ತಲಕಾಡು: ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಾದ ಕಾವೇರಿ ನಿಸರ್ಗಧಾಮ ಹಾಗೂ ಪಂಚಲಿಂಗ ದೇವಾಲಯಗಳಿಗೆ ತೆರಳುವ ರಸ್ತೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ರಸ್ತೆ ಇಕ್ಕೆಲಗಳಲ್ಲಿನ ಅಂಗಡಿ ಮುಂಗಟ್ಟುಗಳಿಗೆ ಸುರಕ್ಷಿತ ಸ್ಥಳವಿಲ್ಲವಾಗಿದೆ. ವರ್ಷಾಂತ್ಯವಾಗಿರುವುದರಿಂದ ಭೇಟಿ ನೀಡುತ್ತಿರುವ ಪ್ರವಾಸಿಗರೂ ವಾಹನ ನಿಲುಗಡೆಗೆ ಸೂಕ್ತ ಜಾಗವಿಲ್ಲದೆ ಪರದಾಡುತ್ತಿದ್ದಾರೆ.
ವೈದ್ಯನಾಥೇಶ್ವರ, ಮಲ್ಲಿಕಾರ್ಜುನ ಸ್ವಾಮಿ, ಪಾತಾಳೇಶ್ವರ, ಮುರುಡೇಶ್ವರ, ಅರ್ಕೇಶ್ವರ ನಾರಾಯಣಸ್ವಾಮಿ ಮತ್ತು ಚೌಡೇಶ್ವರಿ ದೇವಿಯ ದರ್ಶನಕ್ಕೆ ರಾಜ್ಯದ ನಾನಾ ಭಾಗಗಳಿಂದ ಜನರು ಆಗಮಿಸುತ್ತಾರೆ. ಅಲ್ಲದೇ ಕಾವೇರಿ ನದಿಯ ನಿಸರ್ಗಧಾಮವೂ ಪ್ರಕೃತಿ ಪ್ರಿಯರನ್ನು ಬರಮಾಡಿಕೊಳ್ಳುತ್ತದೆ. ಈ ಪ್ರವಾಸಿಗರನ್ನು ನಂಬಿ ಅನೇಕ ಕುಟುಂಬಗಳೂ ಜೀವನ ನಡೆಸುತ್ತಿವೆ.
ಕಳೆದ ಒಂದು ತಿಂಗಳಿನಿಂದ ಲೋಕೋಪಯೋಗಿ ಇಲಾಖೆಯು ಕೆಆರ್‌ಡಿಸಿಎಲ್ ಸೇತುವೆ ನಿರ್ಮಾಣ ಅಭಿವೃದ್ಧಿ ಕಾಮಗಾರಿ ಹಾಗೂ ಅದಕ್ಕೆ ಪೂರಕವಾದ ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿಗೆ ಚುರುಕು ನೀಡಿದ್ದು, ಹಲವು ಮರಗಳನ್ನು ತೆರವು ಮಾಡಲಾಗಿದೆ. ವಾಹನಗಳು ರಸ್ತೆ ಬದಿಯಲ್ಲಿಯೇ ಸಾಲುಗಟ್ಟಿ ನಿಲ್ಲುತ್ತಿವೆ.
ಮುಖ್ಯ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದಂಥ ಪರಿಸ್ಥಿತಿ ಇದ್ದು ಪರ್ಯಾಯವಾಗಿ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ಈ ರಸ್ತೆಯ ಅಕ್ಕಪಕ್ಕದಲ್ಲಿ ಹಳ್ಳ ಮತ್ತು ರೈತರ ಜಮೀನುಗಳಿದ್ದು, ವಾಹನ ಚಲಿಸಲು ಕಿರಿದಾಗಿದೆ. ಇದರಿಂದ ಪ್ರವಾಸಿ ವಾಹನಗಳಿಗೂ, ಸ್ಥಳೀಯ ನಿವಾಸಿಗಳಿಗೂ ತೊಂದರೆಯಾಗುತ್ತಿದೆ. ಅಪಘಾತಗಳಾಗುವ ಸಾಧ್ಯತೆಯೂ ತೀವ್ರವಾಗಿದೆ.
‘ಪ್ರವಾಸಿಗರ ಹಿತ ದೃಷ್ಟಿಯಿಂದ ವ್ಯಾಪಾರಕ್ಕೆ ಅನುಕೂಲವಾಗುವಂತಹ ಮೂಲವ್ಯವಸ್ಥೆಗಳನ್ನು ಹಾಗೂ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲು ಸ್ಥಳೀಯ ಅರಣ್ಯ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಮುಂದಾಗಬೇಕು. ಸುರಕ್ಷಿತ ರಸ್ತೆ ಸಂಚಾರ ಕ್ರಮ ಕೈಗೊಳ್ಳಬೇಕು. ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ವಾಹನ ನಿಲುಗಡೆಯನ್ನು 1 ಕಿ.ಮೀ. ದೂರದಲ್ಲೇ ನಿಯಂತ್ರಿಸಬೇಕು. ಇಲ್ಲದಿದ್ದರೆ ಸಮಸ್ಯೆಯಾಗಲಿದೆ’ ಎಂದು ಹಳೇಬೀದಿ ನಿವಾಸಿ ತಿಪ್ಪೆಕಾಳಿ ರಂಗನಾಥ ಆಗ್ರಹಿಸಿದರು.
ವ್ಯಾಪಾರಕ್ಕೆ ತೊಡಕು: ‘ಪ್ರವಾಸಿಗರ ವಾಹನಗಳಿಗೆ ಅರಣ್ಯ ಇಲಾಖೆಯು ಹಾಗೂ ಗ್ರಾಮ ಪಂಚಾಯಿತಿಯು ಸುಂಕ ತೆಗೆದುಕೊಳ್ಳುತ್ತಿರುವುದರಿಂದ ಹೊಸ ವರ್ಷದ ಹಾಗೂ ವಿಶೇಷ ಸಂದರ್ಭದಲ್ಲಿ ವಾಹನ ನಿಲುಗಡೆಗೆ ಹಾಗೂ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಸುಂಕ ಕಟ್ಟಿ ವ್ಯಾಪಾರದ ಹಕ್ಕನ್ನು ಪಡೆದುಕೊಂಡ ವ್ಯಾಪಾರಸ್ಥರಿಗೂ ತೊಡಖಾಗಿದೆ. ಅವರಿಗೂ ವಾಹನ ನಿಲುಗಡೆ ಅಥವಾ ಸೂಕ್ತ ಸ್ಥಳದಲ್ಲಿ ಅವಕಾಶ ಕಲ್ಪಿಸಬೇಕು’ ಎಂದು ತಲಕಾಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಂದರ್ ರಾಜ್ ಒತ್ತಾಯಿಸಿದರು.
‘ಮೂಲಸೌಕರ್ಯ ವಾಹನ ದಟ್ಟಣೆ ನಿಯಂತ್ರಣಕ್ಕೆ ಕ್ರಮ’
‘ನಿಸರ್ಗಧಾಮದಲ್ಲಿ ಸುರಕ್ಷಿತ ವಾಹನ ನಿಲುಗಡೆಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುವ ರೀತಿಯಲ್ಲಿ ಮೂಲಸೌಕರ್ಯವನ್ನು ಒದಗಿಸಲಾಗುತ್ತದೆ. ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆಯಲು ಈಗಾಗಲೇ ತೀರ್ಮಾನಿಸಲಾಗಿದ್ದು ವಾಹನ ದಟ್ಟಣೆ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಆರ್‌ಎಫ್‌ಒ ಉಮೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.