
ಮೈಸೂರು: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು), ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ದಲಿತ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ನಗರದ ಮುಖ್ಯ ರಸ್ತೆಯಲ್ಲಿ ನೂರಾರು ಕಾರ್ಮಿಕರು ಗುರುವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು. ‘ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆ ರದ್ದುಗೊಳಿಸಬೇಕು’ ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಬಹಿರಂಗ ಸಭೆಯಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಶೇಷಾದ್ರಿ, ‘ದೇಶದಾದ್ಯಂತ ಮುಷ್ಕರ ಯಶಸ್ವಿಯಾಗಿದೆ. ಹಲವು ರಾಜ್ಯಗಳಲ್ಲಿ ಮುಷ್ಕರ ಬಂದ್ ಹರತಾಳದ ಸ್ವರೂಪ ಪಡೆದಿದೆ. ದುಡಿಯುವ ಜನರು ಕೇಂದ್ರ ಸರ್ಕಾರದ ನೀತಿಗಳನ್ನು ಒಪ್ಪಿಕೊಂಡಿಲ್ಲ. ಕೇಂದ್ರ ಸರ್ಕಾರ ಜನರ ಬಹುಮತ ದುರುಪಯೋಗ ಪಡಿಸಿಕೊಂಡು ಕಾರ್ಮಿಕ ಸಂಹಿತೆ ಜಾರಿಗೆ ತಂದಿದೆ. ಮುಷ್ಕರ ಎನ್ನುವುದು ಕಾರ್ಮಿಕರಿಗಿರುವ ಆಯುಧ. ಆದರೆ, ಅದನ್ನೇ ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದರು.
‘ಕಾನೂನುಗಳ ತಿದ್ದುಪಡಿ ಸಂವಿಧಾನದ ಹಕ್ಕುಗಳಿಗೆ ವಿರುದ್ಧವಾಗಿದೆ. ಸಂವಿಧಾನ ಹೇಳಿರುವ ಕನಿಷ್ಠ ಕೂಲಿ ಕೊಡದಂತೆ ನೀತಿ ರೂಪಿಸಿದೆ. ದುಡಿಯುವ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ಸರ್ಕಾರ ಕಿತ್ತುಕೊಳ್ಳುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳಶಾಹಿಗಳು ಕಾರ್ಮಿಕರ ಶೋಷಣೆ ಮಾಡಲು ಅವಕಾಶ ಕೊಡುತ್ತಿದೆ. ಇದಕ್ಕೆ ಕಾರ್ಮಿಕರು ಅವಕಾಶ ಕೊಡಬಾರದು’ ಎಂದು ತಿಳಿಸಿದರು.
‘ಕಾರ್ಮಿಕರ ನ್ಯಾಯಾಲಯವನ್ನು ದುರ್ಬಲಗೊಳಿಸಲಾಗಿದೆ. ಗುತ್ತಿಗೆ ಆಧಾರಿತ ನೌಕರರಿಗೆ ಯಾವುದೇ ಸೌಲಭ್ಯ ದೊರೆಯುವುದಿಲ್ಲ. ಅಮೆರಿಕ- ಭಾರತ ವ್ಯಾಪಾರ ಒಪ್ಪಂದ ರೈತರನ್ನು ಸಂಕಷ್ಟಕ್ಕೆ ದೂಡಲಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಲಾಗುತ್ತಿದೆ. ಬಡವರು, ಕಾರ್ಮಿಕರು ತಮಗೆ ವಿರೋಧಿಯಾಗಿರುವ ನೀತಿಗಳನ್ನು ಹಿಮ್ಮೆಟ್ಟಿಸಬೇಕು’ ಎಂದರು.
