ADVERTISEMENT

ತ್ಯಾಜ್ಯದಿಂದ ಕಲಾಕೃತಿ ರಚನೆ: ‘ಸ್ವಚ್ಛತೆಯ ಸಂದೇಶ’ ಸಾರಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 15:41 IST
Last Updated 22 ಜನವರಿ 2026, 15:41 IST
   

ಪ್ರಜಾವಾಣಿ ವಾರ್ತೆ

ಮೈಸೂರು: ಇಲ್ಲಿನ ಪುರಭವನದ ಆವರಣದಲ್ಲಿ ಮಹಾನಗರಪಾಲಿಕೆಯಿಂದ ಗುರುವಾರ ಆಯೋಜಿಸಿದ್ದ ಪೋಸ್ಟರ್ ತಯಾರಿಕೆ ಮತ್ತು ತ್ಯಾಜ್ಯದಿಂದ ಕಲಾಕೃತಿ ರಚನೆ (ವೇಸ್ಟ್ ಟು ಆರ್ಟಿಫ್ಯಾಕ್ಟ್) ಸ್ಪರ್ಧೆಯಲ್ಲಿ 1,200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡು ‘ಸ್ವಚ್ಛತೆಯ ಸಂದೇಶ’ ಸಾರಿದರು.

ಕೇಂದ್ರ ಸರ್ಕಾರದ ‘ಸ್ವಚ್ಛ ಭಾರತ ಅಭಿಯಾನ 2.0’ ಹಾಗೂ ‘ಸ್ವಚ್ಛ ಸರ್ವೇಕ್ಷಣಾ 2025-26’ರ ಜಾಗೃತಿಯ ಭಾಗವಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಸಲಾಯಿತು.

ADVERTISEMENT

‘ಸ್ವಚ್ಛತೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ’ ಎಂಬ ವಿಷಯದ ಕುರಿತು ಪೋಸ್ಟರ್ ತಯಾರಿಕೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ಥಳದಲ್ಲೇ ಆಕರ್ಷಕ ಚಿತ್ರಗಳನ್ನು ಬಿಡಿಸಿದರು. ‘ತ್ಯಾಜ್ಯದಿಂದ ಕಲಾಕೃತಿ’ ತಯಾರಿಸುವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿನ ತ್ಯಾಜ್ಯವನ್ನು ಬಳಸಿ ಸಿದ್ಧಪಡಿಸಿದ ಕಲಾಕೃತಿಗಳನ್ನು ತಂದು ಪ್ರದರ್ಶಿಸಿದರು. ಕಸದಿಂದ ರಸ ಮಾಡಲು ಸಾಧ್ಯ ಎಂಬುದನ್ನು ಪ್ರಸ್ತುತಪಡಿಸಿದರು.

ವಿಜೇತರಿಗೆ ಬಹುಮಾನ ವಿತರಿಸಿದ ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್‌ ಆಸೀಫ್‌ ಮಾತನಾಡಿ, ‘ಸ್ಪರ್ಧೆಗೆ ದೊಡ್ಡ ಮಟ್ಟದ ಸ್ಪಂದನೆ ದೊರೆತದ್ದು ಹರ್ಷ ತಂದಿದೆ. ಯುವಪೀಳಿಗೆಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಯಿತು. ನಗರದ ವಿವಿಧ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರತಿಭೆ ಅನಾವರಣಗೊಳಿಸಿದರು. ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ’ ಎಂದು ತಿಳಿಸಿದರು.

ಮಹಾನಗರಪಾಲಿಕೆಯ ಎಇಇ ಮೀನಾಕ್ಷಿ, ಪರಿಸರ ಎಂಜಿನಿಯರ್‌ಗಳಾದ ಮಹದೇವಮ್ಮ, ನವೀನ್, ಜ್ಯೋತಿ, ಲೋಕೇಶ್ವರಿ, ಕೃಷ್ಣಮೂರ್ತಿ ಹಾಗೂ ಶ್ರೀದೇವಿ, ಆರೋಗ್ಯ ನಿರೀಕ್ಷಕರು ಪಾಲ್ಗೊಂಡಿದ್ದರು.

ಫಲಿತಾಂಶ:

ತ್ಯಾಜ್ಯದಿಂದ ಕಲಾಕೃತಿ: ಪ್ರಥಮ– ಪ್ರನರದತ್ತ ಬಿ., 3ನೇ ತರಗತಿ, ಬೇಡನ್‌ ಪೊವೆಲ್ ಪಬ್ಲಿಕ್ ಶಾಲೆ.

ದ್ವಿತೀಯ– ಶ್ರೀಕಾಂತ್, 9ನೇ ತರಗತಿ, ಬಿ.ಜಿ.ಎಸ್, ಶ್ರೀರಾಂಪುರ.

ತೃತೀಯ– ಅಮೂಲ್ಯ, 9ನೇ ತರಗತಿ, ಸೇಂಟ್‌ ಥಾಮಸ್ ಶಾಲೆ.

ಪೋಸ್ಟರ್ ಮೇಕಿಂಗ್: ಪ್ರಥಮ– ಪಾವನಿ ಎಚ್.ಪಿ., 8ನೇ ತರಗತಿ, ಕ್ಯಾಪಿಟಲ್ ಪಬ್ಲಿಕ್ ಸ್ಕೂಲ್.

ದ್ವಿತೀಯ– ಚಾರುಮಿತ್ರ ಎಂ., 8ನೇ ತರಗತಿ, ಐಡಿಯಲ್ ಜಾವಾ ರೋಟರಿ ಶಾಲೆ.

ತೃತೀಯ– ಎಚ್. ಮಂಜುಶ್ರೀ, 4ನೇ ತರಗತಿ, ಜೆ.ಎಸ್.ಎಸ್ ಪಬ್ಲಿಕ್ ಶಾಲೆ, ಸಿದ್ಧಾರ್ಥನಗರ.

ಜೊತೆಗೆ 20 ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

ಸ್ಪರ್ಧೆಯಲ್ಲಿ ವಿಶೇಷ ಮಕ್ಕಳು ಕೂಡ ಉತ್ಸಾಹದಿಂದ ಭಾಗವಹಿಸಿ ಕಲಾಕೃತಿಗಳನ್ನು ಪ್ರದರ್ಶಿಸಿದ್ದು ಸಾರ್ವಜನಿಕರ ವಿಶೇಷ ಗಮನ ಸೆಳೆಯಿತು.

ರೀಬಾರ್ನ್ ಫೌಂಡೇಶನ್ ಸ್ಪೆಷಲ್ ಸ್ಕೂಲ್ ಅಂಡ್ ಡೇ ಕೇರ್ ಫಾರ್ ಸ್ಪೆಷಲ್ ಚಿಲ್ಡ್ರನ್ಸ್‌ ವಿದ್ಯಾರ್ಥಿಗಳು ಗಮನಸೆಳೆದರು. ವಿಶೇಷ ಮಕ್ಕಳನ್ನು ಒಳಗೊಂಡ, ವಿಶೇಷ ವಿಭಾಗದಲ್ಲಿ ಮೂರು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಈ ವಿಭಾಗದಲ್ಲಿ ಬಹುಮಾನಿತರು: ಪ್ರಥಮ– ಕುಸುಮಾ, 5ನೇ ತರಗತಿ, ದ್ವಿತೀಯ– ಪವನ ಕೆ., 2ನೇ ತರಗತಿ, ತೃತೀಯ– ತುಷಾರ್ ಗೌಡ, 1ನೇ ತರಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.