ADVERTISEMENT

ಮೈಸೂರು: ಶಿವರಾತ್ರಿಗೆ ದೇವಾಲಯಗಳಲ್ಲಿ ಸಿದ್ಧತೆ

ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 6:26 IST
Last Updated 18 ಫೆಬ್ರುವರಿ 2023, 6:26 IST
ಮೈಸೂರು ಅರಮನೆಯಲ್ಲಿರುವ ತ್ರೀನೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶಿವನ ಮೂರ್ತಿಗೆ ಧರಿಸುವ ಚಿನ್ನದ ಕೊಳಗವನ್ನು ಮುಜರಾಯಿ ಇಲಾಖೆಯಿಂದ ದೇವಸ್ಥಾನದ ಅಧಿಕಾರಿಗಳಿಗೆ ಶುಕ್ರವಾರ ಹಸ್ತಾಂತರಿಸಲಾಯಿತು. ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ, ಮುಜರಾಯಿ ತಹಶೀಲ್ದಾರ್‌ ಕೃಷ್ಣ, ಅರಮನೆ ಎಸಿಪಿ ಚಂದ್ರಶೇಖರ್‌, ಚಾಮುಂಡೇಶ್ವರಿ ದೇವಸ್ಥಾನದ ಆಡಳಿತಾಧಿಕಾರಿ ಗೋವಿಂದರಾಜು ಇದ್ದಾರೆ
ಮೈಸೂರು ಅರಮನೆಯಲ್ಲಿರುವ ತ್ರೀನೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶಿವನ ಮೂರ್ತಿಗೆ ಧರಿಸುವ ಚಿನ್ನದ ಕೊಳಗವನ್ನು ಮುಜರಾಯಿ ಇಲಾಖೆಯಿಂದ ದೇವಸ್ಥಾನದ ಅಧಿಕಾರಿಗಳಿಗೆ ಶುಕ್ರವಾರ ಹಸ್ತಾಂತರಿಸಲಾಯಿತು. ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ, ಮುಜರಾಯಿ ತಹಶೀಲ್ದಾರ್‌ ಕೃಷ್ಣ, ಅರಮನೆ ಎಸಿಪಿ ಚಂದ್ರಶೇಖರ್‌, ಚಾಮುಂಡೇಶ್ವರಿ ದೇವಸ್ಥಾನದ ಆಡಳಿತಾಧಿಕಾರಿ ಗೋವಿಂದರಾಜು ಇದ್ದಾರೆ   

ಮೈಸೂರು: ಮಹಾಶಿವರಾತ್ರಿ ಹಬ್ಬಕ್ಕೆ ನಗರದ ಶಿವಾಲಯಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಿಶೇಷ ಪೂಜೆ, ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಪತ್ರೆ ಅರ್ಪಣೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶುಕ್ರವಾರ ಭರದ ತಯಾರಿ ಮಾಡಿಕೊಳ್ಳಲಾಯಿತು. ಶನಿವಾರ ಸಂಜೆಯಿಂದ ಜಾಗರಣೆ ನಡೆಯಲಿದ್ದು, ಭಕ್ತರಿಗೆ ಶಿವನಾಮ ಸ್ಮರಣೆ, ಜಪ, ತಪಗಳಿಗೆ ವ್ಯವಸ್ಥೆ ಮಾಡಲಾಗಿದೆ.

ಚಿನ್ನದ ಕೊಳಗ ಹಸ್ತಾಂತರ:

ADVERTISEMENT

ಅಂಬಾವಿಲಾಸ ಅರಮನೆ ಆವರಣದಲ್ಲಿರುವ ಪ್ರಸಿದ್ಧ ತ್ರಿನೇಶ್ವರಸ್ವಾಮಿ ದೇವಸ್ಥಾನಕ್ಕೆ, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಖಜಾನೆಯಲ್ಲಿ ಇರಿಸಲಾಗಿದ್ದ 11 ಕೆ.ಜಿ ತೂಕದ ಚಿನ್ನದ ಕೊಳಗ (ಚಿನ್ನದ ಮುಖವಾಡ)ವನ್ನು ಪೊಲೀಸ್‌ ಭದ್ರತೆಯಲ್ಲಿ ಅರಮನೆ ಆವರಣಕ್ಕೆ ತಂದು ಶುಕ್ರವಾರ ದೇವಸ್ಥಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಕೊಳಗಕ್ಕೆ ಪೂಜೆ ಸಲ್ಲಿಸಲಾಯಿತು. ಶನಿವಾರ ಹಾಗೂ ಭಾನುವಾರ ತ್ರೀನೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಶನಿವಾರ ಬೆಳಿಗ್ಗೆ 6ರಿಂದ ಮಧ್ಯರಾತ್ರಿವರೆಗೆ ಹಾಗೂ 19ರಂದು ಬೆಳಿಗ್ಗೆ 6ರಿಂದ 9ರವರೆಗೆ ತೆರೆದಿರುತ್ತದೆ. ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನಡೆಯಲಿದೆ. 20ರಂದು ಚಿನ್ನದ ಕೊಳಗವನ್ನು ಜಿಲ್ಲಾ ಖಜಾನೆಗೆ ಮರಳಿಸಲಾಗುವುದು.

