ADVERTISEMENT

13ರಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜನ್ಮದಿನಾಚರಣೆ, ಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 11:29 IST
Last Updated 10 ಫೆಬ್ರುವರಿ 2020, 11:29 IST

ಮೈಸೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಶತಮಾನೋತ್ಸವ ಭವನದಲ್ಲಿ ಫೆ.13ರಂದು ಬೆಳಿಗ್ಗೆ 11.30ಕ್ಕೆ ‘ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಜನ್ಮದಿನಾಚರಣೆ ಮತ್ತು ರೈತ ವಿರೋಧಿ ಕಾಯ್ದೆಗಳ ವಿರುದ್ಧ ಜಾಗೃತಿ ಸಮಾವೇಶ’ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10 ಗಂಟೆಗೆ ಚನ್ನಪಟ್ಟಣದ ಮಂಗಳಪೇಟೆ ವೃತ್ತದಿಂದ ಮೆರವಣಿಗೆ ನಡೆಸಲಾಗುತ್ತದೆ. ಹೋರಾಟಗಾರ ಸುರೇಶಬಾಬು ಗಜಪತಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಹಿತಿ ದೇವನೂರ ಮಹಾದೇವ, ಸ್ವರಾಜ್ ಇಂಡಿಯಾದ ಅಮ್ಜದ್ ಪಾಷಾ, ದಲಿತ ಸಂಘರ್ಷ ಸಮಿತಿಯ ವಿ.ನಾಗರಾಜು, ರೈತ ಮುಖಂಡ ಮುತ್ತಪ್ಪ ಕೊಮಾರಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬೀಜ ಕಾಯ್ದೆ 2019’ ರೈತ ವಿರೋಧಿ ಹಾಗೂ ಬೀಜ ಕಂಪನಿಗಳ ಪರವಾದ ಕಾಯ್ದೆಯಾಗಿದೆ. ಕಂಪನಿಗಳಿಂದ ಪಡೆದ ಬಿತ್ತನೆ ಬೀಜದಿಂದ ಫಸಲು ಸರಿಯಾಗಿ ಬಾರದೆ ನಷ್ಟ ಉಂಟಾದರೆ, ಬೀಜ ಖರೀದಿ ಬೆಲೆಯನ್ನಷ್ಟೇ ಕಂಪನಿ ಭರಿಸುವ ಅಂಶ ಕಾಯ್ದೆಯಲ್ಲಿದೆ. ಪೇಟೆಂಟ್ ಪಡೆದ ಬೀಜವನ್ನು ಬಿತ್ತನೆ ಮಾಡಿದರೆ ರೈತರಿಗೆ ₹1 ಕೋಟಿ ದಂಡ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಈ ಕಾಯ್ದೆ ಬಗ್ಗೆ ಗಾಯತ್ರಿ ಎಂಬುವರು ವಿಚಾರ ಮಂಡಿಸಲಿದ್ದಾರೆ. ಭೂಮಿ ಗುತ್ತಿಗೆ ಕಾಯ್ದೆ ಕುರಿತು ಡಾ.ಎಚ್.ವಿ.ವಾಸು, ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಸಸಿಕಾಂತ್‌ ಸೆಂಥಿಲ್‌, ನವ ಬೆಂಗಳೂರು ಕುರಿತು ಸು.ತಾ.ರಾಮೇಗೌಡ ವಿಚಾರ ಮಂಡಿಸಲಿದ್ದಾರೆ ಎಂದು ವಿವರಿಸಿದರು.

