ADVERTISEMENT

ಮೈಸೂರು | ತೊಟ್ಟವಾಡಿಯಲ್ಲಿ ವಸತಿ ಶಾಲೆ

8 ಎಕರೆಯಲ್ಲಿ ₹ 23 ಕೋಟಿ ವೆಚ್ಚದಲ್ಲಿ ನಿರ್ಮಾಣ, ಸಚಿವ ಮಹದೇವಪ್ಪ ಕ್ರಮ

ಎಂ.ಮಹೇಶ್
Published 5 ಫೆಬ್ರುವರಿ 2026, 3:10 IST
Last Updated 5 ಫೆಬ್ರುವರಿ 2026, 3:10 IST
ತಿ.ನರಸೀಪುರ ತಾಲ್ಲೂಕು ಮೂಗೂರು ಹೋಬಳಿಯ ಕನ್ನಹಳ್ಳಿ ಬಳಿಯ ತೊಟ್ಟವಾಡಿಯಲ್ಲಿ ಇಂದಿರಾಗಾಂಧಿ ವಸತಿಶಾಲೆಯ ಕಾಮಗಾರಿ ಪ್ರಗತಿಯಲ್ಲಿದೆ
ತಿ.ನರಸೀಪುರ ತಾಲ್ಲೂಕು ಮೂಗೂರು ಹೋಬಳಿಯ ಕನ್ನಹಳ್ಳಿ ಬಳಿಯ ತೊಟ್ಟವಾಡಿಯಲ್ಲಿ ಇಂದಿರಾಗಾಂಧಿ ವಸತಿಶಾಲೆಯ ಕಾಮಗಾರಿ ಪ್ರಗತಿಯಲ್ಲಿದೆ   

ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ. ಎಚ್‌.ಸಿ.ಮಹದೇವಪ್ಪ ಅವರು ಪ್ರತಿನಿಧಿಸುವ ತಿ.ನರಸೀಪುರ ತಾಲ್ಲೂಕಿನ ಮೂಗೂರು ಹೋಬಳಿಯ ತೊಟ್ಟವಾಡಿಯಲ್ಲಿ (ಕನ್ನಹಳ್ಳಿ ಗ್ರಾಮದ ಸ.ನಂ.396ರಲ್ಲಿ) ಇಂದಿರಾ ಗಾಂಧಿ ವಸತಿ ಶಾಲೆ ನಿರ್ಮಿಸಲಾಗುತ್ತಿದೆ.

ಬರೋಬ್ಬರಿ 8 ಎಕರೆ ಜಾಗದಲ್ಲಿ ವಸತಿಶಾಲೆ ಮೈದಳೆಯುತ್ತಿದ್ದು, ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಇನ್ನೊಂದು ವರ್ಷದಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ₹ 23 ಕೋಟಿ ಅನುದಾನ ಮಂಜೂರಾಗಿದೆ. ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಶೈಕ್ಷಣಿಕವಾಗಿ ಮಹತ್ವದ ಯೋಜನೆಯನ್ನು ಸಚಿವ ಮಹದೇವಪ್ಪ ಅವರು ಕೊಡುಗೆಯಾಗಿ ನೀಡಿದ್ದಾರೆ.

ಈ ಜಾಗಕ್ಕೆ ರಸ್ತೆ ಸಂಪರ್ಕವಿದ್ದು, ಜಮೀನು ಕೊತ್ತೇಗಾಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರಿದೆ. ಕನ್ನಹಳ್ಳಿ ಗ್ರಾಮದಿಂದ ಅರ್ಧ ಕಿ.ಮೀ. ಅಂತರದಲ್ಲಿದೆ. ಹೀಗಾಗಿ, ಈ ಜಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಕಂದಾಯ ಇಲಾಖೆಯಿಂದ ಹಸ್ತಾಂತರಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳು ಒಳಗೊಂಡ ವಸತಿಶಾಲೆ ಇದಾಗಲಿದೆ. ಮಕ್ಕಳಿಗೆ ಉಚಿತವಾಗಿ ಶಿಕ್ಷಣ ದೊರೆಯಲಿದೆ ಎಂದು ಇಲಾಖೆ ತಿಳಿಸಿದೆ.

