
ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಸ್ವಚ್ಛ ಸರ್ವೇಕ್ಷಣ ಅಂಗವಾಗಿ ಕೆ.ಆರ್. ಆಸ್ಪತೆಯ ತಡೆ ಗೋಡೆಯ ಮೇಲೆ ಚಿತ್ರ ಬಿಡುಸುತ್ತಿರುವ ಕಲಾವಿದ ಸೈಯದ್ ಮತ್ತು ತಂಡ.
ಪ್ರಜಾವಾಣಿ ಚಿತ್ರ/ಅನೂಪ್ ರಾಘ .ಟಿ
ಮೈಸೂರು: ನಗರದ ಗೋಡೆಗಳು ಬಣ್ಣ, ಬಣ್ಣದ ಚಿತ್ರಗಳಿಂದ ಕಂಗೊಳಿಸುತ್ತಿವೆ.
ಸ್ವಚ್ಛ ಭಾರತ ಅಭಿಯಾನದ ₹32 ಲಕ್ಷ ಅನುದಾನದಲ್ಲಿ ನಗರದ ಸೌಂದರೀಕರಣದ ಭಾಗವಾಗಿ ಪ್ರಮುಖ ಸ್ಥಳದ ಗೋಡೆಗಳಲ್ಲಿ ವರ್ಣರಂಜಿತ ಚಿತ್ರ ಬಿಡಿಸಲಾಗುತ್ತಿದೆ. ಕಾವಾದ ಕಲಾವಿದರು ಸೃಷ್ಟಿಸುತ್ತಿರುವ ಚಿತ್ರಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಹಾನಗರ ಪಾಲಿಕೆಯಿಂದ ಮಾಡಲಾಗುತ್ತಿದೆ.
ಗೋಡೆಗಳ ಮೇಲೆ ವಿಷಯಾಧಾರಿತ ಸೌಂದರ್ಯೀಕರಣ ಕೆಲಸ, ಸ್ವಚ್ಛತಾ ಸಂದೇಶ, ಪರಿಸರ ಜಾಗೃತಿ ದೃಶ್ಯಗಳನ್ನು ಚಿತ್ರಿಸಲಾಗುತ್ತಿದೆ. ಪ್ರತಿ ವಲಯ ಕಚೇರಿಯ ವ್ಯಾಪ್ತಿಯಲ್ಲಿ 3 ಸಾವಿರ ಚದರ ಅಡಿಗಳಲ್ಲಿ ವರ್ಣಚಿತ್ರ ಬಿಡಿಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 27 ಸಾವಿರ ಚದರ ಅಡಿ ಜಾಗಗಳಲ್ಲಿ ಚಿತ್ರಗಳು ರೂಪ ಪಡೆಯಲಿವೆ.
ಸ್ವಚ್ಛತೆಗಾಗಿ ಗಾಂಧಿ ನಡೆದ ಹಾದಿ ಪಾಲಿಸುತ್ತಿರುವ ಜನರ ಚಿತ್ರವು ಜನರಲ್ಲಿ ಜಾಗೃತಿ ಭಾವ ಮೂಡಿಸುತ್ತಿದೆ. ಕ್ರೀಡಾ ಚಟುವಟಿಕೆ ಪ್ರತಿನಿಧಿಸುವ ಚಿತ್ರಗಳೂ ಗಮನಸೆಳೆಯುತ್ತಿವೆ. ಮರ ಬೆಳೆಸಿದರೆ ನೀರು ಇಂಗುತ್ತದೆ ಎಂಬುದನ್ನು ತಿಳಿಸುವ ಚಿತ್ರ ಮನೋಜ್ಞವಾಗಿದೆ. ಸಾರ್ವಜನಿಕ ಮೈದಾನ, ಆಸ್ಪತ್ರೆ ಹಾಗೂ ಜನ ಸಂಚಾರ ಹೆಚ್ಚಿರುವ ರಸ್ತೆ ಬದಿಯ ಗೋಡೆಗಳಲ್ಲಿ ಚಿತ್ರಗಳನ್ನು ಬಿಡಿಸಲಾಗುತ್ತಿದ್ದು, ಜನರಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಮನವರಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ.
‘ಸ್ವಚ್ಛ ಮೈಸೂರು– ಸಮರ್ಥ ಮೈಸೂರು’, ‘ಕಸವನ್ನು ಸುಡಬೇಡಿ, ಬಿಸಾಡಬೇಡಿ’, ‘ಪರಿಸರ ಉಳಿಸಿದರೆ ಅಂತರ್ಜಲ ಉಳಿಯುವುದು’ ಎಂಬಿತ್ಯಾದಿ ಬರಹಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
‘ಸ್ವಚ್ಛ ಭಾರತ್ ಮಿಷನ್ ಅನುದಾನ ಬಳಸಿ ಸೌಂದರೀಕರಣದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ವಿವಿಧ ಕಡೆಗಳಲ್ಲಿ ಕಲಾವಿದರು ವರ್ಣಚಿತ್ರ ರಚಿಸುತ್ತಿದ್ದಾರೆ’ ಎಂದು ಮೈಸೂರು ವಲಯ ಕಚೇರಿಯ ಮುಖ್ಯ ಎಂಜಿನಿಯರ್ ಮೃತ್ಯುಂಜಯ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.