ADVERTISEMENT

Caste Census: ಹಬ್ಬದಲ್ಲೂ ನಡೆಯಲಿದೆ ಜಾತಿವಾರು ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 23:42 IST
Last Updated 30 ಸೆಪ್ಟೆಂಬರ್ 2025, 23:42 IST
   

ಮೈಸೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಕೈಗೆತ್ತಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಯುಧಪೂಜೆ, ವಿಜಯದಶಮಿಯ ದಿನವೂ ನಡೆಯಲಿದ್ದು, ಹಬ್ಬದ ರಜೆ ಸಿಗಬಹುದೆಂದು ನಿರೀಕ್ಷಿಸಿದ್ದ ಸಮೀಕ್ಷಕರಲ್ಲಿ ನಿರಾಶಾಭಾವ ಮೂಡಿದೆ.

ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದರಿಂದ, ದಸರೆ ಉತ್ಸವದ ಜಂಬೂಸವಾರಿ ಸಿದ್ಧತೆ ನಡುವೆಯೂ, ಮೈಸೂರು ಜಿಲ್ಲಾಡಳಿತವು ಆಯುಧಪೂಜೆಯ ದಿನವಾದ ಬುಧವಾರವೇ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆಸಲಿದೆ.

ಹಬ್ಬಕ್ಕೆ ಕನಿಷ್ಠ ಒಂದು ದಿನವಾದರೂ ರಜೆ ಕೊಡಿ ಎಂಬ ಕೋರಿಕೆ ಈಡೇರಿಲ್ಲ. ‘ಈ ಬಾರಿ ನಮಗೆ ಹಬ್ಬವಿಲ್ಲ’ ಎಂಬುದು ಅವರ ವಿಷಾದದ ನುಡಿ. ಈ ನಡುವೆ, ಮಾಹಿತಿ ನೀಡಬೇಕಾದ ಕುಟುಂಬಗಳ ಸದಸ್ಯರು, ‘ಹಬ್ಬದ ದಿನಗಳಲ್ಲಿ ಬರಬೇಡಿ’ ಎಂದು ಹೇಳಿರುವುದು ಸಮೀಕ್ಷಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ADVERTISEMENT

ಆಯುಧಪೂಜೆಯ ಮುನ್ನಾ ದಿನವಾದ ಮಂಗಳವಾರ ಹಬ್ಬಕ್ಕಾಗಿ ಮನೆ ಹಾಗೂ ವಾಹನಗಳ ಸ್ವಚ್ಛತೆಯ ಸಿದ್ಧತೆಯಲ್ಲಿದ್ದ ಸಾರ್ವಜನಿಕರು ಮಾಹಿತಿ ನೀಡದೆ ಸಮೀಕ್ಷೆದಾರರನ್ನು ವಾಪಸು ಕಳಿಸಿದ ಘಟನೆಗಳೂ ನಡೆದವು. ಮಧ್ಯಾಹ್ನದ ಬಳಿಕ ಹಲವು ಸಮೀಕ್ಷೆದಾರರು ಸಮೀಕ್ಷೆ ನಡೆಸಲು ಆಗಲಿಲ್ಲ. ಕೆಲವರು ಶುಕ್ರವಾರದ ನಂತರ ಬನ್ನಿ ಎಂದೂ ಹೇಳಿ ಕಳಿಸಿದ್ದಾರೆ.

‘ಸಾರ್ವಜನಿಕರ ಮನೆಯಲ್ಲಷ್ಟೇ ಅಲ್ಲ, ನಮ್ಮ ಮನೆಯಲ್ಲೂ ಹಬ್ಬವಿದೆ. ಆದರೆ ನಾವು ಹಬ್ಬ ಆಚರಿಸದೆ ಸಮೀಕ್ಷೆ ನಡೆಸಲು ಹೋದರೆ ಸಾಧ್ಯವಾಗುತ್ತಿಲ್ಲ. ಪ್ರತಿ ದಿನ ಕನಿಷ್ಠ 20ರಿಂದ 30 ಮನೆಗಳ ಸಮೀಕ್ಷೆ ಆಗಲೇಬೇಕೆಂದು ಗುರಿ ನೀಡಿದ್ದಾರೆ. ನಮಗೆ ರಜೆಯೂ ಇಲ್ಲ. ಸಮೀಕ್ಷೆಯೂ ಸಾಧ್ಯವಾಗುತ್ತಿಲ್ಲ. ಏನು ಮಾಡಬೇಕೆಂದೇ ತೋಚುತ್ತಿಲ್ಲ’ ಎಂದು ಸಮೀಕ್ಷೆದಾರರೊಬ್ಬರು ’ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು. 

