ADVERTISEMENT

ಮುಡಾ ಬಜೆಟ್: ಕಾಂಗ್ರೆಸ್‌ ಶಾಸಕರಿಂದಲೇ ಅಸಮಾಧಾನ!

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 9:32 IST
Last Updated 7 ಮಾರ್ಚ್ 2024, 9:32 IST
   

ಮೈಸೂರು: ಇಲ್ಲಿನ ಮುಡಾದಲ್ಲಿ ಗುರುವಾರ ಮಂಡಿಸಲಾದ 2024–25ನೇ ಸಾಲಿನ ಬಜೆಟ್‌ಗೆ ಕಾಂಗ್ರೆಸ್‌ ಶಾಸಕರಿಂದಲೇ ಅಸಮಾಧಾನ ವ್ಯಕ್ತವಾಯಿತು.

ಇದ್ದರೂ ಒಂದೇ, ಮುಚ್ಚಿ ಹಾಕುವುದೂ ಒಂದೇ!

ಹೊಸ ಸರ್ಕಾರ ಬಂದ ನಂತರ ಮಂಡಿಸಿದ ಮುಡಾ ಬಜೆಟ್‌ ನಿರೀಕ್ಷೆ ಹುಸಿಗೊಳಿಸಿದೆ. ಮುಂಬರುವ ಸವಾಲುಗಳನ್ನು ಎದುರಿಸುವ ಪ್ರಸ್ತಾವಗಳಿಲ್ಲ. ಹೊಸ ಬಡಾವಣೆ ಅಭಿವೃದ್ಧಿಪಡಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದ್ದರೂ ಸ್ಪಷ್ಟವಾದ ನಿಯಮಾವಳಿ ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ. ದಾನ- ಧರ್ಮದ ಸಂಸ್ಥೆಯಷ್ಟೇ ಆಗಿದೆ. ಹೆಚ್ಚುತ್ತಿರುವ ವಾಹನಗಳ ದಟ್ಟಣೆ ನಿರ್ವಹಣೆಗೆ ತಕ್ಕಂತೆ ಪಾರ್ಕಿಂಗ್ ವ್ಯವಸ್ಥೆಯ ದೂರದೃಷ್ಟಿ ಇಲ್ಲವಾಗಿದೆ. ಜನಸಂಖ್ಯೆಯ ಮಾಹಿತಿಯನ್ನೂ ಸರಿಯಾಗಿ ನಮೂದಿಸಿಲ್ಲ. ಇದರಿಂದ ವಿಶೇಷವಾದ ಮೋನೋ ಅಥವಾ ಮೆಟ್ರೋ ರೈಲು ಸಿಗುವುದಿಲ್ಲ. ದೇವರಾಜ ಮಾರುಕಟ್ಟೆ ಬಗ್ಗೆ ಪ್ರಸ್ತಾಪ‌ ಇಲ್ಲವಾಗಿದೆ. ಮೂಲ ಉದ್ದೇಶ ಮರೆತಿರುವುದರಿಂದ ಪ್ರಾಧಿಕಾರ ಇದ್ದರೂ ಒಂದೇ; ಮುಚ್ಚಿ ಹಾಕುವುದೂ ಒಂದೇ.

ADVERTISEMENT

–ತನ್ವೀರ್‌ ಸೇಠ್, ಶಾಸಕ

ಬಹಿಷ್ಕರಿಸುತ್ತಿದ್ದೆವು

ನೂತನ ಅಧ್ಯಕ್ಷರ ಮೊದಲ ಸಭೆಯಾದ್ದರಿಂದ ಪಾಲ್ಗೊಂಡಿದ್ದೇವೆ; ಇಲ್ಲದಿದ್ದರೆ ಬಹಿಷ್ಕರಿಸುತ್ತಿದ್ದೆವು. ಮುಡಾ ವ್ಯಾಪ್ತಿಯ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಒಂದು ಕೆಲಸವೂ ಆಗಿಲ್ಲ.‌ ಆದರೆ, ಶಾಸಕರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಎಂಬುದು ಜನಸಾಮಾನ್ಯರ ಮನಸ್ಸಿನಲ್ಲಿದೆ. ಇದು ತಪ್ಪಬೇಕು. ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ಮುಡಾ ವ್ಯಾಪ್ತಿಯ ಬಡಾವಣೆಗಳ ಅಭಿವೃದ್ಧಿಗೆ ಅನುದಾನ ಕೊಡಬೇಕು.

