ADVERTISEMENT

ನಂಜನಗೂಡು: ‘ಶ್ರೀಕಂಠೇಶ್ವರ ದೇವಾಲಯದಲ್ಲಿ ಭ್ರಷ್ಟಾಚಾರ’

ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ ಕಿಡಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:46 IST
Last Updated 22 ನವೆಂಬರ್ 2025, 4:46 IST
ನಂಜನಗೂಡಿನ  ತಾ.ಪಂ.ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರಾದ ದರ್ಶನ್ ಧ್ರುವನಾರಾಯಣ ಹಾಗೂ ಯತೀಂದ್ರ ಸಿದ್ದರಾಮಯ್ಯ ಭಾಗವಹಿಸಿದ್ದರು
ನಂಜನಗೂಡಿನ  ತಾ.ಪಂ.ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರಾದ ದರ್ಶನ್ ಧ್ರುವನಾರಾಯಣ ಹಾಗೂ ಯತೀಂದ್ರ ಸಿದ್ದರಾಮಯ್ಯ ಭಾಗವಹಿಸಿದ್ದರು   

ನಂಜನಗೂಡು: ನಗರದ ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಮಳಿಗೆಗಳನ್ನು ಬಾಡಿಗೆಗೆ ಪಡೆದ ವ್ಯಾಪಾರಿಗಳು ತಮ್ಮ ವ್ಯಾಪ್ತಿ ಮೀರಿ ಮಳಿಗೆಯ ಹೊರಗೆ ವಸ್ತುಗಳನ್ನು ಇಟ್ಟುಕೊಂಡು ಭಕ್ತರ ಓಡಾಟಕ್ಕೆ ತೊಂದರೆ ಕೊಡುತ್ತಿದ್ದಾರೆ, ದೇವಾಲಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳಿವೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ದೇವಾಲಯದ ಇಒ ಜಗದೀಶ್ ಕುಮಾರ್ ಅವರನ್ನು ತರಾಟೆ ತೆಗೆದುಕೊಂಡರು.

ನಗರದ ತಾ.ಪಂ.ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಬಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿಬಾರಿ ಸಭೆಯಲ್ಲಿ ನಿಮಗೆ ಒಳ್ಳೆ ಮಾತಲ್ಲಿ ಹೇಳಿ ಸಾಕಾಗಿದೆ, ನಿಮಗೆ ಯಾವ ಭಾಷೆಯಲ್ಲಿ ಹೇಳಬೇಕು, ನಿಮಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಹೇಳಿ ವ್ಯವಸ್ಥೆ ಮಾಡೋಣ ಎಂದು ಹರಿಹಾಯ್ದ ಶಾಸಕ ದೇವಾಲಯದ ಇಒಗೆ ವ್ಯವಸ್ಥೆ ಸರಿಪಡಿಸುವಂತೆ ಎಚ್ಚರಿಕೆ ನೀಡಿದರು.

ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ದೇವಾಲಯದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಭಕ್ತರು ಎಕ್ಸ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಇದರಿಂದ ಜಿಲ್ಲೆಗೆ, ನಮಗೆ ಅವಮಾನ, ಪಾರ್ಕಿಂಗ್ ವ್ಯವಸ್ಥೆ, ನದಿಯ ಬಳಿ ರಕ್ಷಣೆಗೆ ಸಿಬ್ಬಂದಿಯನ್ನು ನೇಮಿಸಿ, ಅಕ್ರಮವನ್ನು ತಡೆಗಟ್ಟಿ ಎಂದು ಹರಿಹಾಯ್ದರು.

ADVERTISEMENT

ಶ್ರೀಕಂಠೇಶ್ವರ ದೇವಾಲಯದ ವಿಐಪಿ ವಸತಿಗೃಹ ದುರಸ್ತಿ ನಡೆಸಲಾಗಿದೆ. ಪಿಠೋಪಕರಣಗಳ ವ್ಯವಸ್ಥೆ ಮಾಡಿ, ದೇವಾಲಯದ ಬಳಿ ಗೋಶಾಲೆ ನಿರ್ಮಿಸಬೇಕು. ತಾಲ್ಲೂಕಿನ ಕಂತೆ ಮಹದೇಶ್ವರ ಬೆಟ್ಟಕ್ಕೆ ರಸ್ತೆ ನಿರ್ಮಿಸಲು ಮರಗಳನ್ನು ತೆರವುಗೊಳಿಸಿ ಬೆಟ್ಟದ 1.7 ಗುಂಟೆ ಜಾಗದಲ್ಲಿ ಭಕ್ತರ ಅನುಕೂಲಕ್ಕಾಗಿ ಕಟ್ಟಡ ನಿರ್ಮಿಸಲು ಕ್ರಮವಹಿಸಬೇಕು ಎಂದು ದರ್ಶನ್ ತಾಕೀತು ಮಾಡಿದರು.