ಗಡುವು ವಿಸ್ತರಿಸಿ: ‘ಹಬ್ಬ ಆಚರಿಸುತ್ತಿರುವವರ ಮನೆಗೆ ಹೋಗಿ ಮಾಹಿತಿ ಕೇಳಬೇಕಾಗಿದೆ. ಹಬ್ಬದ ಸಂಭ್ರಮದಲ್ಲಿರುವವರಿಗೆ ನಾವು ಅನಪೇಕ್ಷಿತ ವ್ಯಕ್ತಿಗಳು. ಇಂಥ ಸನ್ನಿವೇಶದಲ್ಲಿ, ಹಬ್ಬ ಬಿಟ್ಟು ಅವರು ನಮಗೆ ಮಾಹಿತಿ ನೀಡುತ್ತಾರೆಯೇ? ಹೀಗಾಗಿ ಹಬ್ಬಕ್ಕೆ ನಮಗೂ ರಜೆ ಕೊಟ್ಟು, ಸಮೀಕ್ಷೆ ಮುಗಿಸಬೇಕಾದ ಗಡುವನ್ನು ಎರಡು ದಿನ ಮುಂಡೂಡಲಿ’ ಎಂದು ನಗರದ ಕುವೆಂಪು ನಗರದ ಸಮೀಕ್ಷೆದಾರರೊಬ್ಬರು ಪ್ರತಿಪಾದಿಸಿದರು.    

ಮಾಹಿತಿ ನೀಡಲು ನಿರಾಕರಿಸಿದರೆ ಏನು ಮಾಡಬೇಕು?

ಮೈಸೂರು: ‘ಸಮೀಕ್ಷೆಗೆ ಅಗತ್ಯವಿರುವ ಮಾಹಿತಿಯನ್ನು ನೀಡಲು ನಿರಾಕರಿಸುವ ಕುಟುಂಬದ ಮಾಹಿತಿಯನ್ನು ದಾಖಲಿಸುವ ಅವಕಾಶ ಆ್ಯಪ್‌ನಲ್ಲಿಲ್ಲ. ಮಾಹಿತಿ ನೀಡಲು ನಿರಾಕರಿಸಿದರೆ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ’ ಎನ್ನುತ್ತಾರೆ ಸಮೀಕ್ಷೆದಾರರು. 

ನೆಟ್‌ವರ್ಕ್‌ ಸಮಸ್ಯೆ: ಸಮೀಕ್ಷೆಗೆ ಗ್ರಾಮಸ್ಥರ ತಕರಾರು

ಕವಿತಾಳ (ರಾಯಚೂರು ಜಿಲ್ಲೆ): ಗ್ರಾಮದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇಲ್ಲ ಎಂದು ಬೇಸತ್ತು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಹಿಷ್ಕರಿಸಲು ಮುಂದಾಗಿದ್ದ ಮಸ್ಕಿ ತಾಲ್ಲೂಕಿನ ಯತಗಲ್‌ ಗ್ರಾಮಸ್ಥರು, ಅಧಿಕಾರಿಗಳ ಭರವಸೆ ಬಳಿಕ ಸಮೀಕ್ಷೆಗೆ ಸ್ಪಂದಿಸಲು ಒಪ್ಪಿದ್ದಾರೆ. 

