ADVERTISEMENT

ನಂಜನಗೂಡು: ರೈಲ್ವೆ ಮೇಲ್ಸೇತುವೆಯ ನಕ್ಷೆ ಬದಲಿಸದಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:13 IST
Last Updated 25 ಜುಲೈ 2025, 2:13 IST
ನಂಜನಗೂಡಿನ ರಾಷ್ಟ್ರಪತಿ ರಸ್ತೆಯ ರೈಲ್ವೆ ಲೆವಲ್ ಕ್ರಾಸಿಂಗ್ ಬಳಿ ಗುರುವಾರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪೂರ್ವನಿರ್ಧಾರದಂತೆಯೇ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸಿದರು
ನಂಜನಗೂಡಿನ ರಾಷ್ಟ್ರಪತಿ ರಸ್ತೆಯ ರೈಲ್ವೆ ಲೆವಲ್ ಕ್ರಾಸಿಂಗ್ ಬಳಿ ಗುರುವಾರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪೂರ್ವನಿರ್ಧಾರದಂತೆಯೇ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸಿದರು   

ನಂಜನಗೂಡು: ನಗರದ ರಾಷ್ಟ್ರಪತಿ ರಸ್ತೆಯ ರೈಲ್ವೆ ಲೆವಲ್ ಕ್ರಾಸಿಂಗ್ ಬಳಿ ಪೂರ್ವನಿರ್ಧಾರದಂತೆಯೇ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ರೈಲ್ವೆ ಲೆವಲ್ ಕ್ರಾಸಿಂಗ್ ಬಳಿ ಜಮಾಯಿಸಿದ ಕಾರ್ಯಕರ್ತರು, ‘ಕೆಲ ರಾಜಕೀಯ ಮುಖಂಡರ ಆಸ್ತಿ ರಕ್ಷಣೆಗಾಗಿ ನಕ್ಷೆ ಬದಲಿಸುವಂತೆ ಒತ್ತಡ ಹೇರಲಾಗುತ್ತಿದೆ. ಯಾವುದೇ ಕಾರಣಕ್ಕೂ ಬದಲಾವಣೆಗೆ ಆಸ್ಪದ ನೀಡಬಾರದು’ ಎಂದು ಆಗ್ರಹಿಸಿದರು.

ರಾಜ್ಯ ಜನಸಂಗ್ರಾಮ ಪರಿಷತ್ ಗೌರವಾಧ್ಯಕ್ಷ ನಗರ್ಲೆ ವಿಜಯ್ ಕುಮಾರ್ ಮಾತನಾಡಿ, ‘ಕೇಂದ್ರ ಸರ್ಕಾರದ ಸೇತು ಭಾರತ್ ಯೋಜನೆಯಡಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಪ್ಪಿಗೆ ನೀಡಿವೆ. ರೈಲ್ವೆ ಅಧಿಕಾರಿಗಳು ರಸ್ತೆಯ ಇಕ್ಕೆಲಗಳಲ್ಲಿ ಮಾರ್ಕಿಂಗ್ ಸಹ ಮಾಡಿದ್ದಾರೆ. ನಗರಸಭೆಯೂ ಸರ್ವಾನುಮತದ ನಿರ್ಣಯ ಕೈಗೊಂಡು ಒಪ್ಪಿಗೆ ಸೂಚಿಸಿದೆ. ಆದರೆ, ಸ್ಥಳೀಯ ರಾಜಕೀಯ ಮುಖಂಡರೊಬ್ಬರು ತನ್ನ ವಾಣಿಜ್ಯ ಕಟ್ಟಡದ ಸ್ವಲ್ಪ ಭಾಗ ಕೆಡವಬೇಕಾಗುತ್ತದೆ ಎಂಬ ಕಾರಣದಿಂದ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ನಕ್ಷೆಗೆ ಜನರ ವಿರೋಧವಿದೆ ಎಂದು ಸುಳ್ಳು ಹೇಳಿದ್ದಾರೆ’ ಎಂದು ದೂರಿದರು.

ADVERTISEMENT

‘ಮೊದಲಿನ ನಕ್ಷೆಗೆ ಬದಲಾಗಿ ಸರಸ್ವತಿ ಕಾಲೊನಿ, ನಗರ ಪೊಲೀಸ್ ಠಾಣೆ ಬಳಸಿಕೊಂಡು ಮೇಲ್ಸೇತುವೆ ನಿರ್ಮಿಸುವಂತೆ ಒತ್ತಡ ಹೇರುತ್ತಿದ್ದಾರೆ. ತಾನೇ ತಯಾರಿಸಿದ ನಕ್ಷೆ ನೀಡಿ, ರೈಲ್ವೆ ಇಲಾಖೆ ಹಾಗೂ ಸಚಿವರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇದು ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು ಎಂಬ ಗಾದೆ ಮಾತಿನಂ‍ತಾಗುತ್ತದೆ. ಪೂರ್ವ ನಿರ್ಧಾರಿತ ನಕ್ಷೆಯನ್ನು ಬದಲಿಸಲು ಹೊರಟರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಬೊಕ್ಕಳ್ಳಿ ಮಹದೇವಸ್ವಾಮಿ ಮಾತನಾಡಿ, ‘ಈ ಹಿಂದೆ ನಗರಸಭೆ ಬಳಿಯ ರೈಲ್ವೆ ಲೆವಲ್ ಕ್ರಾಸಿಂಗ್ ಬಳಿ ಮೇಲ್ಸೇತುವೆ ನಿರ್ಮಾಣ ಯೋಜನೆಯನ್ನು ಕೆಲವು ಪ್ರಭಾವಿಗಳ ಆಸ್ತಿ ರಕ್ಷಿಸುವ ಸಲುವಾಗಿ ರೈಲ್ವೆ ಕೆಳಸೇತುವೆ ನಿರ್ಮಿಸಿ ಯೋಜನೆಯನ್ನು ಹಳ್ಳಹಿಡಿಸಲಾಗಿತ್ತು, ಮಳೆ ಬಂದರೆ ಕೆಳ ಸೇತುವೆಯಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ತೊಂದರೆಯಾಗಿ ಪರಿತಪಿಸುವಂತಾಗಿದೆ. ಮತ್ತೆ ಅಂತದ್ದೇ ಸಮಸ್ಯೆ ಸೃಷ್ಟಿಯಾಗಬಾರದು’ ಎಂದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಕಾರ್ಯ ಬಸವಣ್ಣ, ಸರ್ವೇಶ್, ಕಾರ್ಯ ನಾಗರಾಜು, ಪರಮೇಶ್, ಬಸವರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.