–ಜಿ.ಟಿ. ದೇವೇಗೌಡ, ಶಾಸಕ

ಬಡವರಿಗೆ ನೆರವಾಗಿ

ನಗರದ ಬಡವರು ಹಾಗೂ ವಸತಿರಹಿತರ ಅನುಕೂಲಕ್ಕೆ ಅಗತ್ಯವಾದ ಯೋಜನೆಗಳನ್ನು ರೂಪಿಸಬೇಕು. ಅವರಿಗೆ ಸೂರು ಒದಗಿಸಬೇಕು.

–ಡಾ.ಡಿ.ತಿಮ್ಮಯ್ಯ, ವಿಧಾನಪರಿಷತ್‌ ಸದಸ್ಯ

ಆರ್‌ಟಿಒ ಕಾರ್ಯಕರ್ತರ ಹಾವಳಿ ತಪ್ಪಿಸಿ

ಆರ್‌ಟಿಐ ಕಾರ್ಯಕರ್ತರು ಮುಡಾಕ್ಕೆ ಬಂದು ಅಧಿಕಾರಿಗಳು ಕೆಲಸ ಮಾಡಲು ಬಿಡುತ್ತಿಲ್ಲ. ವರ್ಗಾವಣೆ ಮಾಡಿಸುವಷ್ಟು ಪ್ರಬಲರಾಗಿದ್ದಾರೆ. ಇದನ್ನು ತಡೆಯಬೇಕು. ಮೈಸೂರಿನವರೇ ಮುಖ್ಯಮಂತ್ರಿ ಆಗಿರುವುದರಿಂದ ಅವರನ್ನು ಬಳಸಿಕೊಂಡು ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.

–ಸಿ.ಎನ್. ಮಂಜೇಗೌಡ, ವಿಧಾನಪರಿಷತ್‌ ಸದಸ್ಯ

ಪರಿಹಾರ ಕಂಡುಕೊಳ್ಳಬೇಕು

ನಗರದಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಕ್ರಮ ವಹಿಸಬೇಕು. ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣ ಸ್ವಾಗತಾರ್ಹವಾಗಿದೆ.

–ದರ್ಶನ್ ಧ್ರುವನಾರಾಯಣ, ಶಾಸಕ

ಸಮಾಧಾನಕರವಾಗಿಲ್ಲ

ಈ ಬಜೆಟ್ ಸಮಾಧಾನಕರವಾಗಿಲ್ಲ. ಏನಿದೆ, ಏನಿಲ್ಲ ಎನ್ನುವುದೇ ಗೊತ್ತಾಗುತ್ತಿಲ್ಲ. ಪೆರಿಫೆರಲ್ ವರ್ತುಲ ರಸ್ತೆ, ಗುಂಪು ವಸತಿ ಯೋಜನೆಗಷ್ಟೆ ಸೀಮಿತವಾಗಿದೆ. ನಿಧಿ-1, ನಿಧಿ-2 ಎಂದು ಬೇರ್ಪಡಿಸದೇ ಎಲ್ಲವನ್ನೂ ನಿಧಿ-1ರಲ್ಲೇ ಸೇರಿಸಬೇಕು.

ನ್ಯಾಯಾಲಯ ಶುಲ್ಕ ಜಾಸ್ತಿಯಾಗುತ್ತಿದ್ದು, ಜನರು ಕೋರ್ಟ್‌ಗೆ ಹೋಗದಂತೆ ನಮ್ಮ ಸಭೆಯಲ್ಲೇ ಬಗೆಹರಿಯುವಂತೆ ಮಾಡಬೇಕು.

–ಕೆ.ಹರೀಶ್ ಗೌಡ, ಶಾಸಕ

ದೂರದೃಷ್ಟಿಯ ಯೋಜನೆ ಅಗತ್ಯ

ಶ್ರೀರಂಗಪಟ್ಟಣ ಹಾಗೂ ನಂಜನಗೂಡು ಪಟ್ಟಣವನ್ನೂ ಮೈಸೂರಿನಂತೆಯೇ ಅಭಿವೃದ್ಧಿಪಡಿಸಬೇಕು. ಈ ಮೂರು ನಗರಗಳಿಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದ್ದರಿಂದ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಬೇಕು.

–ರಮೇಶ್ ಬಂಡಿಸಿದ್ದೇಗೌಡ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.