ಭಾನುವಾರ ರಜಾ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಬರುವ ನಿರೀಕ್ಷೆ ಇದೆ. ನೂಕುನುಗ್ಗಲು ಉಂಟಾಗದಂತೆ ನೋಡಿಕೊಳ್ಳಲು, ಪ್ರಸಾದ ವಿನಿಯೋಗಿಸಲು ಕೌಂಟರ್‌ ತೆರೆಯಲಾಗಿದೆ.

ಕೊಳಗ ಪೂಜೆ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತಾಧಿಕಾರಿ ಗೋವಿಂದರಾಜು, ಎಎಒ ದಿನೇಶ್‌, ಮುಜರಾಯಿ ತಹಶೀಲ್ದಾರ್‌ ಕೃಷ್ಣ, ಸಿಬ್ಬಂದಿ ಶೀಲಾ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ, ತ್ರಿನೇಶ್ವರಸ್ವಾಮಿ ದೇವಾಸ್ಥಾನ ಅರ್ಚಕ ಸಂತಾನಂ, ವೆಂಕಟೇಶ್‌ ಇದ್ದರು.

ನಗರದ ವಿವಿಧೆಡೆ:

ರಾಮಾನುಜ ರಸ್ತೆಯ ಕಾಮೇಶ್ವರ-ಕಾಮೇಶ್ವರಿ ದೇವಸ್ಥಾನ, ಚಾಮರಾಜಪುರಂನ ಪ್ರಸನ್ನ ವಿಶ್ವೇಶ್ವರ ದೇವಸ್ಥಾನ, ಕೆ.ಜಿ.ಕೊಪ್ಪಲಿನ ಚಂದ್ರಮೌಳೇಶ್ವರ ದೇವಸ್ಥಾನ, ಮಾತೃಮಂಡಳಿ ವೃತ್ತದ ಚಂದ್ರಮೌಳೇಶ್ವರ ದೇವಸ್ಥಾನ, ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇಗುಲ, ಮಹದೇಶ್ವರ ಸ್ವಾಮಿ ದೇಗುಲ, ಅಶೋಕಪುರಂನ ಮುಕ್ಕಣ್ಣೇಶ್ವರ ಸ್ವಾಮಿ ದೇಗುಲ, ಕುಂಬಾರಕೊಪ್ಪಲಿನ ಮಹದೇಶ್ವರಸ್ವಾಮಿ ದೇವಸ್ಥಾನ, ಲಷ್ಕರ್ ಮೊಹಲ್ಲಾದ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ನಗರದ ವಿವಿಧ ಶಿವ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ. ಚಾಮುಂಡಿಬೆಟ್ಟದ ಮಹಾಬಲೇಶ್ವರ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಎರಡು ವರ್ಷಗಳಿಂದ ಶಿವರಾತ್ರಿ ಸಂಭ್ರಮಕ್ಕೆ ಕೋವಿಡ್‌ ಅಡ್ಡಿಯಾಗಿತ್ತು. ಈ ಬಾರಿ ಆಚರಣೆಗೆ ಜನರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಭಕ್ತರು ಉಪವಾಸ ವ್ರತ ಕೈಗೊಂಡು, ಜಾಗರಣೆ ಇರುತ್ತಾರೆ.

ಖರೀದಿ ಭರಾಟೆ ಜೋರು: ಹಬ್ಬದ ಮುನ್ನಾದಿನವಾದ ಶುಕ್ರವಾರ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ದೇವರಾಜ ಮಾರುಕಟ್ಟೆ, ನಂಜುಮಳಿಗೆ ಹಾಗೂ ಅಗ್ರಹಾರದ ವಾಣಿ ವಿಲಾಸ ಮಾರುಕಟ್ಟೆಯಲ್ಲಿ ಶಿವಪೂಜೆಗೆ ಪ್ರಧಾನವಾಗಿ ಬಳಸುವ ಬಿಲ್ವಪತ್ರೆ, ವಿಭೂತಿ, ಹೂವು, ಹಣ್ಣುಗಳ ಹಾಗೂ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಜನರು ತೊಡಗಿದ್ದರು.

ಮಲ್ಲಿಗೆ, ಕಾಕಡ, ಕನಕಾಂಬರ, ಸೇವಂತಿ ಹೂವುಗಳಿಗೆ ಬೇಡಿಕೆ ಕಂಡುಬಂತು. ದೇವರಾಜ ಮಾರುಕಟ್ಟೆಯಲ್ಲಿ ಒಂದು ಕಟ್ಟು ಬಿಲ್ವಪತ್ರೆಗೆ ₹ 20, ಸೇವಂತಿ ಮಾರಿಗೆ ₹ 80, ಬಾಳೆ ಹಣ್ಣು ಚಿಪ್ಪಿಗೆ ₹ 30ರಿಂದ ₹ 50 ಇತ್ತು. ಕಲ್ಲಂಗಡಿ ಹಣ್ಣಿಗೂ ಬೇಡಿಕೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.