
ಗುದ್ದಲಿಪೂಜೆ
ಮೈಸೂರು: ‘ತುರಗನೂರು ಶಾಖಾ ನಾಲೆಯು ವಿಶ್ವೇಶ್ವರಯ್ಯ ನಾಲೆಯ ಕೊನೆಯ ಭಾಗವಾಗಿದೆ. 1943ರಲ್ಲಿ ನಿರ್ಮಿಸಲಾಗಿದ್ದು, ಇದರ ಆಧುನೀಕರಣದಿಂದ 1,800 ಎಕರೆ ಕೃಷಿ ಭೂಮಿಗೆ ನೀರು ದೊರೆಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ತಿಳಿಸಿದರು.
ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಚಿದರವಳ್ಳಿಯಲ್ಲಿ ಶನಿವಾರ ₹ 91.33 ಕೋಟಿ ಮೊತ್ತದಲ್ಲಿ ತುರಗನೂರು, ಉಕ್ಕಲಗೆರೆ ಹಾಗೂ ಹಲವಾರ ಶಾಖಾ ನಾಲೆಗಳ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ತುರಗನೂರು ನಾಲೆ ಅಭಿವೃದ್ಧಿಯ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. 70 ವರ್ಷಗಳ ನಂತರ ಅಭಿವೃದ್ಧಿಯ ಬಗ್ಗೆ ಆಸಕ್ತಿ ವಹಿಸಿ ಕಾಮಗಾರಿ ರೂಪಿಸಿ ಅನುದಾನ ನೀಡಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದರು.
‘ನಂಜಾಪುರ ಏತ ನೀರಾವರಿ ಯೋಜನೆಯ ಪ್ರಾರಂಭವಾದ ದಿನದಿಂದಲೂ ಇದ್ದ ತೊಡಕನ್ನು ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿಪಡಿಸಲು ಹಾಗೂ ಎಲ್ಲಾ ಮೋಟಾರ್‌ಗಳನ್ನು ಹೊಸದಾಗಿ ಅಳವಡಿಸಲು ₹ 20 ಕೋಟಿ ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
‘ತುರಗನೂರು ನಾಲಾ ಅಭಿವೃದ್ದಿ ಕಾಮಗಾರಿಯಿಂದ 100 ಕ್ಯೂಸೆಕ್‌ಗಿಂತ ಅಧಿಕ ಪ್ರಮಾಣದ ನೀರು ಸೋಸಲೆ ಹೋಬಳಿಯ ಗ್ರಾಮಗಳಿಗೆ ಲಭಿಸಲಿದೆ. ಇದರಿಂದಾಗಿ ಈ ಪ್ರದೇಶವು ಹಚ್ಚ ಹಸಿರಿನಿಂದ ಕಂಗೊಳಿಸುವ ದಿನಗಳು ದೂರವಿಲ್ಲ’ ಎಂದರು.
‘ನಂಜಾಪುರ, ಸಿ.ವಿ.ಕೊಪ್ಪಲು, ಹೊಸಕೊಪ್ಪಲು, ಚಿಮಿಲಿ, ಚಿಕ್ಕಕಲ್ಲುಣಿ, ಬೊಮ್ಮನಹಳ್ಳಿ, ಎಸ್. ದೊಡ್ಡಪುರ, ಕೆಂಪನಪುರ, ಸೀಗೋಡಿಪುರ, ಬೋಳೇಗೌಡನಹುಂಡಿ, ರಾಮೇಗೌಡನಪುರ, ವಡ್ಡರಕೊಪ್ಪಲು, ಮರಿಯೂರು, ಬಿ.ಬೆಟ್ಟಹಳ್ಳಿ, ಮೇಗಲಕೊಪ್ಪಲು, ಕುಂತನಹಳ್ಳಿ, ದೇವಿನಹಳ್ಳಿ, ಎಂ.ಎಲ್.ಹುಂಡಿ, ಕಳ್ಳಪುರ, ಬೂದಹಳ್ಳಿ, ಉತ್ಸಲಗೆರೆ, ಕನ್ನಾಯಕನಹಳ್ಳಿ, ತಮ್ಮಡಿಪುರ, ನಾಗಲಿಗೆರೆ, ಕೋಣಗಹಳ್ಳಿ, ಚಿಟ್ಟಗಯ್ಯನಕೊಪ್ಪಲು, ನೆರೆಗ್ಯಾತನಹಳ್ಳಿ, ಹೊರಳಹಳ್ಳಿ, ಚಿದರವಳ್ಳಿ, ಮುಡುಕನಪುರ, ಹಲವಾರ, ದೊಡ್ಡಬಾಗಿಲು, ಕೊಳತ್ತೂರು ಗ್ರಾಮಗಳಿಗೆ ಈ ಕಾಮಗಾರಿಯಿಂದ ಉಪಯೋಗ ಆಗಲಿದೆ’ ಎಂದು ತಿಳಿಸಿದರು.
‘ಪಂಚ ಗ್ಯಾರಂಟಿ ಯೋಜನೆಗಳು ಬಡವರ ಜೀವನ ಮಟ್ಟ ಸುಧಾರಿಸಿದೆ. ಬಡ ಮಹಿಳೆ ಹಾಗೂ ಕುಟುಂಬಕ್ಕೆ ತಿಂಗಳಿಗೆ ಒಟ್ಟಾರೆ ₹4ಸಾವಿರದಿಂದ ₹5ಸಾವಿರ ದೊರೆಯುತ್ತಿದೆ’ ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್‌ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಮೈಮುಲ್ ಮಾಜಿ ಅಧ್ಯಕ್ಷ ಚಲುವರಾಜು, ಮುಖಂಡರಾದ ಎಚ್.ಸಿ. ಸಿದ್ಧಾರ್ಥ, ಸೋಸಲೆ ಮಹದೇವಸ್ವಾಮಿ, ವರದನಾಯಕ್, ಮಲ್ಲಿಕಾರ್ಜುನ, ಪರಶಿವಮೂರ್ತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.