ADVERTISEMENT

ಎಲ್ಲಾ ಇಲಾಖೆಗಳಿಗೆ ನೀಡುವ ಅನುದಾನವನ್ನು ಬಜೆಟ್‌ನಲ್ಲಿ ಕಡಿತಗೊಳಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಈ ಬಜೆಟ್‌ನಲ್ಲಿ ಕೃಷಿ ಹಾಗೂ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಕೃಷಿ ಪರಿಕರಗಳ ಮೇಲಿನ ಜಿಎಸ್‌ಟಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 177 ಪ್ರಾಥಮಿಕ ಭೂ–ಅಭಿವೃದ್ಧಿ ಬ್ಯಾಂಕ್‌ಗಳಿದ್ದು, ರೈತರಿಗೆ ದೀರ್ಘ, ಮಧ್ಯಮಾವಧಿ ಸಾಲಗಳನ್ನು ನೀಡಿದ್ದು, ಬಡ್ಡಿ ಸೇರಿಸಿ ಒಟ್ಟು ₹1,400 ಕೋಟಿ ಇದೆ. ಬರ, ಪ್ರವಾಹದಿಂದಾಗಿ ರೈತ ಸಾಲ ಮರುಪಾವತಿ ಮಾಡಿಲ್ಲ. ಈ ಸಾಲವನ್ನು ಮನ್ನಾ ಮಾಡಬೇಕು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಾಲಮನ್ನಾ ಘೋಷಣೆ ಮಾಡಿದ್ದು, ಇನ್ನೂ ಅನೇಕ ರೈತರಿಗೆ ಈ ಯೋಜನೆಯ ಲಾಭ ಸಿಕ್ಕಿಲ್ಲ. ದಾಖಲೆಗಳಲ್ಲಿ ನಮೂದಾಗಿರುವ ತಪ್ಪುಗಳಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕೂಡಲೇ, ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ‘ರಾಗಿ ಖರೀದಿ ಕೇಂದ್ರಗಳನ್ನು ಇನ್ನೂ ತೆರೆದಿಲ್ಲ. ಅಧಿಕಾರಿಗಳು ಆರ್‌ಟಿಸಿ ಮತ್ತಿತರ ದಾಖಲೆಗಳನ್ನು ಕೇಳುತ್ತಿದ್ದಾರೆ. ಖರೀದಿ ಕೇಂದ್ರಗಳನ್ನು ತೆರೆಯುವ ವೇಳೆಗೆ ರೈತರು ಬೆಳೆದಿರುವ ಶೇ 80ರಷ್ಟು ಭಾಗ ಮಧ್ಯವರ್ತಿಗಳ ಪಾಲಾಗಲಿದೆ. ನಿಜವಾದ ರೈತರಿಗೆ ಅನುಕೂಲವಾಗುವುದಿಲ್ಲ’ ಎಂದು ಹೇಳಿದರು.

ಸಂಘದ ಎಚ್.ಸಿ.ಲೋಕೇಶ್‌ ರಾಜೇ ಅರಸ್‌, ಸರಗೂರು ನಟರಾಜು ಇದ್ದರು.

ರಾಷ್ಟ್ರೀಯ ಹೆದ್ದಾರಿ 275ಕ್ಕೆ ವಿರೋಧ: 19ರಂದು ಪ್ರತಿಭಟನೆ

ಮೈಸೂರು– ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಇದ್ದರೂ ಮೈಸೂರು– ಮಡಿಕೇರಿವರೆಗೆ ಮತ್ತೊಂದು ಹೆದ್ದಾರಿ ನಿರ್ಮಿಸಲು ಮುಂದಾಗಿರುವುದಕ್ಕೆ ರೈತ ಸಂಘ ವಿರೋಧ ವ್ಯಕ್ತಪಡಿಸುತ್ತದೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

‘ಈ ಹೆದ್ದಾರಿಯಿಂದ ಫಲವತ್ತಾದ ಭೂಮಿ, ತೋಟ ನಾಶವಾಗುತ್ತದೆ. ರೈತರು ಸುಮಾರು 1,000 ಎಕರೆಯನ್ನು ಕಳೆದುಕೊಳ್ಳುತ್ತಾರೆ. ಹತ್ತಾರು ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ. ರಸ್ತೆ ನಿರ್ಮಿಸದಂತೆ ಹೈಕೋರ್ಟ್ ಮೊರೆ ಹೋಗುತ್ತೇವೆ. ಅಲ್ಲದೆ, ಹೆದ್ದಾರಿ ನಿರ್ಮಾಣವನ್ನು ವಿರೋಧಿಸಿ ಫೆ.19ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.