ನಂಜನಗೂಡಿನ ನಂದಿನಿ ಕನ್ವೆಷನ್ ಹಾಲ್‌ನಲ್ಲಿ ಗುರುವಾರ ನಡೆದ ರೈತ ಕೃಷಿ ಕಾರ್ಮಿಕರ ಅಧ್ಯಯನ ಶಿಬಿರವನ್ನು ಎಸ್‌ಯುಸಿಐ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯ ಕೆ.ರಾಧಾಕೃಷ್ಣ ಉದ್ಘಾಟಿಸಿದರು
ನಂಜನಗೂಡಿನ ನಂದಿನಿ ಕನ್ವೆಷನ್ ಹಾಲ್‌ನಲ್ಲಿ ಗುರುವಾರ ನಡೆದ ರೈತ ಕೃಷಿ ಕಾರ್ಮಿಕರ ಅಧ್ಯಯನ ಶಿಬಿರವನ್ನು ಎಸ್‌ಯುಸಿಐ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯ ಕೆ.ರಾಧಾಕೃಷ್ಣ ಉದ್ಘಾಟಿಸಿದರು
ಪ್ರಜಾವಾಣಿ ವಾರ್ತೆ
ನಂಜನಗೂಡು: ದುಡಿಯುವ ಜನರು, ರೈತರು ಮತ್ತು ಕಾರ್ಮಿಕರು ದೇಶದ ಸಂಪತ್ತಿನ ಸೃಷ್ಟಿಕರ್ತರು. ಅವರ ದುಡಿಮೆಯಿಂದ ಸೃಷ್ಟಿಸಿದ ಸಂಪತ್ತನ್ನು ಕೆಲವೇ ಮಂದಿ ಬಂಡವಾಳಿಗರು ಕಸಿದುಕೊಳ್ಳುತ್ತಿದ್ದಾರೆ. ಅಂತಹ ಶೋಷಣೆಯ ವಿರುದ್ಧ ಕಾರ್ಮಿಕರು ಮತ್ತು ರೈತರು ಒಂದಾಗಿ ಹೋರಾಡಬೇಕು ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪಾಲಿಟ್ಬ್ಯೂರೊ ಸದಸ್ಯ ಕೆ.ರಾಧಾಕೃಷ್ಣ ಹೇಳಿದರು.
ನಗರದ ನಂದಿನಿ ಕನ್ವೆಷನ್ ಹಾಲ್‌ನಲ್ಲಿ ಗುರುವಾರ ರೈತ, ಕೃಷಿ ಕಾರ್ಮಿಕರ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನೇಪಾಳದಲ್ಲಿ ಈಚೆಗೆ ನಡೆದ ಭ್ರಷ್ಟಾಚಾರ ವಿರೋಧಿ ಹೋರಾಟದಂತಹ ಹೋರಾಟಗಳು ನಡೆಯಬೇಕೆಂದು ಜನರು ಬಯಸುತ್ತಿದ್ದಾರೆ. ಹೋರಾಟದಲ್ಲಿ ಯುವಜನರು ಮತ್ತು ವಿದ್ಯಾರ್ಥಿಗಳು ಜೀವಕೊಟ್ಟಿದ್ದಾರೆ. ಸರ್ಕಾರ ಉರುಳಿ ಹೊಸ ಸರ್ಕಾರ ರಚನೆಯಾಗಿದೆ. ಆದರೆ ಸಮಸ್ಯೆಗಳು ಬಗೆಹರಿಯುತ್ತವೆಯೇ ಎನ್ನುವುದು ಇಲ್ಲಿ ಮುಖ್ಯ. ಈ ಯುಗದ ಮಹಾನ್ ಮಾರ್ಕ್ಸ್ ವಾದಿ ಚಿಂತಕ ಶಿವದಾಸ್ ಘೋಷ್ ಬಹಳ ಹಿಂದೆಯೇ ಹೇಳಿದಂತೆ, ಹೋರಾಟಗಳು ಅಲೆಗಳಂತೆ ಒಂದಾದ ಮೇಲೊಂದು ಬರುತ್ತವೆ. ಆದರೆ, ಶೋಷಕ ವ್ಯವಸ್ಥೆಯಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೊಗೆಯದಿದ್ದರೆ ಸಮಸ್ಯೆಗಳು ಬಗೆಹರಿಯುವುದಿಲ್ಲ. ಅದಕ್ಕಾಗಿ ರೈತರು