ADVERTISEMENT

ಮೈಸೂರು| ನಾರಾಯಣಗುರು ಸಿದ್ಧಾಂತ ಸಾರ್ವಕಾಲಿಕ: ವಿಖ್ಯಾತಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 7:21 IST
Last Updated 13 ಅಕ್ಟೋಬರ್ 2025, 7:21 IST
<div class="paragraphs"><p>ಮೈಸೂರಿನ ಜೆ.ಕೆ.ಮೈದಾನದ ಸಭಾಂಗಣದಲ್ಲಿ ಭಾನುವಾರ ನಡೆದ ನಾರಾಯಣ ಗುರು ಜಯಂತಿಯನ್ನು&nbsp;ವಿಖ್ಯಾತಾನಂದ ಸ್ವಾಮೀಜಿ ಉದ್ಘಾಟಿಸಿದರು&nbsp; </p></div>

ಮೈಸೂರಿನ ಜೆ.ಕೆ.ಮೈದಾನದ ಸಭಾಂಗಣದಲ್ಲಿ ಭಾನುವಾರ ನಡೆದ ನಾರಾಯಣ ಗುರು ಜಯಂತಿಯನ್ನು ವಿಖ್ಯಾತಾನಂದ ಸ್ವಾಮೀಜಿ ಉದ್ಘಾಟಿಸಿದರು 

   

ಪ್ರಜಾವಾಣಿ ಚಿತ್ರ

ಮೈಸೂರು: ‘ನಾರಾಯಣ ಗುರುಗಳ ಸಿದ್ಧಾಂತ ಸಾರ್ವಕಾಲಿಕ’ ಎಂದು ಸೋಲೂರು ಆರ್ಯ ಈಡಿಗ ಸಂಸ್ಥಾನದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ADVERTISEMENT

ನಗರದ ಜೆ.ಕೆ.ಮೈದಾನದ ಸಭಾಂಗಣದಲ್ಲಿ ನಾರಾಯಣ ಧರ್ಮ ಪರಿಪಾಲನಾ ಯೋಗ ಶಾಖೆ, ಬ್ರಹ್ಮಶ್ರೀ ನಾರಾಯಣ ಗುರು ಮಿಷನ್ ಮತ್ತು ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ನಡೆದ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ನಾರಾಯಣ ಗುರುಗಳ ಆದರ್ಶ, ತತ್ವ– ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವು ಜಾತಿ, ಧರ್ಮ ತಾರತಮ್ಯಗಳ ಭೇದಭಾವ ಮೀರಿದ ಸಾರ್ವತ್ರಿಕ ಮಾನವೀಯ ಮೌಲ್ಯ ಪ್ರತಿಪಾದಿಸುತ್ತವೆ’ ಎಂದು ತಿಳಿಸಿದರು.

ವಿದ್ಯೆಯಿಂದ ಪ್ರಬುದ್ಧರಾಗಿ

‘ಅವರು ಸಾತ್ವಿಕ ಮನೋಭಾವ ಹೊಂದಿ ಮೌನ ಕ್ರಾಂತಿಯ ಹೋರಾಟ ನಡೆಸಿದ್ದರು. ಸಮುದಾಯ ವಿದ್ಯೆಯಿಂದ ಪ್ರಬುದ್ಧರಾಗಿ, ಸಂಘಟನೆಯಿಂದ ಶಕ್ತರಾಗಿ ಎಂಬ ಸಂದೇಶ ಸಾರಿದ್ದರು. ಸಮಾಜದಲ್ಲಿದ್ದ ತಾರತಮ್ಯ ಹೋಗಲಾಡಿಸಿ, ಶೋಷಿತ ವರ್ಗದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜೀವನವನ್ನೇ ಮುಡಿಪಾಗಿಟ್ಟಿದ್ದ ಮಹಾನುಭಾವ’ ಎಂದು ಸ್ಮರಿಸಿದರು.

‘ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಹೆಚ್ಚಿನ ಒತ್ತು ನೀಡಿದರೆ ಸಮುದಾಯದ ಅಭಿವೃದ್ಧಿ ಸಾಧ್ಯ. ಎಲ್ಲಾ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಜೊತೆಗೆ ಸಂಸ್ಕಾರವನ್ನೂ ಕಲಿಸಬೇಕು’ ಎಂದು ಸಲಹೆ ನೀಡಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ‘ನಾರಾಯಣ ಗುರುಗಳು ಅಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಜಾತಿ ಪದ್ಧತಿ ಮತ್ತು ಶೋಷಣೆ ವಿರುದ್ಧ ಹೋರಾಡಿ ಶೋಷಿತ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು’ ಎಂದು ತಿಳಿಸಿದರು.

ಎಸ್‌ಎನ್‌ಡಿಪಿ ಕೊಡಗು ಯೂನಿಯನ್‌ ಅಧ್ಯಕ್ಷ ವಿ.ಕೆ.ಲೋಕೇಶ್‌ ಮಾತನಾಡಿ, ‘ಅಂದಿನ ಕಾಲದಲ್ಲಿದ್ದ ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದ ನಾರಾಯಣ ಗುರುಗಳು, ಅನಕ್ಷರತೆ ಹೋಗಲಾಡಿಸಲು ಶಿಕ್ಷಣಕ್ಕೆ ಒತ್ತು ನೀಡಿ ಸಾಮಾಜಿಕ ಸುಧಾರಣೆಗೆ ನಾಂದಿ ಹಾಡಿದ್ದರು’ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಮಕ್ಕಳಿಗೆ ಹೂವಿನ ರಂಗೋಲಿ, ಚಿತ್ರಕಲಾ ಸ್ಪರ್ಧೆ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ತಿರುವಾತಿರ ನೃತ್ಯ, ಜಾನು ಕಲಾತಂಡದಿಂದ ಹಾಸ್ಯ ಕಾರ್ಯಕ್ರಮ ನಡೆಯಿತು.

ನಾರಾಯಣ ಧರ್ಮ ಪರಿಪಾಲನಾ ಯೋಗ ಶಾಖೆ ಅಧ್ಯಕ್ಷ ಜಿ.ರಾಜೇದ್ರನ್, ಬ್ರಹ್ಮಶ್ರೀ ನಾರಾಯಣಗುರು ಮಿಷನ್ ಅಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುಕುಮಾರನ್, ಮನೋಜ್‌ಕುಮಾರ್, ಸಂತೋಷ್‌ರಾಮ್, ವಿದ್ಯಾಸಾಗರ ಕದಂಬ, ಬಿ.ವಿ.ವೆಂಕಪ್ಪ, ಪ್ರೇಮಾನಂದ್, ರಾಘವನ್, ಸತ್ಯನ್, ಆನಂದ್, ಸೂರ್ಯನಾರಾಯಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.