ADVERTISEMENT

ಏನೇನಿರಲಿದೆ?: ‘ಸಚಿವ ಮಹದೇವಪ್ಪ ಅವರ ಒತ್ತಾಸೆಯ ಕಾರಣದಿಂದ ಅಲ್ಲಿ ವಸತಿಶಾಲೆ ನಿರ್ಮಾಣವಾಗುತ್ತಿದೆ. ಅಲ್ಲಿ ಒಟ್ಟು 250 ವಿದ್ಯಾರ್ಥಿಗಳಿಗೆ (ಪರಿಶಿಷ್ಟ ಜಾತಿಯ ಶೇ 75 ಹಾಗೂ ಎಸ್‌ಟಿ ಹಾಗೂ ಒಬಿಸಿ ಸೇರಿ ಶೇ 25ರಷ್ಟು) ವಿದ್ಯಾಭ್ಯಾಸಕ್ಕೆ ಅವಕಾಶ ಆಗಲಿದೆ. 6ರಿಂದ 10ನೇ ತರಗತಿಯವರೆಗೆ ಅಲ್ಲಿ ಬೋಧಿಸಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ಶಂಕರೇಗೌಡ ತಿಳಿಸಿದರು.

‘ಈ ಶಾಲೆಯಿಂದ ಇಡೀ ಜಿಲ್ಲೆಯ ಮಕ್ಕಳಿಗೆ ಅನುಕೂಲ ಆಗಲಿದೆ. ಸ್ಥಳೀಯರು ಹಾಗೂ ತಿ.ನರಸೀಪುರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಲಿದೆ. ಮೆರಿಟ್‌ ಆಧರಿಸಿ ಸೀಟು ಹಂಚಿಕೆ ನಡೆಸಲಾಗುತ್ತದೆ ಹಾಗೂ ಆ ಭಾಗದವರಿಗೆ ಆದ್ಯತೆ ನೀಡಲಾಗುತ್ತದೆ. ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಈ ಶಾಲೆಯು ಮಹತ್ವದ ಕೊಡುಗೆಯಾಗಲಿದೆ. ಇನ್ನೊಂದು ವರ್ಷದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎನ್ನುತ್ತಾರೆ ಅವರು.

ಅನುಕೂಲಕ್ಕಾಗಿ: ತಿ.ನರಸೀಪುರ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗದವರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ವಸತಿಶಾಲೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.

ಜಿಲ್ಲೆಯಲ್ಲಿ ಪ್ರಸ್ತುತ 39 ವಸತಿಶಾಲೆಗಳಿವೆ (ಪರಿಶಿಷ್ಟ ಜಾತಿ–25, ಪರಿಶಿಷ್ಟ ಪಂಗಡ– 9 ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ 5) ಮತ್ತು 5 ವಸತಿ ಕಾಲೇಜುಗಳಿವೆ. 

ಪ್ರತಿಭಾವಂತ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಸತಿ ಶಾಲೆಗಳು ಸಹಕಾರಿಯಾಗಿವೆ. ಅಲ್ಲಿ ಎಲ್ಲ ಸೌಲಭ್ಯವನ್ನೂ ಸರ್ಕಾರ ಒದಗಿಸುತ್ತಿದೆ
ಬಿ.ರಂಗೇಗೌಡ ಜಂಟಿ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ
‘ನಮ್ಮ ಸರ್ಕಾರದ ಬದ್ಧತೆ ಇದು’
‘ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಕೂಲ ಕಲ್ಪಿಸುವ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಅಡಿಪಾಯ ಹಾಕುವ ಮಹತ್ವದ ಉದ್ದೇಶದಿಂದ ತೊಟ್ಟವಾಡಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ನಿರ್ಮಿಸಲಾಗುತ್ತಿದೆ. ಇದು ಅಭಿವೃದ್ಧಿ ಹಾಗೂ ಶಿಕ್ಷಣದ ಕುರಿತಂತೆ ನಮ್ಮ ಸರ್ಕಾರವು ಹೊಂದಿರುವ ಬದ್ಧತೆಗೆ ಸಾಕ್ಷಿಯಾಗಿದೆ’ ಎಂದು ಸಚಿವ ಮಹದೇವಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.