ನಗರದ ನ್ಯಾಯಬೆಲೆ ಅಂಗಡಿಗಳಲ್ಲಿ ಜನರಿಗೆ ಸರಿಯಾಗಿ ಪಡಿತರ ವಿತರಣೆ ಮಾಡದಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿವೆ, ಪಡಿತರ ಅಕ್ಕಿ ಕಳ್ಳಸಾಗಣೆದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ದರ್ಶನ್ ಧ್ರುವನಾರಾಯಣ ಆಹಾರ ಇಲಾಖೆ ಶಿರಸ್ತೇದಾರ್ ಅವರಿಗೆ ಸೂಚನೆ ನೀಡಿದರು.

ಯತೀಂದ್ರ ಸಿದ್ದರಾಮಯ್ಯ, ತಾಲ್ಲೂಕಿನಲ್ಲಿ ಮಳೆ ಹಾನಿಗೊಳಗಾದ 52 ಮನೆಗಳಿಗೆ ವಿಳಂಬ ಮಾಡದೆ ಪರಿಹಾರ ನೀಡಿ. ಶೇ 60ಕ್ಕಿಂತ ಮನೆ ಹಾನಿಯಾಗಿದ್ದರೆ ಗರಿಷ್ಠ ಪರಿಹಾರ ನೀಡಿ. ಮನೆ ಕಳೆದುಕೊಂಡವಿರಿಗೆ ನೆರವಾಗಿ, ತಾಲ್ಲೂಕಿನ ವರುಣ ಕ್ಷೇತ್ರದ ಭಾಗದ 14 ಗ್ರಾಮಗಳಲ್ಲಿ ಸ್ಮಶಾನವಿಲ್ಲ, ಪ್ರತಿ ಗ್ರಾಮಗಳಲ್ಲಿ ಸ್ಮಶಾನದ ವ್ಯವಸ್ಥೆ ಇರಬೇಕು. ಸ್ಮಶಾನವಿಲ್ಲದ ಕಡೆ ಜಾಗ ಗುರುತಿಸಿ, ಕೆರೆ ಹಾಗೂ ಸ್ಮಶಾನ ಒತ್ತುವರಿಯನ್ನು ಕಾಲಮಿತಿಯಲ್ಲಿ ತೆರವುಗೊಳಿಸಿ ಎಂದು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

ಜಾನುವಾರು ಮಾರುಕಟ್ಟೆಗೆ ಭೇಟಿ ನೀಡಿದ್ದೆ, ಅನುದಾನವನ್ನು ಒದಗಿಸಿದ್ದರೂ ಸೌಲಭ್ಯ ಕಲ್ಪಿಸಿಲ್ಲ, 20 ದಿನದ ಒಳಗಾಗಿ ರೈತರಿಗೆ ಅನುಕೂಲವಾಗುವ ಹಾಗೆ ಸಜ್ಜುಗೊಳಿಸಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಎಪಿಎಂಸಿ ಕಾರ್ಯದರ್ಶಿಗೆ ಶಾಸಕರು ಸೂಚನೆ ನೀಡಿದರು.

ಸಭೆಯಲ್ಲಿ ತಾ.ಪಂ. ಇಒ ಜೆರಾಲ್ಡ್ ರಾಜೇಶ್,ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ,ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್,ಟಿಎಪಿಸಿಎಂ ಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್,ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಚೆನ್ನಪ್ಪ, ಬಿಇಒ ಮಹೇಶ್,ಸಿಪಿಐ ಆನಂದ್ ಉಪಸ್ಥಿತರಿದ್ದರು.

ಹೆಸರಿಗೆ ಮಾತ್ರ ನೀರಿನ ಘಟಕ

ನಂಜನಗೂಡು ತಾಲ್ಲೂಕಿನ ರಾಜೂರಿನಲ್ಲಿ 2 ವರ್ಷಗಳ ಹಿಂದೆ ಶುದ್ಧ ನೀರಿನ ಘಟಕವನ್ನು ನೀರಿನ ಅನುಕೂಲವಿಲ್ಲದ ಕಡೆ ಸ್ಥಾಪಿಸಿ ಕುಡಿಯವ ನೀರಿನ ವ್ಯವಸ್ಥೆ ಮಾಡದೆ ದಾಖಲೆಯಲ್ಲಿ ನೀರಿನ ಘಟಕ ಸ್ಥಾಪಿಸಿರುವಂತೆ ವರದಿ ನೀಡಲಾಗಿದೆ. ತಾಲ್ಲೂಕಿನ 70 ಶುದ್ಧ ನೀರಿನ ಘಟಕಗಳಲ್ಲಿ 25 ಘಟಕಗಳು ಕೆಟ್ಟು ನಿಂತಿವೆ ಜನರ ತೆರಿಗೆ ಹಣವನ್ನು ಹೀಗೆ ವ್ಯರ್ಥಮಾಡದೆ ಗ್ರಾಮಾಂತರ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.