ಗ್ರಾಮಕ್ಕೆ ಬಂದಿದ್ದ ಸಮೀಕ್ಷೆದಾರರಿಗೆ, ‘ಮೊದಲು ಮೊಬೈಲ್ ನೆಟ್‌ವರ್ಕ್‌ ಸಮಸ್ಯೆ ಸರಿಪಡಿಸಿ, ನಂತರ ಸಮೀಕ್ಷೆ ಮಾಡಿ’ ಎಂದು ಆಗ್ರಹಿಸಿ ವಾಪಸ್ ಕಳುಹಿಸಿದ್ದರು.

ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ್ದ ಮಸ್ಕಿ ತಹಶೀಲ್ದಾರ್ ಮಂಜುನಾಥ ಭೋಗಾವತಿ, ‘ನೆಟ್‌ವರ್ಕ್‌ ಸಿಗುವೆಡೆ ತಾತ್ಕಾಲಿಕ ಕ್ಯಾಂಪ್‌ ನಿರ್ಮಿಸಿ ಸಮೀಕ್ಷೆ ನಡೆಸುತ್ತೇವೆ. ವಾರದಲ್ಲಿ ನೆಟ್‌ವರ್ಕ್‌ ಸಮಸ್ಯೆ ಸರಿಪಡಿಸಲಾಗುವುದು’ ಎಂದು ಗ್ರಾಮಸ್ಥರ ಮನವೊಲಿಸಿದರು.

‘ಗ್ರಾಮದಲ್ಲಿ 250 ಮನೆಗಳಿವೆ. ಗ್ರಾಮದ ಸುತ್ತಮುತ್ತ ಗುಡ್ಡಗಳಿವೆ. ಮೊಬೈಲ್‌ ನೆಟ್‌ವರ್ಕ್‌ ಸಿಗುವುದಿಲ್ಲ. ಕರೆ ಮಾಡಲು ಮತ್ತು ಸ್ವೀಕರಿಸಲು ಗ್ರಾಮದ ಸರ್ಕಾರಿ ಶಾಲೆ ಅಥವಾ ಪಾರ್ವತಿ ದೇವಿ ದೇವಸ್ಥಾನದ ಹತ್ತಿರ ತೆರಳಬೇಕಾಗುತ್ತಿದೆ’ ಎನ್ನುವುದು ಗ್ರಾಮಸ್ಥರ ಅಳಲು.

‘ಶಾಲಾ ಕಾಂಪೌಂಡ್‌ ಮೇಲೆ ನಿಂತರೆ ಅಲ್ಪಸ್ವಲ್ಪ ನೆಟ್‌ವರ್ಕ್‌ ಸಿಗುತ್ತದೆ. ಕುಟುಂಬದ ಸದಸ್ಯರನ್ನು ಶಾಲೆಯ ಹತ್ತಿರ ಕರೆದು ಮಾಹಿತಿ ಪಡೆಯಬೇಕು. ಸಮೀಕ್ಷಕರು ಸ್ವೀಕೃತಿ ಅರ್ಜಿ ಅಪ್ಲೋಡ್‌ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗ್ರಾಮದಲ್ಲಿ ಈವರೆಗೆ ಒಂದೇ ಒಂದು ಕುಟುಂಬದ ಸಮೀಕ್ಷೆಯೂ ಸಾಧ್ಯವಾಗಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ನೆಟ್‌ವರ್ಕ್‌ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಗಮನಹರಿಸುತ್ತಿಲ್ಲ. ಹೀಗಾಗಿ, ಸಮೀಕ್ಷೆ ನಡೆಸುವುದು ಬೇಡ’ ಎಂದು ವಾಪಸು ಕಳುಹಿಸಿದ್ದೆವು’ ಎಂದು ಗ್ರಾಮದ ಮುದಿಯಣ್ಣ ಪಾಟೀಲ, ಯಮನೂರು ನಾಯಕ, ಅಮರೇಗೌಡ, ಹುಚ್ಚರೆಡ್ಡಿ, ರಾಜಕುಮಾರ, ಶಿವಯ್ಯಸ್ವಾಮಿ, ರಡ್ಡೆಪ್ಪ, ಬಸವ ಮತ್ತು ರಮೇಶ ತಿಳಿಸಿದರು.

© 2025 All Rights Reserved by The Printers (Mysore) Private Limited. Powered by Summit

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.