ಹಳ್ಳಿಹಳ್ಳಿಗಳಲ್ಲಿ ಸಂಘಟನೆ ಕಟ್ಟಬೇಕು, ಕಾರ್ಮಿಕರ ನಾಯಕತ್ವದಲ್ಲಿ ರಷ್ಯಾ, ಚೀನಾದಲ್ಲಾದಂತೆ ಸಮಾಜವಾದಿ ಕ್ರಾಂತಿ ನಡೆಯಬೇಕು ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಉಗ್ರನರಸಿಂಹೇಗೌಡ ಮಾತನಾಡಿ, ರೈತರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭವಿಷ್ಯವನ್ನು ರೂಪಿಸುವಂತಹ ಹೋರಾಟ ಕಟ್ಟಲು ಸೇರಿರುವುದು ಸಂತೋಷದ ಸಂಗತಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ, ಶಿಕ್ಷಣ, ಮೂಲಸೌಕರ್ಯಗಳನ್ನು ಮತ್ತು ಕೃಷಿ ಅಭಿವೃದ್ಧಿಯನ್ನು ಖಚಿತಪಡಿಸುವ ಯೋಜನೆಗಳನ್ನು ರೂಪಿಸುತ್ತಿಲ್ಲ, ನಮ್ಮ ಜನರು ಕಟ್ಟುವ ತೆರಿಗೆ ಹಣ ಅದಾನಿ, ಅಂಬಾನಿಗಳಂತಹ ಕಾರ್ಪೊರೆಟ್ ಮನೆತನಗಳಿಗೆ ತೆರಿಗೆ ವಿನಾಯಿತಿಯಲ್ಲಿ ಹರಿದು ಹೋಗುತ್ತಿದೆ. ಬಂಡವಾಳಗಾರರಿಗೆ ಸೇವೆ ಸಲ್ಲಿಸುವ ಕಾಂಗ್ರೆಸ್-ಬಿಜೆಪಿಯಂತಹ ಪಕ್ಷಗಳನ್ನು ನಂಬದೆ ರೈತರು ಗಟ್ಟಿ ಹೋರಾಟವನ್ನು ಕಟ್ಟಬೇಕು ಎಂದು ಹೇಳಿದರು.
ಎಐಕೆಕೆಎಂಎಸ್ ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರದ ಆಮದು ನೀತಿಗಳಿಂದಾಗಿ ವಿದೇಶಗಳಿಂದ ಕೃಷಿ ಉತ್ಪನ್ನಗಳು ಆಮದಾಗಿ, ಭಾರತದ ರೈತರ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಕುಗ್ಗಿ ಬೆಲೆ ಇಳಿಕೆಯಾಗುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂದು ಬಲಿಷ್ಠ ಹೋರಾಟಗಳನ್ನು ಕಟ್ಟುವ ತುರ್ತು ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ರೈತರನ್ನು ಮತ್ತು ಕೃಷಿ ಕಾರ್ಮಿಕರನ್ನು ವೈಚಾರಿಕವಾಗಿ ಸಿದ್ಧಪಡಿಸುವ ಆಶಯದೊಂದಿಗೆ ಈ ಶಿಬಿರ ಸಂಘಟಿಸಲಾಗಿದೆ ಎಂದು ಹೇಳಿದರು.
ಎಐಕೆಕೆಎಂಎಸ್ ರಾಜ್ಯ ಅಧ್ಯಕ್ಷ ಶಶಿಧರ್, ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಎಚ್.ಎಂ.ಬಸವರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.