ಸಂಸ್ಥೆಗಳ ಕ್ರಮ
Cut-off box - ಮೈಸೂರು ಮಹಾನಗರಪಾಲಿಕೆ: ತೆರಿಗೆ ವಸೂಲಾತಿ ವಿವರ (₹ ಕೋಟಿಗಳಲ್ಲಿ) ಆರ್ಥಿಕ ವರ್ಷ;ಬೇಡಿಕೆ;ವಸೂಲಾತಿ;ಶೇ 2022-23;202.97;168.56;83.05 2023-24;214.56;183.83;86.00 2024-25;251.42;229.11;91.13 2025-26;243.66;202.16;82.97 (ಮಾಹಿತಿ: ಪಾಲಿಕೆ 2025-26ರಲ್ಲಿ ಅ.31ರವರೆಗೆ)
Cut-off box - ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ವಸೂಲಾತಿ (₹ಲಕ್ಷಗಳಲ್ಲಿ) ಸಂಸ್ಥೆ;ಬೇಡಿಕೆ;ವಸೂಲಾತಿ;ಶೇಕಡಾವಾರು ಪ್ರಗತಿ ನಂಜನಗೂಡು ನಗರಸಭೆ;1235.68;1075.72;87.05 ಹುಣಸೂರು ನಗರಸಭೆ;680.81;590.35;86.71 ಹೂಟಗಳ್ಳಿ ನಗರಸಭೆ;3600.46;3024.54;84.00 ಕೆ.ಆರ್.ನಗರ ಪುರಸಭೆ;409.17;357.12;87.28 ಬನ್ನೂರು ಪುರಸಭೆ;124.30;107.06;86.13 ಪಿರಿಯಾಪಟ್ಟಣ ಪುರಸಭೆ;255.00;236.23;92.64 ತಿ.ನರಸೀಪುರ ಪುರಸಭೆ;326.06;292.06;89.57 ಎಚ್.ಡಿ. ಕೋಟೆ ಪುರಸಭೆ;190.28;127.39;66.95 ಸರಗೂರು ಪಟ್ಟಣ ಪಂಚಾಯಿತಿ;72.30 60.10 83.13 ಕಡಕೊಳ ಪಟ್ಟಣ ಪಂಚಾಯಿತಿ;518.01;397.01;76.64 ಶ್ರೀರಾಂಪುರ ಪಟ್ಟಣ ಪಂಚಾಯಿತಿ;695.00;531.52;76.48 ಬೋಗಾದಿ ಪಟ್ಟಣ ಪಂಚಾಯಿತಿ;947.86;795.33;83.91 ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ;613.41;434.60;70.85 ಒಟ್ಟು;9668.34;8029.03;83.04
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.