ರೈತ ಸಂಘದ ಹೊಸಕೋಟೆ ಬಸವರಾಜು ಮಾತನಾಡಿ, ‘ಎಲ್ಲಾ ರಾಜಕೀಯ ಪಕ್ಷಗಳು ಕಾರ್ಮಿಕರು, ರೈತರನ್ನು ಮತದಾರರನ್ನಾಗಿ ನೋಡುತ್ತವೆ. ಅಧಿಕಾರಕ್ಕೆ ಬಂದ ನಂತರ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತವೆ. 874 ದಿನಗಳ ರೈತರ ಹೋರಾಟಕ್ಕೆ ಮಣಿದ ಪ್ರಧಾನಿ ಮೋದಿ ಸರ್ಕಾರ ಲಿಖಿತ ಭರವಸೆ ನೀಡಿದರೂ ರೈತರ ಬೇಡಿಕೆ ಈಡೇರಿಸಿಲ್ಲ. ರಾಜ್ಯ ಸರ್ಕಾರ ಭೂ ಸುಧಾರಣೆ ಮತ್ತು ಎಪಿಎಂಸಿ ವಾಪಸ್ ಪಡೆದಿಲ್ಲ. ಮನರೇಗಾ ಮರಳಿ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.
ಲೇಖಕ ನಾ.ದಿವಾಕರ, ಎಐಟಿಯುಸಿಯ ಜಗನ್ನಾಥ್, ಸಿಐಟಿಯುನ ಅಣ್ಣಪ್ಪ ಬಸವಯ್ಯ, ಎಐಯುಟಿಯುಸಿ ಚಂದ್ರಶೇಖರ ಮೇಟಿ, ಯಶೋಧರ, ಎಐಸಿಸಿಟಿಯು ಆನಂದ, ದಸಂಸದ ಬೆಟ್ಟಯ್ಯಕೋಟೆ, ಶಂಭುಲಿಂಗ ಸ್ವಾಮಿ, ಚೋರನಹಳ್ಳಿ ಶಿವಣ್ಣ, ರೈತ ಸಂಘದ ಪಿ.ಮರಂಕಯ್ಯ, ಎಕೆಕೆಎಂಸ್ ಬಸವರಾಜು, ಮಹದೇವಮ್ಮ, ಬಿ.ರವಿ, ಟಿ.ಆರ್. ಸುನೀಲ್, ದೇವದಾಸ್ ಭಾಗವಹಿಸಿದ್ದರು.
ನೂರಾರು ಕಾರ್ಮಿಕರು ಭಾಗಿ ವಿವಿಧ ಸಂಘಟನೆಗಳ ಸಹಭಾಗಿತ್ವ ಕೇಂದ್ರದ ನೀತಿಗೆ ಖಂಡನೆ
ಪ್ರತಿಭಟನಾ ಮೆರವಣಿಗೆ: ಹಕ್ಕೊತ್ತಾಯ
ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾರ್ಮಿಕರು ಓಲ್ಡ್ ಬ್ಯಾಂಕ್ ರಸ್ತೆ ಮಾರ್ಗವಾಗಿ ಸಾಗಿ ನ್ಯೂ ಸಯ್ಯಾಜಿರಾವ್ ರಸ್ತೆ ಇರ್ವಿನ್ ರಸ್ತೆ ಅಶೋಕ ರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದಾರಿಯುದ್ದಕ್ಕೂ ಕೆಂಪು ಬಾವುಟಗಳು ರಾರಾಜಿಸಿದವು. ಕಾರ್ಮಿಕರ ಆಕ್ರೋಶದ ನುಡಿ ಪ್ರತಿಧ್ವನಿಸಿತು. ‘ನಾಲ್ಕು ಕಾರ್ಮಿಕ ಕಾಯ್ದೆ ರದ್ದುಗೊಳಿಸಬೇಕು. ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ ವಿಜಿ ರಾಮ್ ಜಿ ಕಾಯ್ದೆ ರದ್ದುಗೊಳಿಸಬೇಕು. ಭೂ ಸ್ವಾಧೀನ ಕಾಯ್ದೆ ಹಿಂಪಡೆಯಬೇಕು. ರಾಜ್ಯ ಸರ್ಕಾರ ಭೂ ಸುಧಾರಣೆ ಎಪಿಎಂಸಿ ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ವಿದ್ಯುಚ್ಛಕ್ತಿ ಖಾಸಗೀಕರಣ ಮಾಡಬಾರದು. ಬೀಜ ಮಸೂದೆ ಕಾಯ್ದೆ ಹಿಂಪಡೆಯಬೇಕು. ವಿಮಾ ತಿದ್ದುಪಡಿ ಕಾಯ್ದೆ ಶಾಂತಿ ಕಾಯ್ದೆ ರದ್ದುಗೊಳಿಸಬೇಕು’ ಎಂದು ಹಕ್ಕೊತ್ತಾಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.