
ಮೈಸೂರು: ‘ಸರ್ಕಾರಿ ಜಾಗ ಒತ್ತುವರಿಯಾಗಿದ್ದರೆ ತ್ವರಿತವಾಗಿ ತೆರವು ಕಾರ್ಯಾಚರಣೆ ನಡೆಸಿ, ಅದನ್ನು ಸಾರ್ವಜನಿಕ ಉದ್ದೇಶಗಳಿಗೆ ಕಾಯ್ದಿರಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿನ ಸಿದ್ಧಾರ್ಥನಗರದ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಸಭಾಂಗಣದಲ್ಲಿ ಬುಧವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಹಳ್ಳಿಗಳಲ್ಲಿ ತೆರವು ಕಾರ್ಯಾಚರಣೆಯನ್ನು ನಿಗದಿತ ಸಮಯದೊಳಗೆ ಮುಗಿಸಬೇಕು. ಪ್ರಾಥಮಿಕ ಆಸ್ಪತ್ರೆ, ಶಾಲಾ ಕೊಠಡಿಗಳು, ಅಂಗನವಾಡಿ ಕೇಂದ್ರ, ವಸತಿನಿಲಯಗಳು, ಆಶ್ರಯ ಬಡಾವಣೆಗಳ ಮೊದಲಾದವುಗಳಿಗೆ ಮೀಸಲಿಡಬೇಕು’ ಎಂದರು.
ಆದ್ಯತೆ ನೀಡಿ: ‘ಕೆರೆ–ಕಟ್ಟೆಗಳ ಒತ್ತುವರಿ ತೆರವಿಗೂ ಆದ್ಯತೆ ಕೊಡಬೇಕು. ಪಟ್ಟಿ ಮಾಡಿಕೊಂಡು ದಿನಾಂಕ ನಿಗದಿಪಡಿಸಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.
‘ರೈತರು ಸೇರಿದಂತೆ ಪ್ರತಿಯೊಬ್ಬರಿಗೂ ಕಂದಾಯ ಇಲಾಖೆಯು ಪ್ರಮುಖ ಹಾಗೂ ಮಾತೃ ಇಲಾಖೆಯಾಗಿದೆ. ಸಾರ್ವಜನಿಕರು ಸಣ್ಣಪುಟ್ಟ ವಿಚಾರಗಳಿಗೆ ಕಚೇರಿಗಳಿಗೆ ಅಲೆದಾಡದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
‘ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇ-ಪೌತಿ ಖಾತೆ ಆಂದೋಲನದಿಂದಾಗಿ ಜನರಿಗೆ ಅನುಕೂಲವಾಗಿದೆ. ಇದನ್ನು ಹಳ್ಳಿಗಳಲ್ಲಿ ಮತ್ತಷ್ಟು ವೇಗಗೊಳಿಸಬೇಕು. ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳು, ಆರ್‌ಐಗಳು ನಿಮ್ಮ ಹಂತದಲ್ಲಿ ಪರಿಶೀಲನೆ ನಡೆಸಿ ಇ– ಪೌತಿ ಖಾತೆ ಪ್ರಕ್ರಿಯೆ ಮುಗಿಸಬೇಕು. ಮುಂದಿನ ದಿನಗಳಲ್ಲಿ ನಾನೇ ಹಳ್ಳಿಗಳಿಗೆ ಭೇಟಿ ನೀಡಿ ಇ-ಪೌತಿ ಪ್ರಗತಿ ಕಾರ್ಯವನ್ನು ಪರಿಶೀಲನೆ ನಡೆಸುತ್ತೇನೆ’ ಎಂದು ತಿಳಿಸಿದರು.
ಮೇಲ್ವಿಚಾರಣೆ ಮಾಡಿ: ‘ಭೂ ಸುರಕ್ಷಾ ಯೋಜನೆಯಡಿ ತಹಶೀಲ್ದಾರ್, ಎಸಿ ಕಚೇರಿಗಳಲ್ಲಿರುವ ಎಲ್ಲಾ ಕಡತಗಳನ್ನು ಪ್ರತಿದಿನ ಸ್ಕ್ಯಾನಿಂಗ್ ಮಾಡಿ ಕಂಪ್ಯೂಟರ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಬಾಕಿ ಇರುವ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕು. ಈ ಪ್ರಕ್ರಿಯೆ ಮುಗಿದರೆ ರೈತರು ಇರುವಲ್ಲೇ ಆನ್‌ಲೈನ್ ಮೂಲಕ ದಾಖಲೆಗಳನ್ನು ಪಡೆಯಬಹುದಾಗಿದೆ. ನಿತ್ಯವೂ 200ರಿಂದ 300 ದಾಖಲೆಗಳನ್ನು ಸ್ಕ್ಯಾನ್ ಮಾಡಿದರೆ ಮಾರ್ಚ್ ತಿಂಗಳೊಳಗೆ ಮುಗಿಸಬಹುದು. ತಹಶೀಲ್ದಾರರು ನಿತ್ಯವೂ ಮೇಲ್ವಿಚಾರಣೆ ಮಾಡಬೇಕು’ ಎಂದು ತಿಳಿಸಿದರು.
‘ರೈತರ ಆರ್‌ಟಿಸಿಗೆ ಆಧಾರ್ ಸೀಡಿಂಗ್ ಕಾರ್ಯವನ್ನು ಶೇ 100ರಷ್ಟು ಪೂರ್ಣಗೊಳಿಸಬೇಕು. ಇದರಿಂದ ಬೋಗಸ್ ಪ್ರಕರಣಗಳನ್ನು ತಡೆಯಲು ಕ್ರಮ ವಹಿಸಬಹುದಾಗಿದೆ’ ಎಂದರು.
‘ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮ ಆಡಳಿತ ಅಧಿಕಾರಿಗಳ ಕೆಲಸವನ್ನು ಮೇಲ್ವಿಚಾರಣೆ ನಡೆಸಬೇಕು. ಗ್ರಾಮೀಣ ರೈತರು, ಸಾರ್ವಜನಿಕರ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಬೇಕು. ಮುಖ್ಯಮಂತ್ರಿಯವರ ಜಿಲ್ಲೆ ಆಗಿರುವುದರಿಂದ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬರಬಾರದು. ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯಪ್ರವೃತ್ತರಾಗಬೇಕು’ ಎಂದು ಸೂಚಿಸಿದರು.
ಕಂದಾಯ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನೆ ಜನರಿಂದ ದೂರು ಬಾರದಂತೆ ನೋಡಿಕೊಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿ
ಕಂದಾಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದಲ್ಲಿ ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದುಪಿ.ಶಿವರಾಜು ಹೆಚ್ಚುವರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.