
ಮೈಸೂರು: ‘ಸಾಮೂಹಿಕ ಪ್ರಾರ್ಥನೆಗಳಿಂದ ಧರ್ಮ ಮತ್ತು ಪರಂಪರೆಯು ಉಳಿಯುತ್ತದೆ’ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಪ್ರತಿಪಾದಿಸಿದರು.
ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಕೋಟೆ ಶಾಂತಿನಾಥ ಬಸದಿ ವತಿಯಿಂದ ಭಾನುವಾರ ಆಯೋಜಿಸಿದ್ದ ಶಾಂತಿನಾಥ ತೀರ್ಥಂಕರರು ಹಾಗೂ ಮಾನಸ್ತಂಭೋಪರಿ ಜಿನ ಬಿಂಬಗಳ ಪಂಚಕಲ್ಯಾಣ ಪೂಜಾ ಮಹೋತ್ಸವದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
‘ಧರ್ಮ ಉಳಿಯಬೇಕೆಂದರೆ ಭಕ್ತರು, ಅನುಯಾಯಿಗಳು ಒಗ್ಗಟ್ಟಾಗಬೇಕು. ಸಂಸ್ಕೃತಿ ಮತ್ತು ಆಚರಣೆಗಳ ಮೌಲ್ಯದ ಅರಿವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು. ಅದರಿಂದ ಸನಾತನ ಧರ್ಮವು ಮತ್ತಷ್ಟು ಬಲವಾಗುತ್ತದೆ’ ಎಂದರು.
‘ಧರ್ಮವನ್ನು ಒಡೆಯಲು ಕೆಲ ದುಷ್ಟಶಕ್ತಿಗಳು ಮೊದಲಿನಿಂದಲೂ ಹುನ್ನಾರ ನಡೆಸಿವೆ. ತಿರುಪತಿ, ಶಬರಿಮಲೆ, ತಿರುವನಂತಪುರದ ನಂತರ ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಚಾರವನ್ನು ಮಾಡಿವೆ. ವಿಕೃತ ಮನಸ್ಸುಗಳ ವಿರುದ್ಧ ಹೋರಾಡಲು ಸಾಮೂಹಿಕ ಆಚರಣೆಗಳನ್ನು ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.
‘ದಸರೆ ವೇಳೆ ಚಾಮುಂಡೇಶ್ವರಿ ದೇವಿ ಪೂಜೆ ಮಾಡಲು ಹೋದರೆ, ಅದಕ್ಕೆ ಕೆಲ ಶಕ್ತಿಗಳು ಅಡಚಣೆ ಉಂಟು ಮಾಡುತ್ತಿವೆ’ ಎಂದು ಹೇಳಿದ ಅವರು, ‘ನಮ್ಮದೇ ಹಿಂದೂ ಸಮಾಜದವರು ಶಾಂತಿನಾಥ ಬಸದಿಯಲ್ಲಿ ಪೂಜಾ ಕೈಂಕರ್ಯ ಮಾಡಲು ಅವಕಾಶ ಕೊಡುತ್ತಿಲ್ಲ. ಸದ್ಯ ತಾತ್ಕಾಲಿಕ ಹಿನ್ನಡೆ ಆಗಿರಬಹುದು. ಆದರೆ, ಮುಂದೊಂದು ದಿನ ಬಸದಿ ಆವರಣದಲ್ಲಿಯೇ ಕಾರ್ಯಕ್ರಮ ಆಗುವಂತೆ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು’ ಎಂದರು.
₹ 10 ಲಕ್ಷ ಅನುದಾನ:
‘ಶಾಂತಿನಾಥ ಬಸದಿ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ಮುಂದಿನ ಜನವರಿಯಲ್ಲಿ ₹ 10 ಲಕ್ಷ ಬಿಡುಗಡೆ ಮಾಡಲಾಗುವುದು’ ಎಂದು ಶ್ರೀವತ್ಸ ಭರವಸೆ ನೀಡಿದರು.
ಆಚಾರ್ಯ ವಿದ್ಯಾಸಾಗರ ಮುನಿ ಆಶೀರ್ವಚನ ನೀಡಿದರು. ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ನರಸಿಂಹರಾಜಪುರ ಜೈನಮಠದ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ, ಆರತಿಪುರ ಜೈನಮಠದ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಪಾಲ್ಗೊಂಡಿದ್ದರು.
₹ 10 ಲಕ್ಷ ಅನುದಾನ ಭರವಸೆ ಬಸದಿ ಆವರಣದಲ್ಲಿಯೇ ಕಾರ್ಯಕ್ರಮ ಎಲ್ಲರ ವಿಶ್ವಾಸ ತೆಗೆದುಕೊಳ್ಳಲು ಕ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.